12 ಏಪ್ರಿಲ್ 2023, ಕಾಸರಗೋಡು : ರಂಗ ಚೇತನ (ರಿ) ಕಾಸರಗೋಡು ಇದರ ನೇತೃತ್ವದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಸಹಾಬಾಗಿತ್ವದಲ್ಲಿ ದಿನಾಂಕ 11-04-2023ರಂದು ಪೆರ್ಮುದೆ ಶಾಲೆಯಲ್ಲಿ ಜರಗುತ್ತಿರುವ ‘ಚಿತ್ತಾರ’ ರಂಗದ ರಂಗೋಲಿ ತ್ರಿದಿನ ಸಹವಾಸ ಶಿಬಿರದ ಎರಡನೇ ದಿನ ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿ ಮಾತನಾಡಿದ ಚಲನಚಿತ್ರ ನಟ, ನೀನಾಸಂ ಕಲಾವಿದರಾದ ಬಾಸುಮ ಕೊಡಗುರವರು,”ರಂಗಭೂಮಿ ಚಟುವಟಿಕೆಗಳು ನಿರಂತರವಾಗಿ ಜರಗಬೇಕು. ಆ ಮೂಲಕ ಮಕ್ಕಳ ರಂಗಭೂಮಿ ಬೆಳೆಯಬೇಕು. ಇದಕ್ಕೆ ಸಹವಾಸ ಶಿಬಿರಗಳು ವೇದಿಕೆಯಾಗಲಿ” ಎಂದು ತಿಳಿಸಿದರು. ತದನಂತರ ಅಭಿನಯದ ವಿವಿಧ ಮಜಲುಗಳ ಬಗ್ಗೆ ಪರಿಚಯಿಸಿದರು. ಕಾವ್ಯ ವಾಣಿಶ್ರೀ ಕೊಡಗುರವರಿಂದ ರಂಗ ಗೀತೆಗಳ ಗಾಯನ ಶಿಬಿರಾರ್ಥಿಗಳಿಗೆ ಮುದವನ್ನು ನೀಡಿತು. ಶಿಬಿರದ ಎರಡನೇ ದಿನ ಪ್ರಾರಂಭದಲ್ಲಿ ಶ್ರೀಮತಿ ಗಾಯತ್ರಿ ಟೀಚರ್ ಪೆರ್ಮುದೆಯವರ ನೇತೃತ್ವದಲ್ಲಿ ಸರಳ ವ್ಯಾಯಾಮ ಹಾಗೂ ಯೋಗಾಭ್ಯಾಸ ಜರಗಿತು. ನಂತರ ಮಂಗಳೂರು ಆಕಾಶವಾಣಿಯ ಶ್ರೀಮತಿ ಅಕ್ಷತರಾಜ್ ಪೆರ್ಲ ರವರಿಂದ ಬಾನುಲಿ ರೇಡಿಯೋ ನಾಟಕದ ಬಗ್ಗೆ ಮಾಹಿತಿಯನ್ನು ನೀಡಿದರು. ಮಧ್ಯಾಹ್ನದ ಊಟದ ವಿರಾಮದ ಬಳಿಕ ಯುವ ಸಾಹಿತಿ, ರಂಗ ಕರ್ಮಿ ದಿವಾಕರ ಬಲ್ಲಾಳ್ ಮಂಗಳೂರು “ಹನಿ ಹನಿ ನೀರ ಹನಿ” ಅಭಿನಯ ಸಂಭಾಷಣೆ, ರಂಗ ನಡೆ ಇತ್ಯಾದಿಗಳ ಮೂಲಕ ರಂಗಾಟ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ತರಗತಿ ನಡೆಸಿಕೊಟ್ಟರು. ಚಾ ವಿರಾಮದ ಬಳಿಕ ಖ್ಯಾತ ಪಕ್ಷಿ ತಜ್ಞ, ಶಿಕ್ಷಕ ರಾಜು ಕಿದೂರುರವರಿಂದ ಪಕ್ಷಿಲೋಕದ ಕುರಿತು ತರಗತಿ ನಡೆಯಿತು. ಬಳಿಕ ಸಂಪನ್ಮೂಲ ವ್ಯಕ್ತಿ ಹಾಗೂ ಸಂಘದ ಸದಸ್ಯರ ನೇತೃತ್ವದಲ್ಲಿ ಪೊಸಡಿ ಗುಂಪೆಗೆ ಚಾರಣ ಯಾತ್ರೆಯನ್ನು ಕೈಗೊಂಡಿತು. ಚಾರಣ ಹಾದಿ ಮಧ್ಯೆ ವಿವಿಧ ರೀತಿಯ ಪಕ್ಷಿಗಳ ಕುರಿತು ಸಸ್ಯ ಸಂಪತ್ತಿನ ಕುರಿತು ರಾಜು ಕಿದೂರುರವರು ಮಾಹಿತಿ ನೀಡಿದರು. ಶಿಬಿರಾರ್ಥಿಗಳು ಸೂರ್ಯಾಸ್ತಮಾನವನ್ನು ವೀಕ್ಷಿಸಿ, ಗಾಳಿಪಟ ಹಾರಿಸಿ ತಂಡವು ಹಿಂತಿರುಗಿತು. ಹಾದಿ ಮಧ್ಯೆ ಹಸೀನಾ ಟೀಚರ್ ಪೆರ್ಮುದೆ ಹಾಗೂ ಕುಟುಂಬದವರು ಇಫ್ತಾರ್ ಉಪಹಾರ ನೀಡಿ ಸತ್ಕರಿಸಿದರು. ಊಟದ ವಿರಾಮದ ಬಳಿಕ ನಡೆದ ಶಿಬಿರಾಗ್ನಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು BRCಯ ಸಂಪನ್ಮೂಲ ವ್ಯಕ್ತಿ, ರಂಗ ಕರ್ಮಿ ಶ್ರೀಯುತ ಹರೀಶ್ ಮಾಸ್ಟರ್ ಅಂಗಡಿಪದವುರವರು ನೆರವೇರಿಸಿ ಮಾತನಾಡಿ,”ನಮ್ಮಲ್ಲಿರುವ ಕೆಟ್ಟ ಚಿಂತೆಗಳು ತೊಲಗಿ, ಉತ್ತಮ ಪೌರರಾಗಿ ಸಮಾಜಮುಖಿ ಕೆಲಸಕಾರ್ಯಗಳಲ್ಲಿ ತೊಡಗೋಣ” ಎಂದು ಕರೆನೀಡಿದರು. ಬಳಿಕ ಶಿಬಿರಾಗ್ನಿಯ ಅಂಗವಾಗಿ ಮಕ್ಕಳು ಹಾಗೂ ಅಧ್ಯಾಪಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಶಿಬಿರದ ನೇತೃತ್ವವನ್ನು ಸಂಘದ ಪದಾಧಿಕಾರಿಗಳಾದ ಯತೀಶ್ ಕುಮಾರ್ ರೈ, ಸದಾಶಿವ ಬಾಲಮಿತ್ರ, ಅಶೋಕ್ ಕೊಡ್ಲಮೊಗರು, ಶಿವರಾಮ್ ಕಾಟುಕುಕ್ಕೆ, ಗೋಪಾಲ ಮಾಸ್ಟರ್ ಕಾಟುಕುಕ್ಕೆ, ವಸಂತ ಮೂಡಂಬೈಲ್, ಶಿವ ಚೆರುಗೋಳಿ, ಪ್ರಸಾದ್ ಮುಗು, ಮೆಲ್ವಿನ್ ಪೆರ್ಮುದೆ, ದೇವಾನಂದ ಮಾಸ್ಟರ್, ಹರಿನಾಥ್ ಕುಬಣೂರು, ಜಯ ಪ್ರಸಾದ್, ಜಯಪ್ರಕಾಶ್ ಬೇಳ, ಚಂದ್ರಿಕಾ ಟೀಚರ್ ಮೊದಲಾದವರು ವಹಿಸಿದರು. ಶ್ರೀಮತಿ ಕುಸುಮ ಮತ್ತು ರಾಧಿಕಾರವರ ಶುಚಿ ರುಚಿಯಾದ ಅಡುಗೆ ಶಿಬಿರದ ಮೆರುಗನ್ನು ಹೆಚ್ಚಿಸಿತು.