ಕಾಸರಗೋಡು : ಇತ್ತೀಚೆಗೆ ದೀಪದ ಬೆಳಕಿನ ಯಕ್ಷಗಾನ ಎಂಬ ವಿನೂತನ ಪ್ರಯೋಗ ನಡೆಸಿ ಸೈಯೆನಿಸಿದ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಹಲವಾರು ಮೈಲಿಗಲ್ಲುಗಳನ್ನು ದಾಟಿದೆ. ಇದೀಗ ಸಂಸ್ಥೆಯು ಮತ್ತೊಂದು ದಿಟ್ಟ ಹೆಜ್ಜೆಯಿಡಲು ಸಿದ್ಧವಾಗಿದೆ. ಗಡಿನಾಡು ಕಾಸರಗೋಡಿನ ಕುಂಬಳೆ ಸಮೀಪ ನಾರಾಯಣಮಂಗಲದ ಕಿನ್ನಿಮಾಣಿ ಪೂಮಾಣಿ ಕಟ್ಟೆಯಲ್ಲಿ ಇನ್ನೊಂದು ವಿಶಿಷ್ಟ ಪ್ರಯೋಗ ನಡೆಯಲಿದೆ. ಯಕ್ಷ ಗುರು ಶ್ರೀಯುತ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರ ಮಾರ್ಗದರ್ಶನದಲ್ಲಿ ‘ದೊಂದಿ ಬೆಳಕಿನ ಯಕ್ಷಗಾನ’ ಪ್ರದರ್ಶನಕ್ಕೆ ರಂಗಸಿರಿಯ ತಂಡವು ಸಿದ್ಧವಾಗಿದೆ. ಯಕ್ಷಗಾನ ಕಲಾಭಿಮಾನಿಗಳಿಗೆ ಇದೊಂದು ಅಪೂರ್ವ ಸುವರ್ಣಾವಕಾಶವಾಗಿದೆ. ಯಕ್ಷಗಾನದ ಗತವೈಭವವನ್ನು ಮರಳಿ ಕಾಣುವ ಪ್ರಯತ್ನವೆಂಬ ನಿಟ್ಟಿನಲ್ಲಿ ಇದು ಮಹತ್ವ ಪಡೆದಿದೆ.
ದಿನಾಂಕ 22 ಫೆಬ್ರವರಿ 2025ರಂದು ರಾತ್ರಿ 10-00 ಗಂಟೆಗೆ ಯಕ್ಷಗಾನ ಆರಂಭಗೊಳ್ಳಲಿದ್ದು, ‘ಗಿರಿಜಾ ಕಲ್ಯಾಣ’ ಹಾಗೂ ‘ಪುರುಷಾಮೃಗ’ ಎಂಬ ಪುರಾಣ ಕಥಾನಕಗಳ ಪ್ರಸ್ತುತಿ ನಡೆಯಲಿದೆ. ಪರಂಪರೆಯ ದೇವೇಂದ್ರ ಒಡ್ಡೋಲಗದ ಗಾಂಭೀರ್ಯ, ಮನ್ಮಥ ದಹನದ ಪ್ರಸ್ತುತಿ, ಹನುಮ ಒಡ್ಡೋಲಗಗಳು, ಸಭಿಕರ ಮಧ್ಯದಿಂದೆದ್ದು ಬರುವ ಕೆಲವು ವೇಷಗಳ ಅಬ್ಬರ ಇತ್ಯಾದಿ ಆಕರ್ಷಣೆಗಳಿರಲಿವೆ. ನವರಸ ಸಮ್ಮಿಳಿತದೊಂದಿಗೆ ಈ ಕಾರ್ಯಕ್ರಮ ಜನಮೆಚ್ಚುಗೆ ಗಳಿಸುವ ನಿರೀಕ್ಷೆಯಿದೆ. ಉತ್ತಮ ಹಿಮ್ಮೇಳ, ತೆರೆದ ಬಯಲಿನಲ್ಲಿ ರಂಗಸ್ಥಳ, ಪಾರಂಪರಿಕ ರಂಗಸಜ್ಜಿಕೆಗಳು ಇರಲಿವೆ. ವಿದ್ಯಾರ್ಥಿ ಕಲಾವಿದರು ನೇಪಥ್ಯದಲ್ಲಿ ಬಣ್ಣಗಾರಿಕೆಯನ್ನು ದೀಪದ ಹಿತಮಿತ ಬೆಳಕಿನಲ್ಲಿ ಕಡ್ಡಿಗಳನ್ನಷ್ಟೇ ಉಪಯೋಗಿಸಿ ಸ್ವತ: ಮಾಡಿಕೊಳ್ಳಲಿದ್ದಾರೆ. ಕಲಾವಿದರಿಗೂ ಪ್ರೇಕ್ಷಕರಿಗೂ ವಿಶಿಷ್ಟ ಅನುಭೂತಿ ನೀಡಬಹುದಾಗಿದೆ. ಬಹುಸಂಖ್ಯೆಯಲ್ಲಿ ಪ್ರೇಕ್ಷಕರು ಬರಬಹುದೆಂಬ ನೀರೀಕ್ಷೆಯಿದೆ. ಹೆಚ್ಚಿನ ಮಾಹಿತಿಗಾಗಿ 9633876833ನ್ನು ಸಂಪರ್ಕಿಸಬಹುದಾಗಿದೆ.