ಬಂಟ್ವಾಳ : ಪರಾರಿಗುತ್ತು ಮನೆ ವಠಾರದಲ್ಲಿ ದಿನಾಂಕ 28-04-2023ರಂದು ಜರಗಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಬಯಲಾಟ ಸಂದರ್ಭ ಏರ್ಪಡಿಸಲಾದ ‘ಪರಾರಿಗುತ್ತು ಬಾಲಕೃಷ್ಣ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಹಾಗೂ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಕಲೆಯಿಂದಾಗಿ ಕಲಾವಿದನಿಗೆ ಬದುಕು; ಕಲಾವಿದನಿಂದ ಕಲೆಗೆ ಬೆಳಕು. ಆದ್ದರಿಂದ ಕಲೆ ಮತ್ತು ಕಲಾವಿದರ ನಡುವೆ ಅವಿನಾಭಾವ ಸಂಬಂಧವಿದೆ. ಹಿರಿಯರನ್ನು ಗೌರವಿಸುವುದು ಮತ್ತು ಕಲೆಯನ್ನು ಆರಾಧಿಸುವುದು ಇವೆರಡೂ ಪವಿತ್ರ ಕಾರ್ಯಗಳು.” ಎಂದವರು ಬಯಲಾಟದ ಸೇವಾದಾರರನ್ನು ಅಭಿನಂದಿಸಿದರು.
ಪೊಳಲಿ ಶ್ರೀ ರಾಮಕೃಷ್ಣ ತಪೋವನ ಆಶ್ರಮದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ರತ್ನಾಕರ ಶೆಟ್ಟಿ ಮುಂಡಡ್ಕಗುತ್ತು ಮತ್ತು ರಾಮಕೃಷ್ಣ ಆಳ್ವ ಪೊನ್ನೋಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಮರಣೆ – ಪ್ರಶಸ್ತಿ ಪ್ರದಾನ:
ಮಂಗಳೂರು ಕೆನರಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಜಿ.ಶಂಕರ ಶೆಟ್ಟಿ ಗುಂಡಿಲಗುತ್ತು ದಿ.ಬಾಲಕೃಷ್ಣ ಶೆಟ್ಟರ ಕುರಿತು ಸಂಸ್ಮರಣಾ ಭಾಷಣ ಮಾಡಿದರು. ಹಿರಿಯ ವೈದಿಕ ವಿದ್ವಾಂಸ ಹಾಗೂ ಕೊಳಕೆ ದೇವಳದ ಪ್ರಧಾನ ಅರ್ಚಕ ಮಹಾಬಲೇಶ್ವರ ಮಯ್ಯ ಮತ್ತು ಕಟೀಲು 2ನೇ ಮೇಳದ ಪ್ರಬಂಧಕ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಶ್ರೀಧರ ಪಂಜಾಜೆಯವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಬಯಲಾಟದ ಸೇವಾಕರ್ತರಾದ ದಿವಾಕರ ಶೆಟ್ಟಿ ಪರಾರಿಗುತ್ತು ಸ್ವಾಗತಿಸಿ, ಪಿ. ಕಿಶೋರ್ ಭಂಡಾರಿ ಬೆಳ್ಳೂರು ಸನ್ಮಾನ ಪತ್ರ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಶಂಕರ್ ಶೆಟ್ಟಿ ಪರಾರಿಗುತ್ತು ವಂದಿಸಿದರು. ಕಟೀಲು ಮೇಳದ ಕಲಾವಿದರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಿತು.