ಬೆಂಗಳೂರು : ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರ ಮಕ್ಕಳ ವಿಭಾಗ ಚಿಣ್ಣರ ಚಾವಡಿ -2024 ಅರ್ಪಿಸುವ ‘ಪ್ರಶ್ನಾರ್ಥ’ ಪುಟಾಣಿ ಮಕ್ಕಳ ಚೊಟಾಣಿ ಪತ್ರಿಕಾಗೋಷ್ಠಿಯ ಮೀಡಿಯಾ ಹಬ್ಬದ ಕಾರ್ಯಕ್ರಮವು ದಿನಾಂಕ 27-04-2024ರಂದು ಕಲಾಗ್ರಾಮದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಮೆರುಗು ಕೊಟ್ಟವರು ಸುವರ್ಣ ವಾಹಿನಿಯ ಅಜಿತ್ ಹನುಮಕ್ಕನವರ್. ಪುಟಾಣಿ ಪತ್ರಕರ್ತರಿಂದ ಬಾಲ್ಯ, ವಿದ್ಯೆ, ಸಾಂಸಾರಿಕ, ವೃತ್ತಿ, ವೃತ್ತಿಯಲ್ಲಿನ ಇರಿಸುಮರಿಸು, ಸಂದಿಗ್ಧತೆ, ಸವಾಲು ಹೀಗೆ ಹತ್ತು ಹಲವು ಪ್ರಶ್ನೆಗಳ ಬಾಣ ಅಜಿತ್ ಅವರಿಗೆ. ಅಷ್ಟೇ ಸಂಯಮದಿಂದ ಚಾಚೂ ತಪ್ಪದೆ ಮಕ್ಕಳಲ್ಲಿ ಮಕ್ಕಳಾಗಿ ಮನವರಿಕೆಯ ಉತ್ತರ ಅವರ ವೃತ್ತಿಯಲ್ಲಿನ ಅನುಭವಕ್ಕೆ ಹಿಡಿದ ಕನ್ನಡಿ. ಪತ್ರಕರ್ತರ ಅನುಭವ ಮತ್ತು ಸವಾಲುಗಳಿಗೆ ಉತ್ತರ ನೀಡುವಾಗ ಇದ್ದ ಪ್ರೌಡಿಮೆ ಮತ್ತು ಅಲ್ಲಲ್ಲಿ ಹಾಸ್ಯಮಯವಾಗಿಯೆ ಉತ್ತರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕೆಲವರು ಕೇಳುವುದುಂಟು ! ಕೇವಲ 15 ದಿನದಲ್ಲಿ ಮಕ್ಕಳಿಗೆ ಏನು ಹೇಳಿ ಕೊಡುತ್ತಾರೆ ? ಇಂತಹ ಶಿಬಿರದಿಂದ ಏನು ಪ್ರಯೋಜನ? ಇಂತೆಲ್ಲಾ ಪ್ರಶ್ನೆಗಳಿಗೆ ಖಂಡಿತವಾಗಿಯೂ ಉತ್ತರ ಇಂತಹ ಕಾರ್ಯಕ್ರಮ. ಮಕ್ಕಳಿಗೆ ವಿವಿಧ ವಿಷಯದಲ್ಲಿ ಕುತೂಹಲ ಹುಟ್ಟು ಹಾಕಿದರೆ ಭವಿಷ್ಯದ ಹಾದಿ ಸುಗಮವೆಂದೇ ಅರ್ಥ. ಅದಕ್ಕಾಗಿಯೆ ವಿಜಯನಗರ ಬಿಂಬದಂತಹ ಸಂಸ್ಥೆ 28 ವರುಷದ ನಂತರವೂ ತನ್ನ ಇರುವನ್ನು ಉಳಿಸಿಕೊಂಡಿರುವುದು. ಹತ್ತಾರು ಸಂಸ್ಥೆಗಳು ಬರಬಹುದು ಅಲ್ಲದೆ ಹೋಗಬಹುದು. ಆದರೆ ಸ್ಥಿರವಾಗಿ ಇರಬೇಕಾದರೆ ಅದಕ್ಕೆ ಬೇಕಾದ ಪೂರಕ ಅಂಶ ಮತ್ತು ಮಕ್ಕಳಿಗೆ ಹತ್ತಿರವಾದ ಅಲ್ಲದೇ ಅವರ ವಿಕಸನಕ್ಕೆ ಬೇಕಾದ ವಿಷಯ ಅಧ್ಯಯನ ಮಾಡಿ ಕಾಲಕ್ರಮಕ್ಕೆ ಸರಿಯಾಗಿ ಅಷ್ಟೆ ಪರಿಣಾಮಕಾರಿಯಾಗಿ, ವ್ಯವಸ್ಥಿತವಾಗಿ ಜಾರಿಗೆ ತರುವ ಗುಣ ಇರುವುದು ವಿಜಯನಗರ ಬಿಂಬಕ್ಕೆ. ಕಾರಣ ಅಲ್ಲಿನ ಸಂಪನ್ನ್ಮೂಲ ವ್ಯಕ್ತಿಗಳಾದ ಡಾ. ಕಶ್ಯಪ್, ಡಾ. ಸುಷ್ಮಾ ಮತ್ತು ಡಾ. ವೃಂದ ಇವರಂತಹ ವಿಷಯ ತಜ್ಙರಿಂದ ಮಾತ್ರ ಸಾಧ್ಯ. ಒಂದು ಉತ್ತಮ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಬದುಕಿನ ಉತ್ತಮ ಕ್ಷಣ.