ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಮಂಗಳೂರು ಘಟಕದ ಪಂಚಮ ವಾರ್ಷಿಕ ಸಮಾರಂಭವು ಪುರಭವನದಲ್ಲಿ ದಿನಾಂಕ 23-05-2024ರಂದು ಜರಗಿತು. ಈ ಕಾರ್ಯಕ್ರಮ ಉದ್ಘಾಟಿಸಿದ ಜಪ್ಪು ಅರಕೆರೆಬೈಲ್‌ನ ಅಂಬಾ ಮಹೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷ ಸೀತಾರಾಮ್ ಎ. ಮಾತನಾಡಿ, “ಯಕ್ಷಗಾನ ಕಲಾವಿದರ ಆಶಾಕಿರಣವಾಗಿರುವ ಯಕ್ಷಧ್ರುವ ಸಂಘಟನೆಯ ಸೇವಾ ಕಾರ್ಯ ಸ್ತುತ್ಯರ್ಹವಾಗಿದೆ” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಜಪ್ಪು ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಮಾತನಾಡಿ “ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ದೇಶ-ವಿದೇಶಗಳಲ್ಲಿರುವ ವಿವಿಧ ಘಟಕಗಳಲ್ಲಿ ಮಂಗಳೂರು ಘಟಕವು ಸದಾ ಮುಂಚೂಣಿಯಲ್ಲಿದ್ದು, ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿದೆ” ಎಂದರು.
ಒಡಿಯೂರು ಶ್ರೀ ಗುರುದೇವಾನಂದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ, ಉದ್ಯಮಿಗಳಾದ ಗಣೇಶ್ ಶೆಟ್ಟಿ ಮಿಜಾರು, ಕಲ್ಲಾಡಿ ಪಾತೂರು ಧೂಮಾವತಿ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ರೈ, ಲಯನ್ಸ್ ಕ್ಲಬ್ ಕಲ್ಪವೃಕ್ಷ-ಪಂಪ್ ವೆಲ್‌ನ ಸ್ಥಾಪಕಾಧ್ಯಕ್ಷ ರಾಜೇಶ್ ಶೆಟ್ಟಿ ಶಬರಿ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ಶಾಸಕ ವೇದವ್ಯಾಸ ಕಾಮತ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿ.ಎ. ಸುದೇಶ್ ರೈ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಪ್ರಧಾನ ಸಂಚಾಲಕರಾದ ರವಿರಾಜ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಮಂಗಳೂರು ಘಟಕದ ನಿ.ಪೂ. ಅಧ್ಯಕ್ಷ ಪ್ರದೀಪ್ ಆಳ್ವ ಕದ್ರಿ, ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮಾರ್, ಮಹಿಳಾ ಘಟಕದ ಸಂಚಾಲಕಿ ಅನಿತಾ ಪಿಂಟೋ, ಕೋಶಾಧಿಕಾರಿ ಗೋಪಿನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಖ್ಯಾತ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಯಕ್ಷಗಾನ ಕಲಾವಿದ ಲೋಕೇಶ್ ಮಲ್ಲ, ನಾಟಕಕಾರ ಸುರೇಂದ್ರ ಬಾಬುಗುಡ್ಡೆ, ದೈವ ನರ್ತಕ ಉಮೇಶ್ ಇವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಮೋಹನ್ ಕೊಪ್ಪಳ ಹಾಗೂ ಪಟ್ಲ ಫೌಂಡೇಶನ್ ನ ನೂತನ ಟ್ರಸ್ಟಿಗಳನ್ನು ಅಭಿನಂದಿಸಲಾಯಿತು.
ಕೇಂದ್ರೀಯ ಸಮಿತಿಗೆ ಮಂಗಳೂರು ಘಟಕದಿಂದ ದೇಣಿಗೆ ನೀಡಲಾಯಿತು. ಮಂಗಳೂರು ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಸ್ವಾಗತಿಸಿದರು. ಟ್ರಸ್ಟಿನ ಕೇಂದ್ರೀಯ ಸಮಿತಿಯ ಜತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ ಪ್ರಸ್ತಾವನೆಗೈದರು. ಸತೀಶ್ ಶೆಟ್ಟಿ ಕೊಡಿಯಾಲಬೈಲು ನಿರೂಪಿಸಿ, ಮಹಿಳಾ ಘಟಕದ ಸಂಚಾಲಕಿ ಆರತಿ ಆಳ್ವ ವಂದಿಸಿದರು. ಬಳಿಕ ಪಾವಂಜೆ ಮೇಳದವರಿಂದ ‘ಅಯೋಧ್ಯಾ ದೀಪ’ ಯಕ್ಷಗಾನ ಪ್ರದರ್ಶನಗೊಂಡಿತು.