ಬೈಂದೂರು : ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಸ್ಥಳೀಯ ಕಲಾಸಂಸ್ಥೆ ಲಾವಣ್ಯ ಇದರ 47ನೇ ವಾರ್ಷಿಕೋತ್ಸವ ಹಾಗೂ ರಂಗಪಂಚಮಿ -2024 ಐದು ದಿನಗಳ ನಾಟಕೋತ್ಸವವು ದಿನಾಂಕ 02-03-2024ರಂದು ಪ್ರಾರಂಭವಾಯಿತು.
ಈ ನಾಟಕೋತ್ಸವವನ್ನು ಉದ್ಘಾಟಿಸಿದ ಘಟಪ್ರಭಾ ಜೆ.ಎನ್.ಎಸ್. ಕನ್ಸ್ಟ್ರಕ್ಷನ್ ಆಡಳಿತ ನಿರ್ದೇಶಕ ಎಚ್. ಜಯಶೀಲ ಎನ್. ಶೆಟ್ಟಿ ಇವರು ಮಾತನಾಡಿ “ರಂಗಭೂಮಿ ಕ್ಷೇತ್ರದಲ್ಲಿ ‘ಲಾವಣ್ಯ’ ತನ್ನ ಪರಿಪೂರ್ಣ ಸಾಧನೆಯ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಅನೇಕ ಬದಲಾವಣೆಗಳಿಗೆ ಒಗ್ಗಿಕೊಂಡು ಅಭಿನಯ, ನಾಟಕದ ಆಯ್ಕೆ ಜತೆಗೆ ಹೊಸ ಪ್ರಸ್ತುತಿಗಳನ್ನು ರಂಗಭೂಮಿಗೆ ನೀಡುತ್ತಿರುವುದು ಸಂಸ್ಥೆ ಹೆಗ್ಗಳಿಕೆಯಾಗಿದೆ” ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ “ರಂಗಾಸಕ್ತ ಸಹೃದಯಿ ಕಲಾಭಿಮಾನಿಗಳು, ಕಲಾ ಪೋಷಕರು ಕೈಹಿಡಿದು ಮುನ್ನೆಡಿಸಿದ ಪರಿಣಾಮ ಕಳೆದ ನಲವತ್ತಾರು ವಸಂತಗಳಲ್ಲಿ ಲಾವಣ್ಯ ಲವಲವಿಕೆಯಿಂದಲೇ ಬೆಳೆದುಬಂದಿದೆ. ಒಳ ಹೊರಗೆ ತನ್ನದೇ ಆದ ಉತ್ಸಾಹಿ ಸಮುದಾಯವನ್ನು ಲಾವಣ್ಯ, ಕಟ್ಟಿಕೊಂಡಿದೆ. ಚಲನಶೀಲತೆಯನ್ನು ಅಳವಡಿಸಿಕೊಂಡಿದ್ದರಿಂದಲೇ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಬೆಳೆಯುತ್ತಿದೆ” ಎಂದರು.
ಸಂಸ್ಥೆಯ ಅಧ್ಯಕ್ಷ ನರಸಿಂಹ ಬಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿ ಸ್ವರ್ಣಪದಕ ಪುರಸ್ಕೃತ ಮಂಗಳೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ., ಉದ್ಯಮಿ ಎಚ್. ಜಯಶೀಲ ಎನ್. ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ಹಿರಿಯ ರಂಗ ಕಲಾವಿದ, ಚುಟುಕು ಕವಿ ಬಿ. ವಿಠಲದಾಸ್ ಪ್ರಭು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಇವರನ್ನು ಸನ್ಮಾನಿಸಲಾಯಿತು.
‘ಲಾವಣ್ಯ’ದ ಸ್ಥಾಪಾಧ್ಯಕ್ಷ ಉಪ್ಪುಂದ ಶ್ರೀನಿವಾಸ ಪ್ರಭು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ಪದ್ಮನಾಭ ಪಿ., ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನಿವೃತ್ತ ಸಿಇಒ ಸತೀಶ ವಾಮನ ಪೈ, ಉಪನ್ಯಾಸಕ ಕೆ. ದಿನೇಶ ಗಾಣಿಗ, ಉದ್ಯಮಿ ಜಿ. ರಘುವೀರ ನಾಯಕ್ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ವರದಿ ಮಂಡಿಸಿ, ವ್ಯವಸ್ಥಾಪಕ ಸುಬ್ರಹ್ಮಣ್ಯ ಜಿ. ಕಾರ್ಯಕ್ರಮ ನಿರ್ವಹಿಸಿದರು. ನಂತರ ತಂಡದ ಸದಸ್ಯರಿಂದ ‘ಕಂಸಾಯಣ’ ನಾಟಕ ಪ್ರದರ್ಶನಗೊಂಡಿತು.