ಸುಳ್ಯ : ‘ಚಂದನ ಸಾಹಿತ್ಯ ವೇದಿಕೆ’ಯ ಅಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ಇವರಿಗೆ ಸುಳ್ಯದ ‘ಭೀಮರಾವ್ ವಾಷ್ಠರ್ ಅಭಿಮಾನಿ ಬಳಗ’ದ ವತಿಯಿಂದ ‘ಅಭಿನಂದನಾ ಕಾರ್ಯಕ್ರಮ’ ಮಾಡುವ ಬಗ್ಗೆ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ದಿನಾಂಕ 10 ಆಗಸ್ಟ್ 2025ರಂದು ಪೂರ್ವಭಾವಿ ಸಭೆ ಜರುಗಿತು.
ದಿನಾಂಕ 24 ಆಗಸ್ಟ್ 2025ರಂದು ನಡೆಸಲಾಗುವ ಸಮಾರಂಭದಲ್ಲಿ ‘ಅಭಿನಂದನಾ ಕಾರ್ಯಕ್ರಮ’ ಜೊತೆ ಚುಟುಕು ಕವಿಗೋಷ್ಠಿ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮಗಳು ಕ.ಸಾ.ಪ. ಕನ್ನಡ ಭವನದಲ್ಲಿ ದಿನಪೂರ್ತಿ ನಡೆಯಲಿವೆ ಎಂದು ವಾಷ್ಠರ್ ಅಭಿನಂದನಾ ಬಳಗದ ನೇತೃತ್ವ ವಹಿಸಿದ್ದ ಪೆರುಮಾಳ್ ಲಕ್ಷ್ಮಣ್ ಇವರು ಸಭೆಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸುಳ್ಯದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಉಮಾದೇವಿ ಇವರು ರಕ್ಷಾ ಬಂಧನದ ನಿಮಿತ್ತ ರಕ್ಷಾಕವಚವನ್ನ ಕಟ್ಟಿ ಆಶೀರ್ವದಿಸಿ, ಧ್ಯಾನದ ಉಪಯೋಗವನ್ನು ವಿವರಿಸಿ, ಎಚ್. ಭೀಮರಾವ್ ವಾಷ್ಠರ್ ರವರು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಮತ್ತು ವೇದಿಕೆಯಲ್ಲಿ ತಮಗೆ ನೀಡುತ್ತಿದ್ದ ಅವಕಾಶವನ್ನು ನೆನಪಿಸಿಕೊಂಡರು.
ಹಿರಿಯ ಸಾಹಿತಿಗಳಾದ ವೈಲೇಶ್ ಪಿ.ಎಸ್. ಕೊಡಗು ಇವರು ಸಭೆಯನ್ನು ಉದ್ದೇಶಿಸಿ “ಚಂದನ ಸಾಹಿತ್ಯ ವೇದಿಕೆ ಮೂಲಕ ನಮ್ಮೊಳಗೆ ಒಂದು ಬಂಧವನ್ನು ಸೃಷ್ಟಿಸಿ ನಮ್ಮೆಲ್ಲರನ್ನು ಒಗ್ಗೂಡಿಸಿ 25 ವರ್ಷಗಳಿಂದ ಸುಳ್ಯದಲ್ಲಿ ವಾಸವಿದ್ದು, ನಮಗೆಲ್ಲರಿಗೂ ಸಾಹಿತ್ಯ ಸಂಗೀತ ಕಾರ್ಯಕ್ರಮಗಳ ಮೂಲಕ ಮೇಲ್ಮೈ ಹಾಕಿಕೊಟ್ಟ ಶ್ರೀಯುತರಾದ ಭೀಮರಾವ್ ವಾಷ್ಠರ್‌ರವರು ಅನಿವಾರ್ಯವಾಗಿ ತಮ್ಮ ಉಪಜೀವನಕ್ಕಾಗಿ ಸುಳ್ಯದಿಂದ ಹೊರಟು ಬೆಂಗಳೂರಿನ ಕಡೆಗೆ ತಮ್ಮ ವಾಸ ಹಾಗೂ ವಾಸ್ತವ್ಯವನ್ನು ಬದಲಿಸುತ್ತಿದ್ದಾರೆ, ಬದಲಾವಣೆ ಎಂಬುದು ಜಗದ ನಿಯಮ ಅಲ್ಲವೇ…! ಆದುದರಿಂದ ತಮ್ಮ ಸ್ವಾರ್ಥವನ್ನು ಮರೆತು ಸರ್ವಜನ ಹಿತಕ್ಕಾಗಿ ಹಗಲಿರುಳು ಶ್ರಮಿಸಿ ನಮ್ಮ ಏಳಿಗೆಯನ್ನು ಬಯಸಿದ ಜೀವಕ್ಕೆ ಹಿರಿಯರು ಹರಸಿ, ಕಿರಿಯರು ಹಾರೈಸಿ ಅವರ ಏಳ್ಗೆಯನ್ನು ಬಯಸುವುದು ನಮ್ಮ ಕರ್ತವ್ಯ. ನಾವೆಲ್ಲರೂ ತನು ಮನ ಧನದೊಂದಿಗೆ ಶ್ರೀಯುತ ಭೀಮರಾವ್ ವಾಷ್ಠರ್‌ರವರನ್ನು ‘ವಾಷ್ಠರ್ ಉತ್ಸವ’ದ ಮೂಲಕ ಹರಸಿ ಹಾರೈಸೋಣ” ಎಂದು ಹೇಳಿದರು.
ಬೆಂಗಳೂರಿನ ಹಿರಿಯ ಸಾಹಿತಿ ಹಾ.ಮ. ಸತೀಶರವರು ಅನೇಕ ಸಲಹೆ ಮಾರ್ಗದರ್ಶನ ನೀಡಿದರು. ‘ಆದರ್ಶ ಹೃದಯವಂತ’ ಪ್ರಶಸ್ತಿ’ ಪುರಸ್ಕೃತರಾದ ಶ್ರೀಯುತ ಮೋಹನ್ ನಂಗಾರು ಇವರು ಉಪಸ್ಥಿತರಿದ್ದರು. ಪೂರ್ವಭಾವಿ ಸಭೆಯಲ್ಲಿ ಗಾಯಕ ಅರುಣ ರಾವ್ ಜಾಧವ್, ಮಹಿಳಾ ಸಾಹಿತಿ ಅನುರಾಧ ಶಿವಪ್ರಸಾದ್, ಸಂಧ್ಯಾ ಶಾನುಭೋಗ್, ಸಾವಿತ್ರಿ ದೊಡ್ಡಮನೆ, ಗಾಯಕಿಯರಾದ ಪುಷ್ಪಾವತಿ ಡಿ., ಶೋಭಾ ಬೆಳ್ಳಾರೆ, ಗಾಯಕ ವಿಜಯ್ ಕುಮಾರ್ ಸುಳ್ಯ, ನಾಟಕಕಾರ ಅಶೋಕ್ ಸುಳ್ಯ ಇನ್ನಿತರರು ಉಪಸ್ಥಿತರಿದ್ದರು. ಸುಮಂಗಲ ಲಕ್ಷ್ಮಣ್ ಸ್ವಾಗತಿಸಿದರು.