ಮಂಗಳೂರು : ಕುಡ್ಲ ಆರ್ಟ್ಸ್ ಫೆಸ್ಟಿವಲ್ ಮತ್ತು ರಾಮಕೃಷ್ಣ ಮಠ ಪ್ರಸ್ತುತ ಪಡಿಸುವ ವಿಶ್ವವಿಖ್ಯಾತ ರಂಜನಿ ಮತ್ತು ಗಾಯತ್ರಿ ಇವರಿಂದ ‘ರಾಗ ಲಹರಿ’ ಕರ್ನಾಟಕ ಸಂಗೀತ ಗಾಯನ ಕಛೇರಿಯು ದಿನಾಂಕ 4 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ನಡೆಯಲಿದೆ.
ರಂಜನಿ-ಗಾಯತ್ರಿ (RaGa sisters) ಕರ್ನಾಟಕ ಶಾಸ್ತ್ರೀಯ ಸಂಗೀತ ಕೇಳುಗರಿಗೆ ಈ ಸಿರಿಕಂಠದ ಜೋಡಿಯ ಹೆಸರು ಚಿರಪರಿಚಿತ. ಇವರ ಯುಗಳ ಗಾಯನ ಜಗತ್ಪಸಿದ್ದ. ಇವರು ರಾಗಗಳ ಸ್ವರಮಾಲೆ ಪೋಣಿಸಿದರೆಂದರೆ ಕಛೇರಿ ಮುಗಿದರೂ ಮನದಲ್ಲಿ ರಾಗಗಳದ್ದೇ ಗುಂಗು. ರಾಗ-ತಾನ-ಪಲ್ಲವಿ ಹಾಡುವುದನ್ನು ಕೇಳುವುದೇ ಪರಮಾನಂದ. ಚೆನ್ನೈಯಲ್ಲಿ ನೆಲೆಸಿರುವ ಈ ಸಹೋದರಿಯರು, ಎಳೆಯ ವಯಸ್ಸಿನಲ್ಲೇ ಸಂಗೀತದಲ್ಲಿ ಪಕ್ವತೆ ಸಾಧಿಸಿದವರು. ಈ ಯುಗಳ ಸಹೋದರಿಯರು ವಿಶ್ವವೇದಿಕೆವರೆಗೆ ಹೋದದ್ದು ಗಾಯಕಿಯರಾಗಿ, ಗಾಯನ ಕಲಿಕೆಗೂ ಮುನ್ನ ಇಬ್ಬರೂ ಪಿಟೀಲು ವಾದಕಿಯರಾಗಿದ್ದರು. ಹದಿಹರೆಯದಲ್ಲೇ ಘಟಾನುಘಟಿ ಕಲಾವಿದರಾಗಿದ್ದ ಡಿ.ಕೆ. ಪಟ್ಟಮ್ಮಾಳ್, ಬಾಲಮುರಳಿಕೃಷ್ಣ, ಟಿ. ವಿಶ್ವನಾಥನ್‌ನಂಥವರಿಗೆ ಪಿಟೀಲು ಪಕ್ಕವಾದ್ಯ ನುಡಿಸಿ ಸೈ ಎನಿಸಿಕೊಂಡವರು. ದೇಶ ವಿದೇಶಗಳಲ್ಲಿ ಸಂಗೀತದ ಕಂಪನ್ನು ಪಸರಿಸಿದ ಈ ಅಕ್ಕತಂಗಿಯರಿಗೆ ಇದೀಗ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಗಾಯನ ಕಛೇರಿ ನೀಡಲಿದ್ದಾರೆ.