ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಗುಪ್ತಗಾಮಿನಿ ಸಾಹಿತ್ಯ ಶಾಲೆ ಉಡುಪಿ ಇವರ ಆಶ್ರಯದಲ್ಲಿ ಇಂದಿರಾ ಜಾನಕಿ ಎಸ್. ಶರ್ಮಾ ಅವರ ‘ರಾಮ ಸಾಂಗತ್ಯ’ ಕೃತಿ ಪ್ರಸ್ತುತಿಯು ಉಡುಪಿ ಕಿದಿಯೂರು ಹೋಟೆಲಿನ ಶೇಷಶಯನ ಬಾಲ್ಕನಿ ಸಭಾಂಗಣದಲ್ಲಿ ದಿನಾಂಕ 10 ನವೆಂಬರ್ 2024ರ ಭಾನುವಾರದಂದು ನಡೆಯಿತು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಇಂತಹ ಕೃತಿಗಳು ಸಮಾಜಕ್ಕೆ ಅತ್ಯಗತ್ಯವಾಗಿದ್ದು, ಕೃತಿಕಾರರು ಇನ್ನಷ್ಟು ಒಳ್ಳೆಯ ಕೃತಿಗಳನ್ನು ತರಲಿ. ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸದಾ ಚಟುವಟಿಕೆಯಲ್ಲಿದ್ದು, ಇನ್ನಷ್ಟು ಕೆಲಸಗಳು ಮಾಡಲಿ, ಇವರ ಈ ಕಾರ್ಯಕ್ಕೆನಮ್ಮ ಸಂಪೂರ್ಣ ಸಹಕಾರವಿದೆ.” ಎಂದು ಶುಭ ಹಾರೈಸಿದರು.
ಕೃತಿ ಪ್ರಸ್ತುತಿಯನ್ನು ಹಿರಿಯ ವಿಮರ್ಶಕರಾದ ಡಾ. ಪಾರ್ವತಿ ಐತಾಳ್ ಅವರು ನೆರವೇರಿಸಿಕೊಟ್ಟರು . ಮುಖ್ಯ ಅತಿಥಿಗಳಾಗಿ ಪ್ರೊ ಜಿ. ಕೆ. ಭಟ್ ಸೇರಾಜೆ , ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ್ ಶೆಣೈ ಹಾಗೂ ಅಧ್ಯಕ್ಷರಾದ ಪ್ರೊ. ಶಂಕರ್ ಉಪಸ್ಥಿತರಿದ್ದರು.
ಅಭಿಜಾತ ಕವಯತ್ರಿ ಕೀರ್ತಿಶೇಷ ಸುಶೀಲಾ ಬಾಯಿ ಮರಾಠೆ ಸಂಸ್ಮರಣೆಯನ್ನು ಹಿರಿಯ ಪತ್ರಕರ್ತ ಕೆ. ಶ್ರೀಕರ ಭಟ್ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಡಾ. ಹರಿಕೃಷ್ಣ ಪುನರೂರು ಅವರಿಗೆ ‘ಗುಪ್ತಗಾಮಿನಿ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪತ್ರಕರ್ತ ಬಾ. ಸಾಮಗ ಹಾಗು ಅಶ್ವಿನಿ ಎಸ್. ಶರ್ಮಾ ಇವರನ್ನು ಗೌರವಿಸಿ ಅಭಿನಂದಿಸಲಾಯಿತು
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್ .ಪಿ ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ಮಾಡಿ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮವನ್ನು ನಿರೂಪಿಸಿ, ಜನಾರ್ದನ್ ಕೊಡವೂರು ಧನ್ಯವಾದವಿತ್ತರು. ಗೀತಾ ಗಾಯನವನ್ನು ಅಂಬಿಕಾ ಉಪಾಧ್ಯ ಕಂಬಳಕಟ್ಟ ಮತ್ತು ಪ್ರಾರ್ಥನೆಯನ್ನು ಶ್ರಾವಣಿ ಶಾಸ್ತ್ರಿ ನಡೆಸಿಕೊಟ್ಟರು.
Subscribe to Updates
Get the latest creative news from FooBar about art, design and business.