ಉಡುಪಿ : ರಾಗ ಧನ ಸಂಸ್ಥೆಯು ಹಮ್ಮಿಕೊಂಡಿರುವ ರಾಗರತ್ನಮಾಲಿಕೆ ಸರಣಿಯ 29ನೆಯ ಕಾರ್ಯಕ್ರಮವು ದಿನಾಂಕ 19 ಅಕ್ಟೋಬರ್ 2024ರಂದು ‘ಮಣಿಪಾಲ್ ಡಾಟ್ ನೆಟ್’ ಸಭಾಂಗಣದಲ್ಲಿ ನಡೆಯಿತು.
ದೀಪೋಜ್ವಲನ ಪೂರ್ವದಲ್ಲಿ ನಡೆಸಲಾಗುವ ಸಣ್ಣ ಕಛೇರಿಯನ್ನು ನಡೆಸಿದ ಬಾಲಕಿ ಕುಮಾರಿ ಸುರಭಿ ರಾವ್ ಇವರ ಗಾಯನದಲ್ಲಿ ನವರಾಗಮಾಲಿಕಾ ವರ್ಣ, ಹಂಸಧ್ವನಿ (ಮಹಾಗಣಪತಿಂ) ಆನಂದ ಭೈರವಿ (ಕಮಲಾಂಬ) ಸುಚರಿತ್ರ (ಹರಿನಾಮದರಗಿಣಿ) ಸಿಂಧು ಭೈರವಿ (ಅಷ್ಟಪದಿ) ರಾಗಗಳ ಪ್ರಸ್ತುತಿಗಳಲ್ಲದೆ, ಸಿಂಹೇಂದ್ರ ಮಧ್ಯಮ (ಕಾಮಾಕ್ಷಿ) ಕೃತಿಯನ್ನು ಪುಟ್ಟ ರಾಗ, ಸ್ವರ ಪ್ರಸ್ತಾರ ಸಹಿತ ನಿರೂಪಿಸಲಾಯಿತು. ಸುಮಾರು 45 ನಿಮಿಷಗಳ ಕಾಲ ದೋಷರಹಿತವಾಗಿ ಹಾಡಿದ ಈ ಬಾಲೆ ಉತ್ತಮ ಭವಿಷ್ಯದ ಭರವಸೆಯನ್ನು ನೀಡಿದ್ದಾಳೆ. ಗಾಯನಕ್ಕೆ ಕುಮಾರಿ ಮಹತೀ ಕೆ. ಕಾರ್ಕಳ ವಯೊಲಿನ್ ನಲ್ಲಿಯೂ, ಶ್ರೀ ನಾರಾಯಣ ಬಳ್ಳೂಕರಾಯ ಮೃದಂಗದಲ್ಲಿಯೂ ಸಹವಾದನ ನೀಡಿದ್ದಾರೆ.
ಪ್ರಧಾನ ಕಚೇರಿಯ ಗಾಯಕ ಬೆಂಗಳೂರಿನ ಶ್ರೀ ಬಿ.ಎಸ್. ಅಭಿಜಿತ್ ಹಸನ್ಮುಖಿ. ತ್ರಿಸ್ಥಾಯಿಗಳಲ್ಲಿ ಸುಲಭವಾಗಿ ಸಂಚರಿಸುವ ಮೃದು ಶಾರೀರ; ಸಹವಾದಕರೊಂದಿಗೆ, ಸಭಿಕರೊಂದಿಗೆ ಉತ್ತಮ ಸಂವಹನ. ಸಾವೇರಿ ವರ್ಣದೊಂದಿಗೆ ಕಛೇರಿ ಪ್ರಾರಂಭ; ಕಾಂಭೋಜಿ (ಲಂಬೋದರಮ್) ರೀತಿ ಗೌಳ (ಮಮಹೃದಯೇ) ಕೃತಿಗಳ ನಂತರ ಎತ್ತಿಕೊಳ್ಳಲಾದ ರಾಗ ‘ನಠಭೈರವಿ’ (ಶ್ರೀವಲ್ಲಿ ದೇವಸೇನಾಪತಿ) ಸುಶ್ರಾವ್ಯವಾದ ಆಲಾಪನೆ, ಕೃತಿ, ಸ್ವರ ಕಲ್ಪನೆಗಳೊಂದಿಗೆ ಈ ಕೃತಿಯನ್ನು ಬೆಳೆಸುವಲ್ಲಿ ಪಿಟೀಲುವಾದಕ ಶ್ರೀ ಮೋಕ್ಷಿತ್ ಸಹ ಸಾಥ್ ನೀಡಿದ್ದಾರೆ.
ಕುಂತಲವರಾಳಿ (ಭೋಗೀಂದ್ರ) ನಂತರ ಮೂಡಿಬಂದ ಪ್ರಧಾನರಾಗ ಪೂರ್ವಿಕಲ್ಯಾಣಿ (ಮೀನಾಕ್ಷಿ ಮೇಮುವಂ). ಇಲ್ಲಿಂದ ಈ ಕಛೇರಿ ಉತ್ಕೃಷ್ಟವಾದ ಹೊಸ ತಿರುವನ್ನೇ ಪಡೆಯಿತೆನ್ನಬಹುದು. ರಾಗದ ಜೀವ ಸಂಚಾರಗಳನ್ನು, ವಿವಿಧ ಮಗ್ಗಲುಗಳಿಂದ ಬಳಸಿಕೊಂಡು, ಸೂಕ್ತವಾದ ಕಡೆಗಳಲ್ಲಿ ಉತ್ತಮವಾದ ಬಿರ್ಕಾಗಳಿಂದ ಸಿಂಗರಿಸಲಾಗಿ, ಹಂತ ಹಂತವಾಗಿ ಅರಳಿದ ರಾಗವಿಸ್ತಾರ, ಗಂಭೀರವಾದ ಕೃತಿ ನಿರೂಪಣೆ, ಮುಕ್ತಾಯ ವೈವಿದ್ಯಗಳಿಂದ ಕೂಡಿದ ಕಲ್ಪನಾ ಸ್ವರಗಳು ಗುಣಗ್ರಾಹಿ ಶ್ರೋತೃಗಳ ಮುಕ್ತ ಪ್ರಶಂಸೆಗೆ ಪಾತ್ರವಾದವು. ಗಾಯನದ ಪ್ರತಿಯೊಂದು ಅಂಗದಲ್ಲೂ ಗಾಯಕರನ್ನು ಎಚ್ಚರಿಕೆಯಿಂದ ಅನುಸರಿಸುತ್ತ, ವಯೊಲಿನ್ ನುಡಿಸಿದ ಯುವಕ ಶ್ರೀ ಮೋಕ್ಷಿತ್ ಎಸ್. ಸಭಿಕರ ಮೆಚ್ಚುಗೆ ಮತ್ತು ಆಶೀರ್ವಾದಗಳಿಗೆ ಪಾತ್ರರಾಗಿದ್ದಾರೆ. ಹಿತಮಿತವಾಗಿ ಮೃದಂಗ ನುಡಿಸಿದ ಶ್ರೀ ರಘು ಭಾಗವತ್ ಈ ಕಛೇರಿಯ ಯಶೋ ಭಾಗಿಗಳಾಗಿದ್ದಾರೆ. ಸಿಂಧು ಭೈರವಿಯ ದೇವರನಾಮದೊಂದಿಗೆ (ಎಲ್ಲಿರುವನೋ) ಈ ಹಾಡುಗಾರಿಕೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ವಿದುಷಿ ಸರೋಜಾ ಆರ್. ಆಚಾರ್ಯ