ಉಡುಪಿ : ರಾಗ ಧನ ಉಡುಪಿ (ರಿ) ಇವರು ನಡೆಸುವ 36ನೆಯ ‘ಶ್ರೀ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವ -2024’ವು ದಿನಾಂಕ 02-02-2024ರಿಂದ 04-02-2024ರವರೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ದಿನಾಂಕ 02-02-2024ರಂದು ಸಂಜೆ 5 ಗಂಟೆಗೆ ಎಂ.ಆರ್.ಪಿ.ಎಲ್.ನ ಮಾನವ ಸಂಪನ್ಮೂಲ ಪ್ರಬಂಧಕ ಶ್ರೀ ಕೃಷ್ಣ ಹೆಗ್ಡೆ ಮೀಯಾರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ರಾಗ ಧನ ಇದರ ಉಪಾಧ್ಯಕ್ಷರಾದ ಪ್ರೊ. ಆರ್.ಎಲ್. ಭಟ್ ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಡಾ. ಶ್ರೀಕಿರಣ್ ಹೆಬ್ಬಾರ್ ವಹಿಸಲಿದ್ದಾರೆ. ನಂತರ ಚಿಲ್ಕುಂದ ಸಹೋದರಿಯರಾದ ಶ್ರೀಮತಿ ಲಕ್ಷ್ಮಿ ನಾಗರಾಜ್ ಹಾಗೂ ಶ್ರೀಮತಿ ಇಂದು ನಾಗರಾಜ್ ಅವರಿಂದ ಸಂಗೀತ ಕಛೇರಿ ನಡೆಯಲಿದೆ. ಬೆಂಗಳೂರಿನ ಶ್ರೀ ಬಿ.ಕೆ. ರಘು ವಯೊಲಿನ್ ಹಾಗೂ ಬೆಂಗಳೂರಿನ ಶ್ರೀ ಅನಿರುದ್ಧ ಭಟ್ ಮೃದಂಗದಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 03-02-2024ರಂದು ಅಪರಾಹ್ನ 2.15ಗಂಟೆಗೆ ಉಡುಪಿಯ ಮಾಸ್ಟರ್ ಪ್ರಣವ್ ಅಡಿಗ ಅವರ ಕೊಳಲು ವಾದನಕ್ಕೆ ವಯೊಲಿನ್ ನಲ್ಲಿ ಕು. ತನ್ಮಯೀ ಉಪ್ಪಂಗಳ ಹಾಗೂ ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್ ಸಹಕರಿಸಲಿದ್ದಾರೆ. ಸಂಜೆ ಗಂಟೆ 4.00ಕ್ಕೆ ಡಾ. ಸುಶೀಲಾ ಉಪಾಧ್ಯಾಯ ಅವರು ಹೆಸರಿನಲ್ಲಿ ಡಾ. ಯು.ಪಿ. ಉಪಾಧ್ಯಾಯರು ಪ್ರಾಯೋಜಿಸಿರುವ ‘ರಾಗ ಧನ ಪಲ್ಲವಿ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಲಿದೆ. ಕಲಾಪೋಷಕ ಉಡುಪಿಯ ಶ್ರೀ ಕೆ. ದಿನೇಶ್ ಅಮ್ಮಣ್ಣಾಯ ಅವರು ‘ಕು. ದಿವ್ಯಶ್ರೀ ಭಟ್’ ಮಣಿಪಾಲ ಅವರಿಗೆ ಈ ಬಾರಿಯ ‘ಪಲ್ಲವಿ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ. ನಂತರ ಕು. ದಿವ್ಯಶ್ರೀ ಭಟ್ ಅವರ ಸಂಗೀತ ಕಛೇರಿಯು ನಡೆಯಲಿದೆ. ಇವರಿಗೆ ವಯಲಿನ್ ನಲ್ಲಿ ಜನಾರ್ದನ್ ಬೆಂಗಳೂರು, ಮೃದಂಗದಲ್ಲಿ ಸುನಾದ ಕೃಷ್ಣ ಹಾಗೂ ಖಂಜೀರದಲ್ಲಿ ಶ್ರೀ ವ್ಯಾಸ ವಿಠಲ್ ಅವರು ಸಹಕರಿಸಲಿದ್ದಾರೆ.
ದಿನಾಂಕ 04-02-2024ರಂದು ಬೆಳಿಗ್ಗೆ ಗಂಟೆ 9.00ರಿಂದ ಶ್ರೀಮತಿ ಶ್ರೀಮತಿದೇವಿ ಅವರ ಹಿಂದುಸ್ತಾನಿ ಗಾಯನ ನಡೆಯಲಿದೆ. ಉಡುಪಿಯ ಶ್ರೀ ಪ್ರಸಾದ್ ಕಾಮತ್ ಹಾರ್ಮೋನಿಯಂನಲ್ಲಿ ಮತ್ತು ಕುಂದಾಪುರದ ಶ್ರೀ ವಿಘ್ನೇಶ್ ಕಾಮತ್ ತಬಲಾದಲ್ಲಿ ಸಹಕರಿಸಲಿದ್ದಾರೆ. ಗಂಟೆ 11.00ರಿಂದ ಶ್ರೀಮತಿ ವೈ.ಜಿ. ಶ್ರೀಲತಾ ಅವರ ವೀಣಾವಾದನ ಕಛೇರಿ ನಡೆಯಲಿದೆ. ಇವರಿಗೆ ನಿಕ್ಷಿತ್ ಟಿ. ಪುತ್ತೂರು ಮೃದಂಗದಲ್ಲಿ ಹಾಗೂ ಖಂಜೀರದಲ್ಲಿ ಶ್ರೀ ವ್ಯಾಸವಿಠಲ ಅವರು ಸಹಕರಿಸಲಿದ್ದಾರೆ.
ಮಧ್ಯಾಹ್ನ ಗಂಟೆ 2.15ರಿಂದ ವಿದ್ಯಾರ್ಥಿಗಳಿಂದ ಪಿಳ್ಳಾರಿ ಗೀತೆಗಳು ಹಾಗೂ ಎಲ್ಲಾ ಕಲಾವಿದರಿಂದ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗಾಯನ ನಡೆಯಲಿದೆ. ಸಂಜೆ ಗಂಟೆ 4.15ರಿಂದ ಸಮಾರೋಪ ಸಮಾರಂಭವು ಡಾ. ಶ್ರೀಕಿರಣ್ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಪ್ರೊ. ವರದೇಶ್ ಹಿರೇಗಂಗೆ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಎ. ಕನ್ಯಾಕುಮಾರಿ ಇವರನ್ನು ಗೌರವಿಸಿ ಸನ್ಮಾನಿಸಲಾಗುವುದು. ನಂತರ ಗಂಟೆ 5.15ರಿಂದ ಎ. ಕನ್ಯಾಕುಮಾರಿ ಅವರ ವಯೊಲಿನ್ ವಾದನ ಕಛೇರಿ ನಡೆಯಲಿದೆ. ಮೃದಂಗದಲ್ಲಿ ಪತ್ರಿ ಸತೀಶ್ ಕುಮಾರ್ ಸಹಕರಿಸಲಿದ್ದಾರೆ.
ಕರ್ನಾಟಕ ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿರುವ ಕು. ದಿವ್ಯಶ್ರೀ ಭಟ್, ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ರಾಷ್ಟ್ರೀಯ ಶಿಷ್ಯವೇತನ, ಸಂಗೀತ ಪರಿಷತ್ತಿನ ದಕ್ಷಿಣ ಭಾರತ ಮಟ್ಟದ ರಾಗಂ ತಾನಂ ಪಲ್ಲವಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಚೆನ್ನೈನ ಇಂಡಿಯನ್ ಫೈನ್ ಆರ್ಟ್ಸ್ ನಿಂದ ಪುರಂದರದಾಸರ ಹಾಗೂ ಮುತ್ತಯ್ಯ ಭಾಗವತರ ಕೃತಿ ಗಾಯನದಲ್ಲಿ ಪ್ರಥಮ, ಬೆಂಗಳೂರಿನ ಗಾಯನ ಸಮಾಜದವರ ವೀಣೆ ಶೇಷಣ್ಣ ಕೃತಿ ಗಾಯನದಲ್ಲಿ ಪ್ರಥಮ ಹಾಗೂ ಇತರ ಹಲವು ಬಹುಮಾನಗಳನ್ನು ಪಡೆದಿರುತ್ತಾರೆ. ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರೆಯಾದ ಇವರು ಚಿತ್ರಕಲೆ ಹಾಗೂ ಭರತನಾಟ್ಯದಲ್ಲೂ ಪ್ರಾವೀಣ್ಯತೆ ಪಡೆದಿರುತ್ತಾರೆ. ಇವರು ಸರಿಗಮ ಭಾರತಿಯ ಗುರು ವಿದುಷಿ ಉಮಾಶಂಕರಿ ಹಾಗೂ ಪ್ರಸ್ತುತ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ಅವರ ಶಿಷ್ಯೆ. ಇವರು ಎಂ.ಐ.ಟಿ. ಪ್ರೊ. ಡಾ. ಕುಮಾರಶ್ಯಾಮ ಹಾಗೂ ಜಯಶ್ರೀ ದಂಪತಿಗಳ ಸುಪುತ್ರಿ.