ಪುತ್ತೂರು : ಬಪ್ಪಳಿಗೆ ಜೈನ ಭವನದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರವು ದಿನಾಂಕ 05-11-2023ರಂದು ಏರ್ಪಡಿಸಿದ ‘ವರ್ಷ ಸಂಭ್ರಮ-19’ ಕಾರ್ಯಕ್ರಮಕ್ಕೆ ಮಂಗಳೂರು ಕೊಲ್ಯ ನಾಟ್ಯ ನಿಕೇತನದ ನೃತ್ಯಗುರು, ಶಾಂತಲಾ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಉಳ್ಳಾಲ ಮೋಹನ ಕುಮಾರ್ ಇವರು ಚಾಲನೆ ನೀಡಿ ಮಾತನಾಡುತ್ತಾ “ಸಂಸ್ಕೃತಿ, ಪರಂಪರೆ ಉಳಿವಿಗೆ ಸನಾತನ ನೃತ್ಯದ ಸಂಪ್ರದಾಯ ಉಳಿಯಬೇಕು. ಈ ನಿಟ್ಟಿನಲ್ಲಿ ಶಾಸ್ತ್ರೀಯ ನೃತ್ಯ ತರಗತಿಗಳನ್ನು ನಡೆಸುವ ಮೂಲಕ ಸಾಕಷ್ಟು ಶ್ರಮ ಪಡುತ್ತೇವೆ. ಇಂತಹ ನೃತ್ಯವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಇನ್ನಷ್ಟು ನೃತ್ಯಗುರುಗಳನ್ನು ತಯಾರು ಮಾಡಬೇಕಾಗಿದೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ, “ಗುರು-ಶಿಷ್ಯರ ಸಂಬಂಧ ಹೇಗೆ ಇರಬೇಕು ಎಂಬುದಕ್ಕೆ ಈ ವೇದಿಕೆ ಸಾಕ್ಷಿಯಾಗಿದೆ. ಸಂಸ್ಕೃತಿ ಪೋಷಣೆಯ ಇಂತಹ ಕಲೆಯನ್ನು ಮಕ್ಕಳು ಬೆಳೆಸಿಕೊಳ್ಳಬೇಕು” ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ‘ಗ್ರಾಮೀಣ ಪ್ರದೇಶದ ಅನೇಕ ಪ್ರತಿಭೆಗಳಿಗೆ ನೃತ್ಯೋಪಾಸನಾ ಕಲಾ ಕೇಂದ್ರ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ” ಎಂದರು. ಈ ಸಂದರ್ಭ ವೀರಮಂಗಲ ಶ್ರೀಕೃಷ್ಣ ಕಲಾಕೇಂದ್ರದ ನೃತ್ಯಗುರು ವಿದ್ವಾನ್ ಗೋಪಾಲಕೃಷ್ಣ ಕೆ. ಅವರಿಗೆ ನೃತ್ಯೋಪಾಸನಾ ಗೌರವ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು, “ಕಷ್ಟಪಟ್ಟು ಕಲಿತ ಕಲಾ ವಿದ್ಯೆಯನ್ನು ಯಾವುದೇ ಕಾರಣಕ್ಕೂ ಬಿಡಬೇಡಿ” ಎಂದು ಹೇಳಿದರು.
ಇದೇ ವೇಳೆ ನೃತ್ಯಗುರುಗಳಾದ ವಿದ್ವಾನ್ ಉಳ್ಳಾಲ ಮೋಹನ ಕುಮಾರ್ ಹಾಗೂ ಅವರ ಪುತ್ರಿ ವಿದುಷಿ ರಾಜಶ್ರೀ ಉಳ್ಳಾಲ್ ಅವರನ್ನು ವಿದುಷಿ ಶಾಲಿನಿ ಆತ್ಮಭೂಷಣ್ ಗೌರವಿಸಿದರು. ಕಲಾ ಕೇಂದ್ರದ ವಿದ್ಯಾರ್ಥಿಗಳು ವಿದುಷಿ ಶಾಲಿನಿ ಆತ್ಮಭೂಷಣ್ ಅವರಿಗೆ ಗುರು ಕಾಣಿಕೆ ಸಮರ್ಪಿಸಿದರು. ನೃತ್ಯ ಪೋಷಣೆ ಕಾರ್ಯಕ್ರಮದಡಿ ಉಚಿತ ನೃತ್ಯ ಶಿಕ್ಷಣಕ್ಕೆ ಬಡ ವಿದ್ಯಾರ್ಥಿಗಳ ದತ್ತು ಸ್ವೀಕರಿಸುವ ಕಾರ್ಯಕ್ರಮದಡಿ ಮೂವರಿಗೆ ನೃತ್ಯ ಪೋಷಣೆ ಸಮರ್ಪಿಸಲಾಯಿತು. ಶೃತಿ ಸ್ವಾಗತಿಸಿ, ಮಮತಾ ವಂದಿಸಿ, ಉಪನ್ಯಾಸಕಿ ಡಾ. ವಿಜಯಾ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು.
ವರ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಕಲಾ ಕೇಂದ್ರದ ಪುತ್ತೂರು ಹಾಗೂ ಉಪ್ಪಿನಂಗಡಿ ಶಾಖೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ನಟುವಾಂಗ ವಿದುಷಿ ಶಾಲಿನಿ ಆತ್ಮಭೂಷಣ್, ಹಾಡುಗಾರಿಕೆಯಲ್ಲಿ ವಿದ್ವಾನ್ ಕೃಷ್ಣಾಚಾರ್ ಪಾಣೆಮಂಗಳೂರು ಹಾಗೂ ವಸಂತ ಕುಮಾರ್ ಗೋಸಾಡ, ಮೃದಂಗದಲ್ಲಿ ವಿದ್ವಾನ್ ಗೀತೇಶ್ ನೀಲೇಶ್ವರ, ಕೊಳಲಿನಲ್ಲಿ ವಿದ್ವಾನ್ ರಾಜಗೋಪಾಲ್ ಕಾಞಂಗಾಡ್ ಸಹಕರಿಸಿದರು.