ಪುತ್ತೂರು : ಬೆಂಗಳೂರಿನ ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ ಮತ್ತು ರಾಸಾ ಪಬ್ಲಿಕೇಷನ್ಸ್ ವತಿಯಿಂದ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾಜ್ಯದ ವಿವಿಧ ಕ್ಷೇತ್ರಗಳ ಸೇವಾ ಸಾಧಕರಿಗೆ ‘ಕರ್ನಾಟಕ ಸೇವಾರತ್ನ ಪ್ರಶಸ್ತಿ-2024’ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 07-04-2024ರಂದು ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಉಮೇಶ್ ನಾಯಕ್ ವಹಿಸಲಿದ್ದು, ಪುತ್ತೂರಿನ ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕರಾದ ರೇ. ವಿಜಯ ಹಾರ್ವಿನ್ ಮತ್ತು ಬಂಟ್ವಾಳದ ಸೂರ್ಯ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಘುನಾಥ ಉಪಾಧ್ಯಾಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಲೇಖಕಿ ಶ್ರೀಮತಿ ಮಲ್ಲಿಕಾ ಜೆ.ಆರ್. ರೈ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ರಾಸಾ ಆರ್. ಈಶ್ವರ ಅಭಯ್ ಮತ್ತು ರಾಸಾ ಸಂಸ್ಥೆಯ ಟ್ರಸ್ಟಿಯಾದ ಶ್ರೀಮತಿ ಹೇಮ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸೇವಾ ಸಾಧಕರಾದ ಚಿತ್ರದುರ್ಗದ ಪಿ.ಜಿ. ಅನಿತಲಕ್ಷ್ಮಿ ಆಚಾರ್ಯ (ಸಾಮಾಜಿಕ ಕ್ಷೇತ್ರ), ಚೆನ್ನರಾಯಪಟ್ಟಣದ ದಿನೇಶ್ ಡಿ.ಎಸ್. (ಶೈಕ್ಷಣಿಕ ಕ್ಷೇತ್ರ) ಮತ್ತು ಸುಬ್ರಹ್ಮಣ್ಯದ ಕುಮಾರಿ ಗೌರಿತಾ ಕೆ.ಜಿ. (ಬಾಲ ಯೋಗ ಪಟು) ಅವರಿಗೆ ‘ಕರ್ನಾಟಕ ಸೇವಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಪುತ್ತೂರು ಹಾಗೂ ವಿವಿಧ ಜಿಲ್ಲೆಗಳ ಮಕ್ಕಳು ಮತ್ತು ಕಲಾವಿದರಿಂದ ಭರತನಾಟ್ಯ, ಜಾನಪದ, ಯೋಗ ಪ್ರದರ್ಶನ, ನೃತ್ಯ ಪ್ರದರ್ಶನ, ಸಂಗೀತ ಹಾಡುಗಾರಿಕೆ, ದೇಶ ಭಕ್ತಿಗೀತೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.