ಉಡುಪಿ : ರಂಗಭೂಮಿ ಉಡುಪಿ ಸಂಸ್ಥೆಯು 60ರ ಸಂಭ್ರಮದಲ್ಲಿದ್ದು ಸಂಸ್ಥೆಯ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ 45 ವರ್ಷಗಳ ಕಾಲ ‘ರಂಗಭೂಮಿ’ಯನ್ನು ಕಟ್ಟಿ ಬೆಳೆಸಿದ ದಿ. ಕುತ್ಪಾಡಿ ಆನಂದ ಗಾಣಿಗರ ಸಂಸ್ಮರಣಾರ್ಥ ಆಯೋಜಿಸುವ ‘ರಂಗಭೂಮಿ ಆನಂದೋತ್ಸವ -2025 ’ ಕಾರ್ಯಕ್ರಮವು ದಿನಾಂಕ 04 ಮೇ 2025ರಂದು ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
‘ರಂಗಭೂಮಿ’ಯ ಆರಂಭದಿಂದ ಇಂದಿನವರೆಗೂ ನಿರಂತರವಾಗಿ ಸಲಹೆ, ಸಹಕಾರ, ಮಾರ್ಗದರ್ಶನ ನೀಡುತ್ತಾ ಮಣಿಪಾಲದ ಪೈ ಕುಟುಂಬದವರು ಸಂಸ್ಥೆಯನ್ನು ಬೆಳೆಸುತ್ತಾ ಬಂದಿದ್ದು, ಟಿ. ಅಶೋಕ್ ಪೈ ಅವರು ನಾಡಿನ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ರಂಗಕ್ಕೆ ನೀಡಿರುವ ಕೊಡುಗೆಗಾಗಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ‘ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ಇದರ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾಹಿತಿ ನೀಡಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ. ಶ್ಯಾಮ್ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಹೆ ವಿ. ವಿ. ಇದರ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿಯಾದ ಪೂರ್ಣಿಮಾ, ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷರಾದ ಉದಯ್ ಕುಮಾರ್ ಕೆ., ಎಂ. ಜಿ. ಎಂ. ಕಾಲೇಜು ಉಡುಪಿ ಇದರ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಮಂಗಳೂರಿನ ಆಯನ ನಾಟಕ ಮನೆಯ ಕಲಾವಿದರು ಪ್ರಸ್ತುತ ಪಡಿಸುವ ‘ಅಶ್ವತ್ಥಾಮ ನಾಟ್ ಔಟ್’ ನಾಟಕದ ಪ್ರದರ್ಶನ ನಡೆಯಲಿದೆ.