ಮಂಗಳೂರು : ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ 60 ವರ್ಷಗಳ ಸಾಧನಾ ಪಥದ ನೆಲೆಯಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ‘ಷಷ್ಟ್ಯಬ್ದ ಅಭಿವಂದನ’ ಸಮಾರಂಭ ದಿನಾಂಕ 30-03-2024ರ ಶನಿವಾರದಂದು ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ ಬಹುಭಾಷಾ ಕವನ ಹಾಗೂ ಭಕ್ತಿ ಗೀತೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಹುಭಾಷಾ ಕವನ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಕು. ಕೃತಿ ಬಿ. ಕೆ. ಎಕ್ಕಾರ್ ಪ್ರಥಮ, ಕು. ಧನ್ವಿತಾ ಕಾರಂತ್ ಬಂಟ್ವಾಳ ದ್ವಿತೀಯ, ಹಾಗೂ ಬೆಂಗಳೂರಿನ ಕು. ಸಿಂಚನಾ ಎಸ್. ಶಂಕರ್ ತೃತೀಯ. ಕಾಲೇಜು ವಿಭಾಗದಲ್ಲಿ ಕು. ವಿಜಯಲಕ್ಷ್ಮೀ ಆರ್. ಕಾಮತ್ ವಾರಂಗ ಪ್ರಥಮ, ಶ್ರೀ ಸಮ್ಯಕ್ತ್ ಜೈನ್ ಕಡಬ ದ್ವಿತೀಯ ಹಾಗೂ ಉತ್ತರಕನ್ನಡದ ಕು. ಭಾಗ್ಯಶ್ರೀ ಭಟ್ ತೃತೀಯ. ಮುಕ್ತ ವಿಭಾಗದಲ್ಲಿ ತೀರ್ಥಹಳ್ಳಿಯ ಶ್ರೀ ವಾ. ಮುರಳೀಧರ ಪ್ರಥಮ, ಬಂಟ್ವಾಳದ ಶ್ರೀಮತಿ ಶೈಲಜಾ ಕೇಕಣಾಜೆ ದ್ವಿತೀಯ ಹಾಗೂ ಬೆಂಗಳೂರಿನ ದಿವಾಕರ ಡೋಂಗ್ರೆ ತೃತೀಯ ಬಹುಮಾನವನ್ನು ಪಡೆದುಕೊಂಡರು.
ಸ್ವರಚಿತ ಭಕ್ತಿಗೀತೆ ಸ್ಪರ್ಧೆಯಲ್ಲಿ ಮೈಸೂರಿನ ಶ್ರೀಮತಿ ವಿಜಯಲಕ್ಷ್ಮೀ ಎಸ್. ಪ್ರಥಮ, ಬೆಂಗಳೂರಿನ ಶ್ರೀ ಮೃತ್ಯುಂಜಯ ತೇಜಸ್ವಿ ದ್ವಿತೀಯ ಹಾಗೂ ಮಂಗಳೂರಿನ ಶ್ರೀ ಗೋಪಾಲ ಕೃಷ್ಣ ಶಾಸ್ತ್ರಿ ತೃತೀಯ ಬಹುಮಾನವನ್ನು ಪಡೆದುಕೊಂಡರು.
ಶರವು ದೇವಸ್ಥಾನದ ಶಿಲೆಶಿಲೆ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ಕಟೀಲು ಕ್ಷೇತ್ರದ ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ರಘುನಾಥ ಸೋಮಯಾಜಿ, ಅಯೋಧ್ಯೆಯಲ್ಲಿ ದೀಪಾಲಂಕಾರ ಸೇವೆ ಮಾಡಿದ ರಾಜೇಶ್ ಶೆಟ್ಟಿ ಪ್ರಮುಖರಾದ ಡಾ. ಸದಾನಂದ ಶೆಟ್ಟಿ, ಡಾ. ಸಿಎ. ಎ. ರಾಘವೇಂದ್ರ ರಾವ್, ಡಾ. ಶ್ರೀನಿವಾಸ ರಾವ್ ಭಾಗವಹಿಸಿದ್ದರು. ಪ್ರೊ. ಎಂ.ಬಿ. ಪುರಾಣಿಕ್ ಸ್ವಾಗತಿಸಿ, ಪ್ರದೀಪ ಕುಮಾರ ಕಲ್ಕೂರ ಪ್ರಸ್ತಾವನೆಗೈದು, ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.
ಕೃತಿ ಬಿ. ಕೋಟ್ಯಾನ್ :
ಶ್ರೀ ಭೋಜರಾಜ ಕೋಟ್ಯಾನ್ ಹಾಗೂ ಶ್ರೀಮತಿ ಶೋಭಾ ಕೋಟ್ಯಾನ್ ಇವರ ಸುಪುತ್ರಿಯಾಗಿರುವ ಕೃತಿ ಬಿ. ಕೋಟ್ಯಾನ್ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿನ 10ನೇ ತರಗತಿಯ ವಿದ್ಯಾರ್ಥಿನಿ. ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಅನಾದರ ಹಾಗೂ ಅಸಡ್ಡೆ ಎಂಬ ಅಪವಾದಕ್ಕೆ ವಿರುದ್ಧವಾಗಿ ಕನ್ನಡ ಹಾಗೂ ಮಾತೃಭಾಷೆ ತುಳು ಎರಡರಲ್ಲೂ ಸಾಹಿತ್ಯ ಕೃಷಿಯ ಒಲವು ಬೆಳೆಸಿಕೊಂಡ ವಿದ್ಯಾರ್ಥಿನಿ ಕೃತಿ ಬಿ.ಕೋಟ್ಯಾನ್. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ದ.ಕ.ಜಿ.ಪಂ. ಹಿ.ಪ್ರಾ. ಶಾಲೆ, ಕರಂಬಾರು ಇಲ್ಲಿನ ವಿದ್ಯಾರ್ಥಿನಿಯಾಗಿದ್ದಾಗಲೇ ಕರಾಟೆ ಹಾಗೂ ಯಕ್ಷಗಾನದಲ್ಲಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿರುತ್ತಾಳೆ.
ಧನ್ವಿತಾ ಕಾರಂತ್ :
ಬಾಲಕೃಷ್ಣ ಕಾರಂತ ಮತ್ತು ಶ್ರೀಕಲಾ ಕಾರಂತ ಇವರ ಸುಪುತ್ರಿ ಧನ್ವಿತಾ ಕಾರಂತ್.
ಬಂಟ್ವಾಳದ ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢ ಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ರಿ. ಇವರು ಯೋಗ ದಿನಾಚರಣೆ ಪ್ರಯುಕ್ತ ನಡೆಸಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿರುತ್ತಾಳೆ.
ಮಕ್ಕಳ ಲೋಕ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ನಡೆಸಿದ ಆನ್ ಲೈನ್ ಕಮ್ಮಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಥೆ, ಕವನ, ಚುಟುಕು, ಹಾಯ್ಕುಗಳನ್ನು ಮಂಡಿಸಿರುತ್ತಾಳೆ.
ಶ್ರೀ ಮಂಗಳಾದೇವಿ ಸೇವಾ ಸಮಿತಿ ರಿ. ಮಂಗಳೂರು ಇವರು ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಡೆಸಿದ ಭಕ್ತಿಗೀತೆ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುತ್ತಾಳೆ.
ಸಿಂಚನ . ಎಸ್. ಶಂಕರ್ :
ಬೆಂಗಳೂರಿನ ಡಾ. ಬಿ. ಎಸ್ ಶಂಕರ್ ಹಾಗೂ ಶ್ರೀಮತಿ ಶಶಿ ರಾವ್ ಇವರ ಸುಪುತ್ರಿ. ಸಿಂಚನ . ಎಸ್. ಶಂಕರ್ ಇವರು ಬೆಂಗಳೂರಿನ ಶ್ರೀ ಕುಮಾರನ್ಸ್ ಚಿಲ್ದ್ರೆನ್ಸ್ ಹೋಂ ನ 9ನೇ ತರಗತಿಯ ವಿದ್ಯಾರ್ಥಿನಿ.
ರಾಜ್ಯ ಸರ್ಕಾರದಿಂದ ಜಿಲ್ಲಾ ಮಟ್ಟದಲ್ಲಿ 2021-2022 ನೇ ಸಾಲಿನಲ್ಲಿ ಆಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಕೊಡುವ ಪ್ರತಿಭಾ ಪುರಸ್ಕಾರ ಪಡೆದಿರುವ ಈಕೆ ಕರ್ನಾಟಕ ಪ್ರತಿಭಾ ರತ್ನ, ವರ್ಷದ ಸಾಧಕ ರತ್ನ, ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾಳೆ.
ವಿಜಯಲಕ್ಷ್ಮೀ ಆರ್ ಕಾಮತ್ :
ರಾಜೇಶ್ ಕಾಮತ್ ಹಾಗೂ ಸಂಗೀತ ಇವರ ಸುಪುತ್ರಿ ಯಾಗಿರುವ ವಿಜಯಲಕ್ಷ್ಮೀ ಆರ್ ಕಾಮತ್
ಮಣಿಪಾಲದ ಮಾಹೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ. ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ತುಳುನಾಡ ಕಾವ್ಯ ರತ್ನ ಗೌರವ ಪಡೆದಿರುತ್ತಾರೆ.
ಸಮ್ಯಕ್ತ್ ಜೈನ್ ಕಡಬ :
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಶ್ರೀಮತಿ ಮಂಜುಳಾ ಇವರ ಸುಪುತ್ರ ಸಮ್ಯಕ್ತ್ ಜೈನ್. ಯುವ ಸಾಹಿತಿಯಾಗಿರುವ ಇವರು ಬಹುಮುಖ ಪ್ರತಿಭಾವಂತ. ಪ್ರಸ್ತುತ ಎಸ್. ಡಿ. ಎಂ. ಉಜಿರೆಯ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ. ಜಿನಭಜನೆ,ಕವನ, ಕತೆ, ನ್ಯಾನೋ ಕತೆ, ಹನಿಗವನ, ಚುಟುಕು, ರುಬಾಯಿ, ಟಂಕಾ, ಪ್ರಬಂಧ, ನಾಟಕ ಇವರ ಹವ್ಯಾಸ. ಅಂಕುರ, ಮಂಜರಿ, ಮಾರ್ದನಿ ಇವರ ಪ್ರಕಟಿತ ಕೃತಿಗಳು. ರಾಜ್ಯ ಹಾಗೂ ಅಂತರಾಜ್ಯ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿರುವ ಇವರು ಅಂತರಾಷ್ಟ್ರೀಯ ಜಿನ ಸಮ್ಮಿಳನದ ಕವನ ವಾಚನದಲ್ಲಿ, ವಿದೇಶಿ ಸಾಹಿತ್ಯ ಪ್ರಕಾರ ರಚನೆಯಲ್ಲಿ ಅಂತರಾಜ್ಯ ಮಟ್ಟದಲ್ಲಿ, ಹೀಗೆ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುತ್ತಾರೆ.
ಭಾಗ್ಯ ಶ್ರೀ ಭಟ್ :
ಉತ್ತರ ಕನ್ನಡ ಜಿಲ್ಲೆಯಯಲ್ಲಾಪುರದ ಶಂಕರ ಭಟ್ ಹಾಗೂ ವಿಜಯಲತಾ ದಂಪತಿಗಳ ಸುಪುತ್ರಿಯಾಗಿರುವ ಭಾಗ್ಯ ಶ್ರೀ ಭಟ್ ಧಾರವಾಡದಲ್ಲಿ ಮ್ಯೂಸಿಕ್ ಇನ್ ಸಿತಾರ್ ನಲ್ಲಿ ಮಾಸ್ಟರ್ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಜೇಸಿ ವಾ. ಮುರಳೀಧರ :
ತೀರ್ಥಹಳ್ಳಿಯ ಎಂ. ಬಿ. ವಾಸುದೇವ ಮೂರ್ತಿ ಹಾಗೂ ಹೆಚ್. ಎನ್. ಭಾರತೀ ಬಾಯಿ ದಂಪತಿಯ ಸುಪುತ್ರರಾಗಿರುವ ವಾ. ಮುರಳೀಧರ ತೀರ್ಥಹಳ್ಳಿ ಜೇಸೀಸ್ ಇದರ ಸ್ಥಾಪಕ ಅಧ್ಯಕ್ಷರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಬೆಂಗಳೂರಿನ ಭಾರತೀಯ ಜೀವವಿಮಾ ನಿಗಮದ ಪ್ರಥಮ ದರ್ಜೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಕಾರ್ಯದರ್ಶಿಯಾಗಿ ತೀರ್ಥಹಳ್ಳಿ ತಾಲ್ಲೂಕು ಬಳಗದ ಸ್ಥಾಪಕ ಉಪಾಧ್ಯಕ್ಷರಾಗಿ, ಶಿವಮೊಗ್ಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕ ಉಪಾಧ್ಯಕ್ಷ ಹಾಗೂ ತೀರ್ಥಹಳ್ಳಿ ತಾಲ್ಲೂಕು ಕನ್ನಡ ಜಾಗೃತಿ ಸಮಿತಿಯ ನಾಮಕರಣ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕಸ್ತೂರಿ ವಾಹಿನಿಯ ‘ಜಾಣರ ಜಗಲಿ’ ಕಾರ್ಯಕ್ರಮದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ ಇವರು ಸುವರ್ಣ ವಾಹಿನಿಯ ‘ಜೋಕ್ ಜಂಕ್ಷನ್’, ಡಾ. ನಾ. ಡಿಸೋಜ ಅವರೊಂದಿಗೆ ‘ಹರಟೆ’, ಹಿರೇಮಗಳೂರು ಕಣ್ಣನ್ ಅವರೊಂದಿಗೆ ‘ರಸಾಯನ’ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ.
ಶೈಲಜಾ ಕೇಕಣಾಜೆ :
ಎಂ.ಟೆಕ್ ಪದವೀಧರೆಯಾಗಿರುವ ಇವರು ಕೆಲಕಾಲ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಗೃಹಿಣಿಯಾಗಿದ್ದಾರೆ. ಚಿಕ್ಕಂದಿನಿಂದಲೇ ಕಥೆ,ಕವನ ರಚಿಸುವುದಲ್ಲಿ ಆಸಕ್ತಿ ಹೊಂದಿದ್ದ ಇವರಿಗೆ ಛಂದೋಬದ್ಧ ಕವನಗಳನ್ನು ಬರೆಯುವ ತುಡಿತ ಹೆಚ್ಚು. ತರಂಗ, ತುಷಾರ,ಸುಧಾ,ಮಯೂರಗಳಲ್ಲಿ ಬರಹಗಳು ಪ್ರಕಟಗೊಂಡಿವೆ. ಓದಿದ ಪುಸ್ತಕದ ವಿಮರ್ಶೆ ಕೂಡ ನೆಚ್ಚಿನ ಹವ್ಯಾಸವಾಗಿದ್ದು ಸಾಮಾಜಿಕ ಜಾಲತಾಣಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ನೂರಕ್ಕಿಂತಲೂ ಅಧಿಕ ಪುಸ್ತಕಗಳನ್ನು ಬಹುಮಾನವಾಗಿ ಪಡೆದಿದ್ದಾರೆ. 2016ರಲ್ಲಿ ಬಾಲಮಂಗಳದಲ್ಲೊಂದು ಸರಣಿ ಲೇಖನ ಸತತ 33 ಕಂತುಗಳಲ್ಲಿ ಪ್ರಕಟವಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಕೆಲ ಕವಿಗೋಷ್ಠಿಗಳಲ್ಲಿ ಕವನ ವಾಚನವನ್ನು ಮಾಡಿದ್ದಾರೆ. ಅನೇಕ ಕಥೆ,ಕವನ,ಹನಿಗವನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಹೆಗ್ಗಳಿಕೆ ಇವರದ್ದು.
ದಿವಾಕರ ಡೋಂಗ್ರೆ :
ಸಾಹಿತಿ, ಸಂಘಟಕ, ಪ್ರವಚನಕಾರ, ಕಾದಂಬರಿಕಾರ. ಕಿರು ತೆರೆಯ ಧಾರಾವಾಹಿಗಳಿಗೆ ಸಂಭಾಷಣಕಾರರಾಗಿ ದುಡಿದಿರುವ ಇವರು ಪ್ರಸ್ತುತ ಬೆಂಗಳೂರಿನ ನಿವಾಸಿ. ಕನ್ನಡ, ತುಳು, ಹಿಂದಿ, ಮರಾಠಿ, ಚಿತ್ಪಾವನಿ ಮತ್ತು ಆಂಗ್ಲ ಭಾಷೆಗಳಲ್ಲಿ ವ್ಯವಹರಿಸಬಲ್ಲವರು. ನಾಗ್ವೇಣಿ- ಅರುಂಧತಿ ಮತ್ತು ದಾಳ ಅನ್ನುವ ಮೂರು ಕಾದಂಬರಿಗಳನ್ನು ಬರೆದಿದ್ದಾರೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಂಘ, ಚಿತ್ಪಾವನ ಸಮಾಜ ಬೆಂಗಳೂರು ಈ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಕರ್ನಾಟಕ ‘ಚಿತ್ಪಾವನ ವೃತ್ತಾಂತ’ ಅನ್ನುವ ಗ್ರಂಥದ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಬರುವ ಜೂನ್ 2024ರಲ್ಲಿ ಈ ಗ್ರಂಥ ಲೋಕಾರ್ಪಣೆಗೊಳ್ಳಲಿದೆ.
ವಿಜಯಲಕ್ಷ್ಮೀ ಎಸ್ :
ದಿ. ಬಿ. ಶಂಕರಯ್ಯ ಹಾಗೂ ಎ.ಎಲ್. ಉಮಾದೇವಿ ಇವರ ಸುಪುತ್ರಿಯಾಗಿರುವ ವಿಜಯಲಕ್ಷ್ಮೀ ಎಸ್
ಕಳೆದ ಐದು ವರ್ಷಗಳಿಂದ ಸಾಹಿತ್ಯದ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಛಂದೋಬದ್ಧ ಕವನ ರಚನೆಯಲ್ಲಿ ಹೆಚ್ಚಿನ ಆಸಕ್ತಿ. ಪ್ರತಿಲಿಪಿಯ ಈ ಸಂಭಾಷಣೆ ಎಂಬ ಸ್ಪರ್ಧೆಯಲ್ಲಿ ಇವರ “ನಿಗೂಢ” ಎಂಬ ಕಥೆ ಮೆಚ್ಚುಗೆ ಪಡೆದಿದೆ ಹಾಗೂ ಸಂಗೀತದಲೆಯ ಸಮ್ಮೇಳನ ಸ್ಪರ್ಧೆಯಲ್ಲಿ “ಮಳೆಯ ವೈಭವ” ಎಂಬ ಕವನ ದ್ವಿತೀಯ ಬಹುಮಾನ ಪಡೆದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಮೈಸೂರು ಆಕಾಶವಾಣಿಯಲ್ಲಿ ಪ್ರಸಾರವಾದ ಲಾಕ್ ಡೌನ್ ಕಥಾ ಮಾಲಿಕೆಯಲ್ಲಿ ಇವರ ನಾಲ್ಕು ಸಣ್ಣ ಕಥೆಗಳು “ಲಾಕ್ ಡೌನ್ ಫಜೀತಿ”, “ನಾರದರ ಭೂಲೋಕ ಯಾತ್ರೆ”, “ತಾಯಿ – ಮಗು” ಹಾಗೂ “ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ” ಪ್ರಸಾರವಾಗಿವೆ.
ಮೃತ್ಯುಂಜಯ ತೇಜಸ್ವಿ :
ಬೆಂಗಳೂರಿನಲ್ಲಿರುವ sap ಸಂಸ್ಥೆಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರು ಬಿಡುವಿನ ಸಂದರ್ಭಗಳಲ್ಲಿ ಪ್ರಚಲಿತ ವಿದ್ಯಮಾನಗಳನ್ನೇ ವಿವಿಧ ಛಂದಸ್ಸುಗಳಲ್ಲಿ ಪದ್ಯರೂಪವಾಗಿ ಬರೆಯುವ ಹವ್ಯಾಸ ಬೆಳೆಸಿದ್ದಾರೆ . ಆಗಾಗ ಕತೆಗಳನ್ನೂ ಬರೆಯುವ ಇವರ ಒಂದೆರೆಡು ಪದ್ಯಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಳೆದ ವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ಪಂಚ ಚಾಮರ ವೃತ್ತದಲ್ಲಿ ಬರೆದ “ಪೆಂಡಾಲ್ ಗಣಪತಿಯ ಪಾಡು” ಎಂಬ ಪದ್ಯವನ್ನು ವಿಶ್ವವಾಣಿ ಪತ್ರಿಕೆಯಲ್ಲಿ ಶ್ರೀವತ್ಸ ಜೋಶಿಯವರು ವಿಮರ್ಶೆ ಮಾಡಿ ತಮ್ಮ ‘ತಳಿರು ತೋರಣ’ ಅಂಕಣದಲ್ಲಿ ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಕವಿಶೈಲದಲ್ಲಿ ನಡೆದ ಕವಿ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗನಹಿಸಿದ್ದ ಇವರು ಶ್ರೀಯುತ ಮುತ್ತುಸ್ವಾಮಿಯವರು ನಡೆಸುವ ಮುಕ್ತಕ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ.
ಗೋಪಾಲಕೃಷ್ಣ ಶಾಸ್ತ್ರಿ :
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಇವರು ಛಂದೋಬದ್ಧ ಕವನ ಸೇರಿದಂತೆ ಹಲವಾರು ವಿಧದ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. “ಚುಟುಕು ಬಂಡಿ” ಇವರ ಪ್ರಕಟಿತ ಕೃತಿ.