05 ಏಪ್ರಿಲ್ 2023, ಮುಡಿಪು: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇವರು ಮಂಗಳೂರು ವಿಶ್ವವಿದ್ಯಾಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಂಯೋಜನೆಯಲ್ಲಿ ನಿನಾದ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಪಾವಂಜೆ ನಿನಾದ ರಂಗಮಂದಿರದಲ್ಲಿ ನಡೆದ ‘ಭಾರತದ ಸಂತ ಸತ್ವ ಶೋಧ-ನಿನಾದ ನಂದಿನಿಗೊಂದು ಸುತ್ತು-ನಿನಾದ ನೆನಪು” ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ “ನಾರಾಯಣ ಗುರುಗಳು ಕಂಡ ಮನುಷ್ಯ ಧರ್ಮದ ತತ್ವ ತುಳುನಾಡಿನ ಮಣ್ಣಿನಲ್ಲಿದೆ. ಅದರೊಳಗೆ ಭಾರತದ ಸಂತ ಸತ್ವ ಅಡಗಿದೆ. ಕರಾವಳಿ ಕರ್ನಾಟಕ ದೈವ ದೇವರುಗಳ ನೆಲೆ. ಇಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕೊಡುವ ಆಯುರ್ವೇದ ಸತ್ವ ಋಷಿ ಪರಂಪರೆ ಮತ್ತು ಕೃಷಿ ಪರಂಪರೆಯಿಂದ ಪಕ್ವಗೊಂಡಿದೆ” ಎಂದರು.
ಉದ್ಯಮಿ ಕಡಂಬೋಡಿ ಮಹಾಬಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ‘ಶಾಂತಿಯ ಕ್ರಾಂತಿ-ನಾರಾಯಣ ಗುರು’ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.
ಓರಿಯಂಟಲ್ ವಿಮಾ ಕಂಪನಿಯ ಪ್ರಬಂಧಕ ಯಾದವ ದೇವಾಡಿಗ, ಕಾಟಿಪಳ್ಳ ನಾರಾಯಣ ಗುರು ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಪಿ. ದಯಾಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮತ್ತು ತುಳುನಾಡಿನ ಜನಪದ ಕ್ರೀಡೆ ತಪ್ಪಂಗಾಯಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ನಂದಿನಿಗೊಂದು ಸುತ್ತು ಕಾರ್ಯಕ್ರಮದಲ್ಲಿ ಗ್ರಾಮೀಣ ಪರಿಸರದ ಜಾನಪದ ಮತ್ತು ಪೌರಾಣಿಕ ಹಿನ್ನೆಲೆಯ ವೈಶಿಷ್ಟ್ಯವನ್ನು ವಿವರಿಸಲಾಯಿತು.
ಕುಸುಮಾ ಮಹಾಬಲ ಪೂಜಾರಿ, ಗುಣವತಿ ರಮೇಶ್, ಪುಷ್ಪಲತಾ ರಾವ್, ಅನು ಕಡಂಬೋಡಿ ಉಪಸ್ಥಿತರಿದ್ದರು. ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಡಾ. ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿ, ಉಪನ್ಯಾಸಕಿ ಅನು ಸಂಕಮಾರ್ ಕಾರ್ಯಕ್ರಮ ನಿರ್ವಹಿಸಿ, ಭವ ಸಂಕಮಾರ್ ವಂದಿಸಿದರು.