ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-94’ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ‘ನಾಟಕಾಷ್ಟಕ’ದ ಆರನೇದಿನದ ಕಾರ್ಯಕ್ರಮ ದಿನಾಂಕ 31 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಾಧಕರನ್ನು ಅಭಿನಂದಿಸಿದ ಶ್ರೀನಿವಾಸ ಸೋಮಯಾಜಿ ಮಾತನಾಡಿ “ಕಲಾ ಪೋಷಕರ ನೆಲೆಯಲ್ಲಿ ‘ಪುರಾಣ ಕಥಾ ಕಲ್ಯಾಣಿ ಆಖ್ಯಾನ’ದಲ್ಲಿ ಪಾತ್ರ ನಿರ್ವಹಿಸಿ ಮನಗೆದ್ದು, ಕಲಾವಿದರ ಶಕ್ತಿಯಾಗಿ ಹೆಸರಾದ ‘ಯಕ್ಷಧಾಮ’ಇದರ ಜನಾರ್ದನ ಹಂದೆ ಹಾಗೂ ಕೋಟ ಸುಬ್ರಾಯ ಆಚಾರ್ ಬಾಲ್ಯದಿಂದಲೂ ಸ್ವತಃ ಕಲಾವಿದರು. ಸಮಾಜದ ಕಲಾವಿದರಿಗಾಗಿ ಹಾಗೂ ಕಲಾ ಸಂಘಟನೆಗಾಗಿ ತಮ್ಮ ದುಡಿಮೆಯ ಒಂದಂಶವನ್ನು ದೇಣಿಗೆಯಾಗಿ ತೆತ್ತು ಸಾಧಕರೆನಿಸಿದವರು. ಇವರನ್ನು ಅಭಿನಂದಿಸುವುದು ಸರ್ವ ಸೂಕ್ತ.” ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಜನಾರ್ದನ ಹಂದೆ “ಬಾಲ್ಯದಿಂದಲೂ ನಾಟಕದಲ್ಲಿ ತೊಡಗಿಕೊಂಡದ್ದರಿಂದ ಕಲಾವಿದರ ಬದುಕನ್ನು ಅರ್ಥೈಸಿಕೊಂಡು, ಸಂಘಟನೆಯ ಕಷ್ಟ ನಷ್ಟಗಳ ಬಗ್ಗೆ ಅರಿವು ಇದ್ದುದರಿಂದ ನಮ್ಮ ಸ್ಪಂದನೆ ಅನಿವಾರ್ಯವಾಗಿ ನಡೆದು ಹೋಗುತ್ತದೆ.” ಎಂದರು.
ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಅರಸರು, ಶ್ರೀಹಿತ್ ಸೋಮಯಾಜಿ, ಪಾಂಡುರಂಗ ಕೊಮೆ, ರಾಜು ಪೂಜಾರಿ ಕೊಮೆ ಮತ್ತು ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.
ಗೌತಮ್ ಬೈಕಾಡಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ರೋಹಿತ್ ಬೈಕಾಡಿ ಹಾಗೂ ರಂಜಿತ್ ಕುಮಾರ್ ಕುಕ್ಕುಡೆ ನಿರ್ದೇಶನದ ಮಂದಾರ ಬೈಕಾಡಿ ಹಾಗೂ ಧಮನಿ ಟ್ರಸ್ಟ್ ತೆಕ್ಕಟ್ಟೆಯ ‘ಪಂಚ(ಮುಖವಾಡ)ತಂತ್ರ’ ಹಾಗೂ ‘ಸೂರ್ಯ ಬಂದ’ ನಾಟಕ ಪ್ರಸ್ತುತಗೊಂಡಿತು.