ಬೆಳಗಾವಿ : ರಂಗಸಂಪದ ಬೆಳಗಾವಿಯು ಆಯೋಜಿಸಿದ ಮೂರು ದಿನಗಳ ಹೆರಿಟೇಜ್ ಕಿಚನ್ ನಾಟಕೋತ್ಸವವು ದಿನಾಂಕ 30-09-2023ರಂದು ಬೆಳಗಾವಿಯ ಟಿಳಕ ಚೌಕ್ ಹತ್ತಿರದ ಕೊನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಉದ್ಘಾಟನೆಗೊಂಡಿತು. ಶ್ರೀಮತಿ.ಸುಮನ ಮತ್ತು ಶ್ರೀ.ಸುಧೀರ ಸಾಲಿಯಾನ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ.ಗುರುನಾಥ ಕುಲಕರ್ಣಿ ಅತಿಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ.ಸುಧೀರ ಸಾಲಿಯಾನ “ನಾಟಕ ಮತ್ತು ಯಕ್ಷಗಾನ ಕಲಾವಿದರಿಗೆ ಬದುಕಾದರೆ ಪ್ರೇಕ್ಷಕರಿಗೆ ಮನೋರಂಜನೆ” ಎಂದು ರಂಗಸಂಪದ ಬೆಳಗಾವಿಯ ರಂಗಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ “ಮರಣ ಮೃದಂಗ ನಾಟಕ ಪ್ರಚಲಿತವಾದ ರಾಜಕೀಯವನ್ನು ಹೆಜ್ಜೆ ಹೆಜ್ಜೆಗೂ ನಮಗೆ ಮನವರಿಕೆ ಮಾಡಿಕೊಡುವಂಥ ಕಥಾವಸ್ತು. ಕಾಲ ಬದಲಾದರೂ ರಾಜಕೀಯ ಬದಲಾಗುವುದಿಲ್ಲ ಎಂಬುದಕ್ಕೆ ಈ ನಾಟಕ ಸಾಕ್ಷಿಯಾಗಿದೆ” ಎಂದರು. ನಟ ಹಾಗೂ ನಿರ್ದೇಶಕ ಯಶವಂತ ಸರದೇಶಪಾಂಡೆ ಮಾತನಾಡಿ “ರಂಗಭೂಮಿಗೆ ಹಾಗೂ ಹೊಸ ಹೊಸ ಕಲಾವಿದರಿಗೆ ಅವಕಾಶ ಕೊಡುವ ಜತೆಗೆ ಪ್ರೇಕ್ಷಕರಲ್ಲಿ ರಂಗಾಸಕ್ತಿ ಮೂಡಿಸುವಂತಹ ಪಾಮಾಣಿಕ ಪ್ರಯತ್ನವನ್ನು ರಂಗಸಂಪದ ಮಾಡುತ್ತಿದೆ.” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಂಗಕರ್ಮಿ ಧಾರವಾಡದ ಹರ್ಷ ಡಂಬಳ, ಹಾಸ್ಯ ಭಾಷಣಕಾರ ರವಿ ಭಜಂತ್ರಿ, ರಾಜೇಶ್ವರಿ ಹಿರೇಮಠ, ಶ್ರೀರಂಗ ಜೋಶಿ, ಡಾ. ನಿರ್ಮಲಾ ಬಟ್ಟಲ, ರತ್ನಾಕರ ಸಾಗರ, ಅರವಿಂದ.ಪಾಟೀಲ, ಪ್ರಸಾದ ಕಾರಜೋಳ ಉಪಸ್ಥಿತರಿದ್ದರು.
ಮೊದಲನೇ ದಿನದ ನಾಟಕ “ಮರಣ ಮೃದಂಗ”
ರಂಗ ಸಂಪದ ಪ್ರದರ್ಶಿಸಿದ ನಾಟಕ ‘ಮರಣ ಮೃದಂಗ’ ಒಂದು ರಾಜಕೀಯ ವಿಡಂಬನೆ ಆದರೂ ಮನುಷ್ಯನ ದುರಾಸೆ ಹಾಗೂ ದುರಹಂಕಾರಗಳ ಅನಾವರಣ ಮಾಡಿತು. ಜೊತೆಗೆ ಸಾವು ಬಂದು ಬಾಗಿಲು ತಟ್ಟಿದಾಗ ಮನುಷ್ಯನ ನಿಜವಾದ ವ್ಯಕ್ತಿತ್ವ ಆನಾವರಣ ಆಗುವುದು. ಇಡೀ ನಾಟಕವನ್ನು ಮುಖ್ಯಮಂತ್ರಿ ಮತ್ತು ಅವನ ಸಹಾಯಕ ಮತ್ತು ಆತ್ಮೀಯ ಸಹಜೀವಿಯಾದ ಭರಮ ಆವರಿಸಿಕೊಂಡಿದ್ದು ಅನನ್ಯ. ನನಗೆ ‘ಭರಮ’ ಮಂತ್ರಿಯ ‘ಅಂತರಾತ್ಮ’ದಂತೆ ಕಂಡು ಸದಾ ಮಂತ್ರಿಯ ತಪ್ಪುಗಳನ್ನು ಎತ್ತಿ ತೋರಿಸುತ್ತಾ ಅವನ ಆ ದುಷ್ಟ ವ್ಯಕ್ತಿತ್ವದ ಅಸ್ತಿತ್ವವನ್ನು ಕಡೆಗಣಿಸುತ್ತಾ ಹೋಯಿತು. ಮದ್ಯದಲ್ಲಿ ಬಂದು ಹೋದ ಪಾತ್ರಗಳಲ್ಲಿ ರೈತ ಪಾತ್ರ ದುಡ್ಡಿಗಿಂತ ಮನುಷ್ಯ ಮುಖ್ಯ ಎಂದು ಮಂತ್ರಿಗೆ ಮನವರಿಕೆ ಮಾಡಿಕೊಟ್ಟರೆ, ಮಗನಿಗಾಗಿ ಹಂಬಲಿಸುವ ವ್ಯಕ್ತಿಯ ಮಗ ತಂದೆಗಾಗಿ ಸುಳ್ಳು ಹೇಳುತ್ತಾ ಅವರಿಂದಲೇ ಬೈಸಿಕೊಳ್ಳುತ್ತಾ ವ್ಯಕ್ತಿಗಾಗಿ ಕಷ್ಟ ಸಹಿಸಿಕೊಳ್ಳುವುದರಲ್ಲೇ ಖುಷಿಇದೆ ಎನ್ನುವುದು ಒಂದು ಎಳೆಯಾದರೆ, ಸುಶ್ರಾವ್ಯವಾಗಿ ಹಾಡಿ ಅತ್ಯಂತ ಎತ್ತರವಾಗಿ ನಟಿಸಿದ ಮಗು ‘ಅಂತರ್ ನನ್ನ ಅಂತರಾತ್ಮವನ್ನು ಅವಳ ಕೊನೆ ಪ್ರವೇಶದಲ್ಲಿ ಕದಲಿಸಿ ಬಿಟ್ಟಳು. ಅವಳ ಸಾವಿನ ದೃಶ್ಯ ಕಣ್ಣಲ್ಲಿ ನೀರು ತರಿಸಿತು. ಕೊನೆಗೆ ಡಾಕ್ಟರ್ ಪಾತ್ರ ದುಷ್ಟತನದ ಜೊತೆಯ ಹೋರಾಟದಲ್ಲಿ ಒಳ್ಳೆಯತನದ ಗೆಲುವು ತಡವಾಗಬಹುದು ಆದರೆ ಸೋಲುವುದಿಲ್ಲ ಎಂಬುದನ್ನು ಎತ್ತಿ ತೋರಿಸಿತು. ಕೊನೆಗೆ ಭರಮ ತನ್ನ ಜೀವದ ಗೆಳೆಯನಿಗೆ ಜೀವ ನೀಡುವುದು ಸಾಂಕೇತಿಕವಾಗಿ ಮಂತ್ರಿಯಲ್ಲಿ ಒಳ್ಳೆಯತನದ ಗೆಲುವು ಮತ್ತು ದುಷ್ಟತನದ ಸೋಲು ಎಂದು ತೋರಿಸಿತು. ಮಂತ್ರಿಯ ಪತ್ನಿ ಮತ್ತು ಮಗನ ಪತ್ರಗಳು ಕ್ಷಣಿಕವಾದರೂ ಅತ್ಯಂತ ಪ್ರಭಾವಶಾಲಿ ಆಗಿದ್ದವು. ಎಲ್ಲಾ ಪಾತ್ರಧಾರಿಗಳು ಅತ್ಯಂತ ಪ್ರಬುದ್ಧವಾಗಿ ನಟಿಸಿದರು. ನಿರ್ದೇಶಕರಿಗೆ ಒಂದು ದೊಡ್ಡ ‘ಸಲಾಂ’ ಅತ್ಯಂತ ಎತ್ತರವಾದ ನಾಟಕವನ್ನು ರಂಗದಮೇಲೆ ಪ್ರದರ್ಶಿಸಿದಕ್ಕೆ.
ಎಂ.ಎಸ್. ಹಿರೇಮಠ, ಶಿಕ್ಷಕರು, ಬೆಳಗಾವಿ ಗ್ರಾಮೀಣದ ಸರಕಾರಿ ಪ್ರೌಢಶಾಲೆ
ಎರಡನೇ ದಿನದ ನಾಟಕ “ಪ್ರಭಾಸ”
ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಮೇರಿ ಕ್ಯೂರಿ ಜೀವನಗಾಥೆಯ ವೈಜ್ಞಾನಿಕ ನಾಟಕವನ್ನು ‘ಅಭಿನಯ ಭಾರತಿ ತಂಡ’ ಧಾರವಾಡ ಇವರು ತುಂಬಾ ಪರಿಣಾಮಕಾರಿಯಾಗಿ ಅಭಿನಯಿಸಿದರು. ವೈಜ್ಞಾನಿಕ ಸಂಶೋಧನೆಯಲ್ಲಿ ವಿಜ್ಞಾನಿಗಳ ನಿಜ ಜೀವನದ ಸಂಗತಿಗಳು ಅನಾವರಣಗೊಂಡಿವೆ. ಮೇಡಂ ಮೇರಿ ಕ್ಯೂರಿ ಪ್ರಮುಖ ಪಾತ್ರ ವಹಿಸಿದ ಜ್ಯೋತಿ ಪುರಾಣಿಕ ದೀಕ್ಷಿತ್ ಮೇಡಂ ಅವರು ಪ್ರಾರಂಭದಿಂದ ಮುಕ್ತಾಯದವರಿಗೂ ಪಾತ್ರದ ಗಾಂಭೀರ್ಯತೆಯನ್ನು ಕಾಯ್ದಕೊಂಡು, ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸಿದರು. ಕುಮಾರಿ ಭೂಮಿ ಪತ್ತಾರ ಹಾಗೂ ವೀರಣ್ಣ ಹೊಸಮನಿಯವರ ಅಭಿನಯ ತುಂಬಾ ಚೆನ್ನಾಗಿತ್ತು. ಹಾಗೆ ಇನ್ನುಳಿದ ಕಲಾವಿದರು ಸಹ ತಮ್ಮ ತಮ್ಮ ಪಾತ್ರಗಳನ್ನು ತುಂಬಾ ನಿಚ್ಚಳವಾಗಿ ಅಭಿನಯಿಸಿ, ಬೆಳಗಾವಿ ರಂಗ ರಸಿಕರ ಮೆಚ್ಚುಗೆಗೆ ಪಾತ್ರರಾದರು. ಇಂತಹ ಒಂದು ಕ್ಲೀಸ್ಟಕರ ನಾಟಕವನ್ನು ಸಾಲಿಯಾನ್ ಉಮೇಶ್ ನಾರಾಯಣ ಅವರು ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ.
ಆರ್.ಬಿ.ಬನಶಂಕರಿ, ವಿಶ್ರಾಂತ ಉಪ ನಿರ್ದೇಶಕರು, ಡಿ.ಇ.ಎಸ್, ಬೆಳಗಾವಿ
ಮೂರನೇ ದಿನ ನಾಟಕ ‘ಸಂಜೆ ಹಾಡು’
ಹಿರಿಯ ನಾಗರಿಕರ ಜೀವನಗಾಥೆಯ ನಾಟಕವನ್ನು ಮೈಸೂರಿನ ‘ಸಂಚಲನ ತಂಡ’ದ ಸದಸ್ಯರು ತುಂಬಾ ಪರಿಣಾಮಕಾರಿಯಾಗಿ ಅಭಿನಯಿಸಿದರು. ಹಿರಿಯ ನಾಗರಿಕರ ಪಾತ್ರದಲ್ಲಿ ಅಭಿನಯಿಸಿದ 23 ವರ್ಷದ ಯುವಕ ಶ್ರೀ ಮೂರ್ತಿ ಅವರು ಪ್ರಾರಂಭದಿಂದ ಮುಕ್ತಾಯದವರೆಗೂ ಪಾತ್ರದ ಮೇಲಿನ ಹಿಡಿತವನ್ನು ಸಾಧಿಸಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಅವರ ಮಗನ ಪಾತ್ರದಲ್ಲಿ ಕಾಣಿಸಿಕೊಂಡ 19 ವರ್ಷದ ಯುವಕ ಹಾಗೂ ಪೇಯಿಂಗ್ ಗೆಸ್ಟ್ ಪಾತ್ರದಲ್ಲಿ ಅಭಿನಯಿಸಿದ 20 ವರ್ಷದ ಯುವಕರೀರ್ವರ ಅಭಿನಯ ವಯಸ್ಸಿಗೆ ಮೀರಿದಂತೆ ಮತ್ತು ಪ್ರೇಕ್ಷಕರ ಮನಮುಟ್ಟುವಂತಿತ್ತು. ಇನ್ನು ಅಡುಗೆ ಭಟ್ಟರ ಪಾತ್ರಧಾರಿ ಊಟದಲ್ಲಿ ಉಪ್ಪಿನ ಕಾಯಿಯಂತೆ ನಾಟಕಕ್ಕೆ ಮೆರುಗು ನೀಡಿದರು. ಹಿನ್ನೆಲೆ ಗಾಯನ ಸಂಗೀತ ಬೆಳಕು ಎಲ್ಲವು ಅಚ್ಚುಕಟ್ಟಾಗಿತ್ತು. ಮೈಸೂರಿನ ಸಂಚಲನ ತಂಡದ ಕಲಾವಿದರು ಪರಿಣಾಮಕಾರಿಯಾಗಿ ಅಭಿನಯಿಸಿ, ಬೆಳಗಾವಿ ರಂಗ ರಸಿಕರಲ್ಲಿ ಸಂಚಲನ ಮೂಡಿಸಿದ್ದು ವಿಶೇಷವಾಗಿತ್ತು. ಇಂತಹ ಒಂದು ಸುಂದರ ನಾಟಕವನ್ನು ವಿನ್ಯಾಸಗೊಳಿಸಿ, ಸಮರ್ಥರೀತಿಯಲ್ಲಿ ತುಂಬಾ ಚೆನ್ನಾಗಿ ನಿರ್ದೇಶಿಸಿದ ಶ್ರೀ ಮಧು ಮಳವಳ್ಳಿಯವರಿಗೂ, ಸಂಚಲನ ತಂಡದ ಎಲ್ಲಾ ಕಲಾವಿದರಿಗೂ ಮತ್ತು ಮೂರು ದಿನಗಳಲ್ಲಿ ಮೂರು ರೀತಿಯ ವಿನೂತನ ಸುಂದರ ನಾಟಕಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಟ್ಟು ಬೆಳಗಾವಿಯ ಪ್ರೇಕ್ಷಕರ ಮನ ಗೆಲ್ಲುತ್ತಿರುವ ‘ರಂಗ ಸಂಪದ’ ಅಧ್ಯಕ್ಷರಾದ ಡಾ. ಅರವಿಂದ್ ಕುಲಕರ್ಣಿ ಸರ್ ಮತ್ತು ಪದಾಧಿಕಾರಿಗಳಿಗೂ ಬೆಳಗಾವಿ ರಂಗಾಸಕ್ತರ ಪರವಾಗಿ ವಂದನೆಗಳು ಅಭಿನಂದನೆಗಳು.
ಆರ್.ಬಿ.ಬನಶಂಕರಿ, ವಿಶ್ರಾಂತ ಉಪ ನಿರ್ದೇಶಕರು, ಡಿ.ಇ.ಎಸ್, ಬೆಳಗಾವಿ