ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕಾಸರಗೋಡು ಜಿಲ್ಲಾ ಘಟಕ ಮತ್ತು ಕೊಡಗು ಕನ್ನಡ ಭವನ, ಕನ್ನಡ ಚು. ಸಾ. ಪ ಕೊಡಗು ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಕಾಸರಗೋಡು ಇದರ ಸಹಭಾಗಿತ್ವದಲ್ಲಿ ಅಗ್ರಗಣ್ಯ ಸಾಹಿತಿ, ಐತಿಹ್ಯಗಳ ಅಧ್ಯಾಪಕ, ಸಂಶೋಧಕ ದಿ. ಬೇಕಲ ರಾಮ ನಾಯಕ ಇವರ ಸ್ಮರಣಾಂಜಲಿ, ಬದುಕು ಬರಹದ ಬಗ್ಗೆ ಮೆಲುಕು, ಜಾನಪದ ಗಾಯನ, ಕವಿಗೋಷ್ಠಿ, ಕೃತಿ ಬಿಡುಗಡೆ, “ಚುಟುಕು ಕಾವ್ಯ ಪ್ರಶಸ್ತಿ” ಪ್ರದಾನ ಸಮಾರಂಭವು ದಿನಾಂಕ 27 ಏಪ್ರಿಲ್ 2025ರಂದು ಕಾಸರಗೋಡು ನುಲ್ಲಿಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನದ ಬಯಲು ರಂಗ ಮಂಟಪದಲ್ಲಿ ನಡೆಯಲಿದೆ.
ಕನ್ನಡ ಚು.ಸಾ. ಪ. ಕಾಸರಗೋಡು ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷರಾದ ಶ್ರೀ ವಿರಾಜ್ ಆಡೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕನ್ನಡ ಚು. ಸಾ. ಪ. ಕಾಸರಗೋಡು ಜಿಲ್ಲಾ ಘಟಕದ ನಿರ್ದೇಶಕರಾದ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಉದ್ಘಾಟಿಸಲಿದ್ದಾರೆ. ಕವಿ ಹಾಗೂ ಲೇಖಕರಾದ ಶ್ರೀ ಚಂದ್ರಹಾಸ ಎಂ. ಬಿ. ಚಿತ್ತಾರಿ ಇವರು ದಿ. ಬೇಕಲ ರಾಮ ನಾಯಕ ಸಂಸ್ಕರಣೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಕಾಸರಗೋಡು ಇಲ್ಲಿನ ಸಂಶೋಧನಾರ್ಥಿ ಶ್ರೀ ಸೋಮು ಎಚ್. ಹಿಪ್ಪರಗಿ, ಕೊಡಗು ಕನ್ನಡ ಭವನದ ಅಧ್ಯಕ್ಷರಾದ ಶ್ರೀ ಬೊಳ್ಳಜಿರ ಬಿ. ಅಯ್ಯಪ್ಪ, ರಾಮರಾಜ ಕ್ಷತ್ರಿಯ ಕೋಟೆಯಾರ್ ಸೇವಾಸಂಘ ಕಾಸರಗೋಡು ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀ ಕಮಲಾಕ್ಷ ಕಲ್ಲುಗದ್ದೆ, ಕನ್ನಡ ಕು. ಸಾ. ಪ. ಕೊಡಗು ಜಿಲ್ಲಾ ಘಟಕ ಇದರ ಅಧ್ಯಕ್ಷೆಯಾದ ರುಚೀನಾ ಎಂ. ಎ ಹಾಗೂ ಕಾಸರಗೋಡಿನ ನಿವೃತ್ತ ಉಪಜಿಲ್ಲಾಧಿಕಾರಿಳಾದ ಶ್ರೀ ಶಶಿಧರ ಶೆಟ್ಟಿ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಪತ್ರಕರ್ತ ಲೇಖಕರ ಹಾಗೂ ಚಿತ್ರ ಕಲಾವಿದರಾದ ಶ್ರೀ ಪ್ರದೀಪ್ ಬೇಕಲ್ ಇವರಿಗೆ ‘ಬೇಕಲ ರಾಮನಾಯಕ ಸಾಹಿತ್ಯ ಪ್ರಶಸ್ತಿ-2025’, ಸಂಘಟಕ, ಸಮಾಜ ಸೇವಕ ಹಾಗೂ ಸಾಮುದಾಯಿಕ ಸೇವಕರಾದ ಡಾ. ರವೀಂದ್ರ ಜೆಪ್ಪು ಮಂಗಳೂರು ಇವರಿಗೆ ‘ಬೇಕಲ ರಾಮನಾಯಕ ಸದ್ಭಾವನಾ ಪ್ರಶಸ್ತಿ-2025’ ಹಾಗೂ ಐದು ಮಂದಿ ಸಾಹಿತಿಗಳಿಗೆ ‘ಕಾಸರಗೋಡು ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ – 2025’ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ಕನ್ನಡ ಭವನ ಪ್ರಕಾಶನದ ಏಳನೇ ಕೃತಿಯಾದ ಲೇಖಕಿ ಮೇಘಾ ಶಿವರಾಜ್ ವಿರಚಿತ ‘ಮೌನ ಮಾತಾದಾಗ’ ಕೃತಿಯನ್ನು ಡಾ. ರವೀಂದ್ರ ಜೆಪ್ಪು ಲೋಕಾರ್ಪಣೆಗೊಳಿಸಲಿದ್ದಾರೆ.