ಮಧುರ ಸ್ವರಾಲಾಪನೆಯ ಏರಿಳಿತಗಳು
ಜೀವ ಜಂಜಾಟಗಳ ನಿನ್ನೆ ನಾಳೆಗಳಂತೆ
ಮೀಟುವ ತಂತಿಗೆ ನಾದ ಮಿಡಿಯುವ ಹಾಗೆ
ಎದೆಯ ತುಡಿತಕೆ ನಾಡಿ ಮಿಡಿಯುತ್ತದೆ ;
ನಾದ ತಂತುಗಳಿಗೆ ಸ್ಪಂದಿಸದ ತಾಳ
ಸ್ವರಕೀರ್ತನೆಯ ದಿಕ್ಕು ತಪ್ಪಿಸುವ ಹಾಗೆ
ಸ್ಪರ್ಶಾನುಭವ ಸೂಕ್ಷ್ಮವರಿಯದ ಮನಸು
ಅಂತರ್ಭಾವದ ಹರಿವಿಗೆ ಮುಳುವಾಗುತ್ತದೆ ;
ಸ,ರಿ,ಗ,ಮ,,,,ನಾದ ತರಂಗಿಣಿಯ ಸುರಭಿ
ಶ್ರೋತೃಗಳ ಹೃನ್ಮನಗಳ ತಣಿಸುವ ಹಾಗೆ
ಸ್ನೇಹ ವಾತ್ಸಲ್ಯದೊಲುಮೆಯ ನುಡಿಗಳು
ಬೆಸೆದ ಸಂಬಂಧಗಳಿಗೆ ಮುದ ನೀಡುತ್ತವೆ ;
ಲಯ ತಪ್ಪಿದ ರಾಗ ಭಾವಗಳ ಹಿಮ್ಮೇಳದಲಿ
ಸ್ವರ ಸಂಕುಲಗಳ ಕ್ಷಣ ಭಂಗುರವಾದ ಹಾಗೆ
ಸದ್ಭಾವನೆಯಿಲ್ಲದ ಆಡಂಬರದ ಮಾತುಗಳು
ಹಸಿರು ಹೊದಿಕೆಯ ಹಾದಿಯನು ಬರಡಾಗಿಸುತ್ತವೆ ;
ಉಚ್ಛ ಸ್ಥಾಯಿಯ ಮಧುರ ಗಾನ ಸುರಭಿಗೆ
ಮಧ್ಯ ಸ್ಥಾಯಿಯ ವಾದ್ಯ ಇಂಪುಣಿಸುವ ಹಾಗೆ
ಉತ್ಸಾಹದ ಹೆಜ್ಜೆಗಳಿಗೆ ಸ್ಫೂರ್ತಿಯ ಹೆಗಲು
ಸುಪ್ತ ಸಂವೇದನೆಗಳನು ಚುರುಕಾಗಿಸುತ್ತವೆ ;
ಬದುಕು ಸಂಗೀತವಾದಾಗ ಹೆಜ್ಜೆ ಪಲ್ಲವಿಸುತ್ತದೆ
ಮಿಡಿವ ನಾಡಿಯ ಶೃತಿಲಯಗಳು ನರ್ತಿಸುತ್ತವೆ
ತಾಳ ತಪ್ಪಿದ ಜೀವನದ ಹೆಗ್ಗುರುತುಗಳ ಆಳ
ಸುಶ್ರಾವ್ಯ ನಾದತರಂಗಗಳನು ಅಳಿಸಿಹಾಕುತ್ತವೆ ;
ದಿಗಂತದೆಡೆ ಸಾಗುವ ದೀರ್ಘ ಪಯಣದಲಿ
ವೈರುಧ್ಯಗಳ ಮೈಲಿಗಲ್ಲುಗಳು ಸಾವಿರ
ತೊರೆದು ಜೀವಿಸಬಹುದೇ ರಾಗ ಸಂಗಮದಲ್ಲಿ ?
ನಾ ದಿವಾಕರ