ಪುತ್ತೂರು : ಭರತನಾಟ್ಯದಲ್ಲಿ ಪ್ರಮುಖವಾದ ನೃತ್ಯಬಂಧವಾದ ಪದವರ್ಣಗಳ ಮೂಲ ಆಶಯವನ್ನು ಜಾಗೃತಗೊಳಿಸಲು ಹಾಗೂ ಪದವರ್ಣವನ್ನು ವೀಕ್ಷಿಸಲು ಬೇಕಾಗುವ ತಾಳ್ಮೆಯನ್ನು ಹೆಚ್ಚಿಸಲು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯು ತನ್ನ ಸರಣಿ ಕಾರ್ಯಕ್ರಮ ‘ನೃತ್ಯಾಂತರಂಗ’ದಲ್ಲಿ ಈ ಹೊಸ ಯೋಜನೆಯೊಂದಿಗೆ ‘ವರ್ಣಿಕ’ ಎಂಬ ಶೀರ್ಷಿಕೆಯಡಿ ಎರಡು ಸರಣಿಗಳಲ್ಲಿ ಐದು ಪದವರ್ಣಗಳನ್ನು ಪ್ರಸ್ತುತಪಡಿಸಿತು.
ದಿನಾಂಕ 09-06-2024ರಂದು ಪ್ರಸ್ತುತಗೊಂಡ ‘ವರ್ಣಿಕ- 2’ರಲ್ಲಿ ಮೊದಲಿಗೆ ಸಂಸ್ಥೆಯ ವಿದ್ಯಾರ್ಥಿಗಳಾದ ಕ್ಷಮಾ ರೈ, ಸಾನ್ವಿ ಆನಂದ್, ಜೀವಿಕ ಕಜೆ, ಕ್ಷಮಾ ಕೆ., ಅಪೇಕ್ಷಾ, ಧ್ರುವಿ, ಶ್ರಾವಣಿ, ಸಾನ್ವಿ ಡಿ. ಇವರಿಂದ ಪ್ರಾರ್ಥನೆ ನಡೆಯಿತು. ಹಿರಿಯ ವಿದ್ಯಾರ್ಥಿನಿ ಶ್ರೀಮತಿ ತೇಜಸ್ವಿ ಅಂಬೆಗಲ್ಲು ನಿರೂಪಣೆ ಮತ್ತು ಗಿರೀಶ್ ಕುಮಾರ್ ಶಂಖನಾದ ಹಾಗೂ ಪ್ರೀತಿಕಲಾ ಓಂಕಾರ ನಾದ ಮಾಡಿದರು. ಅಭ್ಯಾಗತರಾದ ಡಾ. ನಿರೀಕ್ಷಾ ಶೆಟ್ಟಿ ದೀಪ ಬೆಳಗುವ ಮೂಲಕ ಉದ್ಘಾಟನೆಗೈದರು. ಕುಮಾರಿ ಮಾತಂಗಿ ಪಂಚಾಂಗ ಶ್ರವಣ ಮಾಡಿದರು. ಕುಮಾರಿ ನಿನಾದ ಎಂ.ಎನ್. ಕಲಾವಿದರನ್ನು ಹಾಗೂ ಕುಮಾರಿ ಮಂದಿರಾ ಕಜೆ ಅಭ್ಯಾಗತರನ್ನು ಪರಿಚಯಿಸಿದರು.
ಮೊದಲ ವರ್ಣ ವಿದುಷಿ ಅಕ್ಷತಾ ಕೆ. ಇವರು ಪೂರ್ವಿಕಲ್ಯಾಣಿರಾಗದ ಪದವರ್ಣ, ಕಲಾವಿದೆ ವಿದುಷಿ ಅಪೂರ್ವಗೌರಿ ದೇವಸ್ಯ ಭೈರವಿರಾಗದ ಪದವರ್ಣ ಮತ್ತು ಗುರು ವಿದ್ವಾನ್ ದೀಪಕ್ ಕುಮಾರ್ ನಾಟಕುರುಂಜಿರಾಗದ ಪದವರ್ಣ ಪ್ರಸ್ತುತಪಡಿಸಿದರು. ಹಿಮ್ಮೇಳದಲ್ಲಿ ನಟುವಾಂಗದಲ್ಲಿ ಗುರು ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಶ್ರೀ ಚಂದ್ರಶೇಖರ ಗುರುವಾಯನಕೆರೆ ಹಾಗೂ ಪಿಟೀಲಿನಲ್ಲಿ ಕುಮಾರಿ ತನ್ಮಯಿ ಉಪ್ಪಂಗಳ ಸಹಕರಿಸಿದ್ದರು.
ಅಭ್ಯಾಗತರಾದ ಮಂಗಳೂರಿನ ದೇರಳೆಕಟ್ಟೆಯ ಕೆ.ಎಸ್. ಹೆಗ್ಡೆ ಇನ್ಟಿಟ್ಯೂಟಿನ ಉಪನ್ಯಾಸಕಿ ಹಾಗೂ ಬಿ.ಸಿ. ರೋಡಿನ ಶ್ರೀ ದುರ್ಗಾ ಡೆಂಟಲ್ ಕ್ಲಿನಿಕ್ ನ ಡಾ. ನಿರೀಕ್ಷಾ ಶೆಟ್ಟಿಯವರು ನೃತ್ಯವು ಯಾವ ರೀತಿಯಲ್ಲಿ ಜೀವನದಲ್ಲಿ ಶಿಸ್ತು ನೀಡುತ್ತದೆ ಹಾಗೂ ಇಂದಿನ ಒತ್ತಡದ ಯುಗದಲ್ಲಿ ಮಾನಸಿಕ ಹಾಗೂ ಶಾರೀರಿಕ ಸ್ವಾಸ್ಥ್ಯ ಉಳಿಸುವಲ್ಲಿ ಸಹಾಯಕವಾಗುತ್ತದೆ ಎಂಬುದಾಗಿ ಕಲೆಯ ಮಹತ್ವವನ್ನು ತಿಳಿಸಿದರು.