ಉಡುಪಿ : ಉಡುಪಿಯ ತುಳುಕೂಟದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ನೀಡಲಾದ ಪಣಿಯಾಡಿ ಕಾದಂಬರಿ ಪ್ರಶಸ್ತಿಯನ್ನು ದಿನಾಂಕ 28-05-2023 ಭಾನುವಾರ ಕಿದಿಯೂರು ಹೋಟೆಲ್‌ನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 28ನೇ ದಿವಂಗತ ಎಸ್.ಯು. ಪಣಿಯಾಡಿ ಕಾದಂಬರಿ ಪ್ರಶಸ್ತಿಯನ್ನು ಕನ್ನಡ-ತುಳು ಸಾಹಿತಿ ಯಶೋದಾ ಮೋಹನ್ ಇವರ ‘ದೇರಮಾಮುನ ದೂರನೋಟೊಲು’ ಕೃತಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಸಕ ಯಶಪಾಲ್ ಎ. ಸುವರ್ಣ ಅವರು ಯಶೋದಾ ಮೋಹನ್ ಬರೆದಿರುವ ‘ದೇರಮಾಮುನ ದೂರನೋಟೊಲು’ ಕಾದಂಬರಿಯನ್ನು ಬಿಡುಗಡೆಗೊಳಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, “ತುಳು ಭಾಷೆಗೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಸಾಕಷ್ಟು ಬೇಡಿಕೆ, ಹೋರಾಟಗಳು ನಡೆಯುತ್ತಿದ್ದು, ತುಳು ಭಾಷೆಗೆ ನ್ಯಾಯ ಸಿಗುವ ಕೆಲಸ ಮಾಡುವೆ. ತುಳುನಾಡಿನಲ್ಲಿ ಹುಟ್ಟಿ ತುಳುಕೂಟದ ಸದಸ್ಯನಾಗಿರುವ ನಾನು ನಿಮ್ಮೆಲ್ಲರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ, ಆಶೀರ್ವಾದ ಬೇಕಿದೆ” ಎಂದರು.
ಜಾನಪದ ವಿದ್ವಾಂಸ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ.ಗಣನಾಥ ಎಕ್ಕಾರ್ ಕೃತಿ ಪರಿಚಯ ಮಾಡುತ್ತಾ “ತುಳುನಾಡು ಸಂಸ್ಕೃತಿ ಮತ್ತು ವೈಶಿಷ್ಟತೆಯನ್ನು ತಿಳಿಸುವ ಕೆಲಸ ಹಲವಾರು ಮಹನೀಯರಿಂದ ನಡೆದಿದೆ. ಈ ಕಾದಂಬರಿ ತುಳುನಾಡ ಸಂಸ್ಕೃತಿಯ ಶ್ರೀಮಂತಿಕೆಯನ್ನು ಸಾರುವ ಅಂಶಗಳು ಗಮನಾರ್ಹವಾಗಿದೆ ಎಂದು ಕಾದಂಬರಿಯ ಪ್ರಮುಖ ಅಂಶಗಳನ್ನು ಈ ವಿಶ್ಲೇಷಿಸಿದರು.
ಅಧ್ಯಕ್ಷತೆ ವಹಿಸಿದ್ದ ತುಳುಕೂಟ ಉಡುಪಿ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ತುಳುಕೂಟ ಸ್ಥಾಪಕಾಧ್ಯಕ್ಷ ಡಾ. ಭಾಸ್ಕರಾನಂದ ಕುಮಾರ್, ಉದ್ಯಮಿ ಯು.ವಿಶ್ವನಾಥ ಶೆಣೈ, ಅಖಿಲ ಭಾರತ ತುಳು ಒಕ್ಕೂಟದ ಮಹಿಳಾ ವಿಭಾಗದ ಸಂಚಾಲಕಿ ವಿಜಯಲಕ್ಷ್ಮೀ ಶೆಟ್ಟಿ, ತುಳುಕೂಟ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಚೈತನ್ಯ ಎಂ.ಜಿ. ಉಪಸ್ಥಿತರಿದ್ದರು.
ಶಾಸಕ ಯಶಪಾಲ್. ಎ. ಸುವರ್ಣ, ದಿ. ಎಸ್.ಯು. ಪಣಿಯಾಡಿ ಅವರ ಮಗಳು, ರಾಷ್ಟ್ರಪ್ರಶಸ್ತಿ ವಿಜೇತೆ ಚಲನಚಿತ್ರ ನಟಿ ಹರಿಣಿ ರಾವ್, ಯೋಗಪಟು ಗಿನ್ನಿಸ್ ದಾಖಲೆಗೈದ ತನುಶ್ರೀ ಪಿತ್ರೋಡಿ ಅವರನ್ನು ಸನ್ಮಾನಿಸಲಾಯಿತು. ರತ್ನಾಕರ್ ಇಂದ್ರಾಳಿ ಸನ್ಮಾನ ಪತ್ರ ವಾಚಿಸಿದರು. ಯಶೋದಾ ಕೇಶವ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಚೈತನ್ಯ ಎಂ.ಜಿ. ವಂದಿಸಿದರು.