ಸಾಗರ: ಸಾಗರದ ಎನ್.ಎಸ್ ಬಡಾವಣೆಯ ಭೂಮಿ ರಂಗಮನೆಯಲ್ಲಿ ‘ಸ್ಪಂದನ’ ರಂಗ ತಂಡ ರಂಗಕರ್ಮಿ ಎಸ್. ಮಾಲತಿ ಇವರ ಸ್ಮರಣಾರ್ಥ ಆಯೋಜಿಸಿರುವ ‘ಪಯಣ’ ರಂಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 18-11-2023ರಂದು ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಪ್ರಸಾದನ ಕಲಾವಿದ ಪುರುಷೋತ್ತಮ ತಲವಾಟಿ ಮಾತನಾಡಿ “ರಂಗಭೂಮಿ, ಸಿನಿಮಾ, ಧಾರವಾಹಿ ಹಾಗೂ ಸಾಹಿತ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಎಸ್. ಮಾಲತಿ ಅವರು ಮಹಿಳೆಯರು ಸಂಸ್ಕೃತಿಕವಾಗಿ ಕ್ರಿಯಾಶೀಲರಾಗಿರಬೇಕು ಎಂದು ಬಯಸಿದ್ದರು. ಇಂತಹ ಶಿಬಿರಗಳ ಮೂಲಕ ಅವರ ಆಶಯ ಈಡೇರಲಿದೆ.” ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಂಗ ನಿರ್ದೇಶಕ ಬಿ.ಆರ್.ವಿಜಯವಾಮನ್ ಶಿವಿರವನ್ನು ಉದ್ದೇಶಿಸಿ “ರಂಗ ಭೂಮಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೆ ಈ ಮಾಧ್ಯಮದಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂಬ ನಂಬಿಕೆ ಇರಬೇಕಾದದ್ದು ಮುಖ್ಯವಾದ ಸಂಗತಿಯಾಗಿದೆ. ರಂಗಭೂಮಿ ಎಂಬುದು ಕೇವಲ ಮನೋರಂಜನೆಗೆ ಸೀಮಿತವಾದ ಮಾಧ್ಯಮವಲ್ಲ, ರಂಜನೆಯ ಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ವ್ಯಕ್ತಿತ್ವ ವಿಕಸನದ ಮೂಲಕ ಸಮುದಾಯದ ಬೆಳವಣಿಗೆಯನ್ನು ಬಯಸುವುದು ಈ ಮಾಧ್ಯಮದ ಉದ್ದೇಶವಾಗಿದೆ. ಹೆಣ್ಣು ಮಕ್ಕಳು ರಂಗಭೂಮಿ ಪ್ರವೇಶಿಸಲು ಹಿಂಜರಿಯುತ್ತಿದ್ದ ಕಾಲದಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ರಂಗಭೂಮಿಯಲ್ಲಿ ಪದವಿ ಪಡೆದ ಹೆಗ್ಗಳಿಕೆ ಎಸ್.ಮಾಲತಿ ಅವರದ್ದು. 70ರ ದಶಕದಲ್ಲಿ ಕರ್ನಾಟಕದಲ್ಲಿ ರಂಗಭೂಮಿ ಮೂಲಕ ನಡೆದ ಚಳವಳಿಯನ್ನು ಹುಟ್ಟು ಹಾಕಿದವರಲ್ಲಿ ಮಾಲತಿ ಕೂಡ ಪ್ರಮುಖರಾಗಿದ್ದಾರೆ.” ಎಂದು ಎಸ್.ಮಾಲತಿ ಅವರನ್ನು ನೆನಪಿಸಿಕೊಂಡು ಮಾತನಾಡಿದರು. ಸ್ಪಂದನ ರಂಗ ತಂಡದ ಎಂ. ವಿ. ಪ್ರತಿಭಾ, ಶಿವಕುಮಾರ್ ಉಳವಿ, ಉದಯ್ ಸೊರಬ ಹಾಗೂ ಪವನ್ ಉಪಸ್ಥಿತರಿದ್ದರು.
ಈ ಶಿಬಿರವು ದಿನಾಂಕ 18-11-2023 ರಿಂದ 02-12-2023ರ ವರೆಗೆ ನಡೆಯಲಿದೆ.