ಮಣಿಪಾಲ : ಮಣಿಪಾಲ ಡಾ. ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮಣಿಪಾಲ ಡಾಟ್ ಸಂಸ್ಥೆಯ ಸಹಯೋಗದಲ್ಲಿ 9ನೇ ವರ್ಷದ ‘ಪ್ರಮಾ ಪ್ರಶಸ್ತಿ 2023’ ಪ್ರದಾನ ಸಮಾರಂಭ ಮಣಿಪಾಲದಲ್ಲಿ ದಿನಾಂಕ 19-11-2023ರಂದು ನಡೆಯಿತು.
ಬಾಲಪ್ರತಿಭೆಗಳಾದ ಸಿದ್ಧಾರ್ಥ್ ಎಸ್. ಅಡಿಗ ಇವರಿಗೆ ವಿಜ್ಞಾನ ಕ್ಷೇತ್ರದ ಸಾಧನೆಗಾಗಿ , ಸಮೃದ್ಧಿ ಇವರಿಗೆ ಕನ್ನಡ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ, ನೇಹ ಇವರಿಗೆ ಚಿತ್ರಕಲಾ ಕ್ಷೇತ್ರದ ಸಾಧನೆಗಾಗಿ, ಕಾದಂಬರಿ ಡಿ. ಇವರಿಗೆ ವೀಣಾವಾದನ ಕ್ಷೇತ್ರದ ಸಾಧನೆಗಾಗಿ ಹಾಗೂ ಶ್ರೇಷ್ಠ ಆರ್. ಇವರಿಗೆ ನೃತ್ಯ ಕ್ಷೇತ್ರದ ಸಾಧನೆಗಾಗಿ ‘ಪ್ರಮಾ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ “ವನ್ ಗುಡ್ ಸ್ಟೆಪ್” ಸಂಸ್ಥಾಪಕರಾದ ಶ್ರೀಮತಿ ಅಮಿತ ಪೈ ಮಾತನಾಡಿ “ಮಕ್ಕಳ ಈಗಿನ ವಿದ್ಯಾಭ್ಯಾಸವನ್ನು ಜಾಗತಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಕಸನಗೊಳಿಸಿ ಅಳವಡಿಸಿಕೊಳ್ಳಿ.” ಎಂದು ಕಿವಿಮಾತು ಹೇಳಿದರು. ಟ್ರಸ್ಟಿನ ಪರವಾಗಿ ವಿದುಷಿ ಪವನ ಬಿ. ಆಚಾರ್ ಪ್ರಸ್ತಾವನೆಗೈದರು. ಪಳ್ಳತ್ತಡ್ಕ ಕೇಶವ ಭಟ್ ಇವರ ಮೊಮ್ಮಗಳಾದ ಪ್ರಮಾಳ ಸಂಸ್ಮರಣೆ ಮಾಡಲಾಯಿತು. ಟ್ರಸ್ಟಿನ ಅಧ್ಯಕ್ಷರಾದ ಶ್ರೀಮತಿ ದೇವಕಿ ಕೆ. ಭಟ್ ಉಪಸ್ಥಿತರಿದ್ದರು. ಡಾ. ಗಾಯತ್ರಿ ಮತ್ತು ಕುಮಾರಿ ಭವ್ಯಶ್ರೀ ಕಾರ್ಯಕ್ರಮವನ್ನು ನಿರ್ವಹಿಸಿದರು.
ಸಭಾಕಾರ್ಯಕ್ರಮದ ಬಳಿಕ ಸನ್ಮಾನಿಸಲ್ಪಟ್ಟ ಬಾಲಪ್ರತಿಭೆಗಳೆಲ್ಲರೂ ತಮ್ಮ ಸಾಧನೆಯನ್ನು ಪ್ರಸ್ತುತ ಪಡಿಸಿದರು.
ಕುಮಾರಿ ಕಾದಂಬರಿ ವೀಣಾವಾದನವನ್ನು ನಡೆಸಿ ಮರಾಠಿ ಅಭಂಗ್ ಒಂದನ್ನು ಹಾಡಿದರು. ಸಹವಾದನದಲ್ಲಿ ಶ್ರೀ ರಾಮಚಂದ್ರ ಪಾಂಗಣ್ಣಾಯ ಮೃದಂಗವನ್ನು ಹಾಗೂ ಶ್ರೀ ಕೌಶಿಕ್ ಅವರು ತಬಲವನ್ನು ನುಡಿಸಿದರು. ವಿಜ್ಞಾನದಲ್ಲಿ ಆಯ್ಕೆಯಾದ ಸಿದ್ಧಾರ್ಥ್ ಇವರು ಭಾರತದ ಸರಕಾರ ಪೇಟೆಂಟ್ ನೀಡಿದ ನೀರಿನ ಮಿತವ್ಯಯದ ಶೌಚಾಲಯದ ಮಾದರಿಯನ್ನು ವಿವರಿಸಿ, ತನ್ನ ನೈಪುಣ್ಯತೆಯ ಡ್ರಮ್ಸಿನಿಂದ “ಶಬ್ದ” ವಿಜ್ಞಾನ ವಿಷಯದ ಬಗ್ಗೆ ತಿಳಿ ಹೇಳಿದರು. ಕುಮಾರಿ ಶ್ರೇಷ್ಠ ಇವರು ಶ್ರೀ ಜಾಲಂಧರ ಎನ್ನುವಂತಹ ಶ್ರೀ ಜಯಚಾಮರಾಜ ಒಡೆಯರ ಕೃತಿಗೆ ಶಿವನ ಗಂಗಾವತರಣ ದೃಶ್ಯವನ್ನು ಅಭಿನಯಿಸಿ ಮತ್ತು ಗೋಕುಲ ವೃಂದಾವನ ಎನ್ನುವಂತಹ ಕೃತಿಗೆ ಗೀತೋಪದೇಶದ ವಿವಿಧ ಆಯಾಮಗಳನ್ನು ಪ್ರಸ್ತುತ ಪಡಿಸಿದರು. ಕುಮಾರಿ ಸಮೃದ್ಧಿಯು ತನ್ನ ಅಸ್ಖಲಿತ ಕನ್ನಡದ ಮಾತುಗಾರಿಕೆಯಲ್ಲಿ ರಾಜ ವಿಕ್ರಮಾದಿತ್ಯರ ಜೀವನದಲ್ಲಿ ಶನಿದೇವರ ಪ್ರಭಾವದ ಬಗ್ಗೆ ಕಥಾನಕ ನಡೆಸಿದರು. ಪ್ರಮಾ ಪ್ರಶಸ್ತಿ 2023ರ ಸಾರಾಂಶವಾಗಿ ಕುಮಾರಿ ನೇಹ ಅವರ ಚಿತ್ರವು ಜನಮನ್ನಣೆ ಪಡೆಯಿತು.