ತೆಕ್ಕಟ್ಟೆ: ಯಶಸ್ವೀ ಕಲಾವೃಂದ(ರಿ.)ಕೊಮೆ, ತೆಕ್ಕಟ್ಟೆ ಇವರ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವದಲ್ಲಿ ‘ಕುಂದಾಪುರ ಕನ್ನಡ ದಿನಾಚರಣೆ’ಯು ದಿನಾಂಕ 16-07-2023ರಂದು ನಡೆಯಿತು.
ಈ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ ‘ಗ್ವಲ್ ಗ್ವಲ್ಲಿ’ ಯಕ್ಷಗಾನದ ಸಂದರ್ಭದಲ್ಲಿ ಹೊಸ ವೇಷಭೂಷಣ ಹೊಂದಿದ ಬಾಲಗೋಪಾಲರಿಗೆ ತುರಾಯಿ ಸಿಕ್ಕಿಸುವುದರ ಮೂಲಕ ‘ಪ್ರಸಾಧನ’ ನೂತನ ಯಕ್ಷಾಭರಣವನ್ನು ಆನಂದ ಸಿ.ಕುಂದರ್ ಉದ್ಘಾಟಿಸಿ ಮಾತನಾಡುತ್ತಾ,
“ಕಣ್ಣಂಗೆ ಕಾಂಬುಕೇ ಸಿಗ್ದಿದ್ ಅಟ್ಟಣಿಗೆ ಆಟ, ದೊಂದಿ ಬೆಳಕಿನ ಆಟ, ಹವ್ಯಾಸಿ ಜೋಡಾಟ ಹೀಗೆ ಹಲವ್ ಬಗಿ ಆಟ ಮಾಡಿ, ದಶಮ ಸಂಭ್ರಮದಲ್ ದೂಳ್ ಎಬ್ಸಿ ಬಿಟ್ ಸಂಘ ಯಶಸ್ವಿ. ಹೂವಿನ್‌ಕೋಲ್ ಅಲ್ಲಲ್ ಮನಿ ಮನಿಗ್ ಹೋಯ್ ಮತ್ ಆ ಸಾಂಪ್ರದಾಯಿಕ ಕಲಿಗ್ ಜೀವ ಕೊಟ್ ಸಂಸ್ಥೆ ಯಶಸ್ವಿ. ಕರಾವಳಿ ಭಾಗದಲ್ ಬಾಳ ವರ್ಷದಿಂದ ಒಳ್ಳೆ ಗುರುಗಳನ್ ಸರ‍್ಸಕಂಡ್ ವರ್ಷದಲ್ ಆರ್ ತಿಂಗಳೂ ತರಗತಿ ಮಾಡಿ ಮೇಲ್ಪಂಕ್ತಿಯಲ್ ಇಪ್ ಸಂಘ ಯಶಸ್ವಿ. ಯಶಸ್ವಿ ಸಂಘಕ್ ಕೊಟ್ ಕೊಡುಗೆ ಹಾಳಾತಿಲ್ಲೆ. ಕೊಟ್ಟದ್ದ್ಕ್ಕೂ ಮೂರ್ ಪಟ್ ಜಾಸ್ತಿ ಆಯ್ ಸಮಾಜಕ್ ಪ್ರಯೋಜನಕ್ ಬತ್ತತ್” ಎಂದು ಹೇಳಿದರು.
‘ಕುಂದಾಪ್ರ ಭಾಷಿಗ್ ಒಂದ್ ಸೆಳ್ತ ಇತ್. ಅದ್ರ್ ಅಧ್ಯಯನ ರಾಜ್ಯ ಮಟ್ಟದಲ್ ಆಯ್ಕ್. ಸದ್ಯದಲ್ಲೇ ಅಧ್ಯಯನ ಪೀಠದಲ್ ಕುಂದಾಪ್ರ ಕನ್ನಡಕ್ ಒಳ್ಳೆ ಜಾಗ ಸಿಕ್ಕತ್. ಯಕ್ಷಗಾನದಲ್ ಕುಂದಾಪ್ರ ಕನ್ನಡದ ಸಾಹಿತ್ಯ ಬಳ್ಸಕಂಡ್ ಪ್ರಾಸದಲ್ ಪದ ಬರೂದ್ ಅಸ್ಟ್ ಸುಲ್ಭ ಇಲ್ಲೆ. ಇಪ್ಪತೈದನೇ ವರ್ಷಕ್ ಕಾಲ್ ಇಡ್ತ ಇಪ್ ಯಶಸ್ವೀ ಕಲಾವೃಂದನ ಗೆಲ್ಸುಕ್ ಪ್ರಸಂಗ ಬರ‍್ದ್ ಮೊಗಿಬೆಟ್ ಇಪ್ ಹೊತ್ತಿಗ್ ಜಯ ಸಿಕ್ಕಿಯೇ ಸಿಕ್ಕತ್’ ಎಂದು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವುದರ ಮೂಲಕ ಮಾನ್ಯ ಜಯಪ್ರಕಾಶ ಹಗ್ಡೆ ಅಭಿಪ್ರಾಯಪಟ್ಟರು.
ಕುಂದಾಪುರದ ಖ್ಯಾತ ವಕೀಲರಾದ ಶ್ರೀ ಎ.ಎಸ್.ಎನ್.ಹೆಬ್ಬಾರ್ ಮಾತನ್ನಾಡುತ್ತಾ “ಯಕ್ಷಗಾನಕ್ಕೂ, ಕುಂದಾಪುರ ಕನ್ನಡಕ್ಕೂ ಬಹಳ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಯಕ್ಷ ಕಲಾವಿದರು ದೇಶ ವಿದೇಶದಲ್ಲಿ ತಿರುಗುತ್ತಾ ಕುಂದಾಪುರ ಕನ್ನಡದಲ್ಲಿ ಹರಟುತ್ತಾ, ಕುಂದಗನ್ನಡದ ಸೊಗಡನ್ನು ಪಸರಿಸಿದರು. ಯಕ್ಷಗಾನ ಇರುವಷ್ಟು ಕಾಲ ಕುಂದಗನ್ನಡಕ್ಕೆ ಅಳಿವಿಲ್ಲ. ಇಲ್ಲಿ ಆನಂದ ಕುಂದರ್ ಬಹುದೊಡ್ಡ ಮೊತ್ತದ ಯಕ್ಷಗಾನ ವೇಷಭೂಷಣವನ್ನು ಸಂಸ್ಥೆಗೆ ನೀಡಿದರು. ಈ ದಿನ ಅದರ ಉದ್ಘಾಟನೆ ಹೆಚ್ಚು ಸೂಕ್ತವಾಗಿದೆ. ಶ್ರೀ ಪ್ರಸಾದ್ ಮೊಗೆಬೆಟ್ಟು ಅವರು ಕುಂದಾಪುರ ಕನ್ನಡವನ್ನು ಯಕ್ಷ ಛಂದಸ್ಸಿನೊಳಗೆ ಬಂಧಿಸಿ, ಯಕ್ಷ ಸಾಹಿತ್ಯಕ್ಕೆ ಮೆರುಗು ನೀಡಿ ಬೆಳಗುತ್ತಿರುವ ಕಲಾವಿದರು.” ಎನ್ನುತ್ತಾ ಸಂಸ್ಥೆಯ ಪೋಷಕರಾದ ರೊ.ಸುಧಾಕರ ಶೆಟ್ಟಿ ತೆಕ್ಕಟ್ಟೆ ಹಾಗೂ ಯಕ್ಷಾಭರಣ ತಯಾರಕರಾದ ಗಣೇಶ ಬಳಗಾರ ಇವರ ಸಾಧನೆಯನ್ನು ಸ್ತುತಿಸಿ ಅಭಿನಂದಿಸಿದರು.
“ಎಲ್ಲದಕ್ಕೂ ದಿನವೊಂದನ್ನು ನಿಗದಿ ಮಾಡಿ ಸಂಭ್ರಮಿಸುವಾಗ ‘ಕುಂದಾಪ್ರ ಕನ್ನಡ ದಿನ’ ಯಾಕೆ ಮಾಡಬಾರದು ಎಂದು ಆಲೋಚಿಸಿದ ಜನಸೇವಾ ಟ್ರಸ್ಟ್ ಆಷಾಡ ಹಬ್ಬದ ದಿನವನ್ನು ಕುಂದಾಪುರ ಕನ್ನಡ ದಿನಕ್ಕೆ ನಿಗದಿಗೊಳಿಸಿದೆ. ಆದರೆ ಇದನ್ನು ಸಂಭ್ರಮಸಿದ್ದು, ಹಬ್ಬವಾಗಿರಿಸಿದ್ದು ದೇಶ ವಿದೇಶದ ಹಲವಾರು ಸಂಘಸಂಸ್ಥೆಗಳು. ಅದರಲ್ಲೂ ಶ್ರೇಷ್ಠ ಗುಣಮಟ್ಟವನ್ನು ಕಾಯ್ದಿರಿಸಿಕೊಂಡು ಬಂದ ಸಂಸ್ಥೆ ಈ ಭಾಗದಲ್ಲಿ ಕುಂದಾಪುರ ಕನ್ನಡ ದಿನವನ್ನು ಆಯೋಜಿಸುತ್ತಿರುವುದು ನಿಜಕ್ಕೂ ಸ್ತುತ್ಯರ್ಹ” ಎಂದು ಸಾಹಿತಿ, ಸಾಂಸ್ಕೃತಿಕ ಚಿಂತಕ ಉದಯ ಶೆಟ್ಟಿ ಪಡುಕೆರೆ ಅಭಿಪ್ರಾಯ ಪಟ್ಟರು.
ತೆಕ್ಕಟ್ಟೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಶಿವರಾಮ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್ ಉಪಸ್ಥಿತರಿದ್ದರು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಸ್ವಾಗತಿಸಿ, ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಧನ್ಯವಾದಗೈದು, ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ರಾಮಾಯಣ ಪ್ರಸಂಗದ ಆಯ್ದ ಕೆಲವು ಭಾಗಗಳಿಂದ ‘ಗ್ವಲ್ ಗ್ವಲ್ಲಿ’ ಎಂಬ ಯಕ್ಷಗಾನವು ಕುಂದಾಪುರ ಕನ್ನಡದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ರಂಗದಲ್ಲಿ ಪ್ರಸ್ತುತಿಗೊಂಡಿತು.