ಬಂಟ್ವಾಳ : ಬಿ. ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ (ರಿ.) ಮಂಚಿ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ. ಇದರ ಸಹಯೋಗದಲ್ಲಿ ಆಯೋಜಿಸುವ ಬಿ. ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ ‘ರಂಗಭೂಮಿಕಾ-2025’ ದಿನಾಂಕ 26 ಏಪ್ರಿಲ್ 2025 ರಿಂದ 28 ಏಪ್ರಿಲ್ 2025ರ ವರೆಗೆ ಪ್ರತಿದಿನ ಸಂಜೆ ಘಂಟೆ 6.00ರಿಂದ ಕುಕ್ಕಾಜೆ-ಮಂಚಿಯ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಆವರಣದಲ್ಲಿ ನಡೆಯಲಿದೆ.
26 ಏಪ್ರಿಲ್ 2025 ರ ಶನಿವಾರದಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯರಾದ ಶ್ರೀ ಪಿಯುಸ್ ಎಲ್. ರೊಡ್ರಿಗಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ ಉಳಿಪಾಡಿಗುತ್ತು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯರು, ‘ಅಭಿರುಚಿ’ ಜೋಡುಮಾರ್ಗ ಇಲ್ಲಿನ ಶ್ರೀ ಮಹಾಬಲೇಶ್ವರ ಹೆಬ್ಬಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ. ಇದರ ಸಹಾಯಕ ನಿರ್ದೇಶಕರಾದ ಶ್ರೀ ರಾಜೇಶ್ ಭಾಗವಹಿಸಲಿದ್ದಾರೆ.
ಸಭಾಕಾರ್ಯಕ್ರಮದ ಬಳಿಕ ಮಂದಾರ, ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ), ಬೈಕಾಡಿ ಇವರಿಂದ ಇಟಲಿ ನಾಟಕಕಾರ ‘ದಾರಿಯೋ ಫೋ’ ಇವರ ‘one was nude one wore tail’ ನಾಟಕವನ್ನು ಸಾಹಿತಿ ಪ್ರಕಾಶ್ ಗರುಡ ಕನ್ನಡಕ್ಕೆ ಅನುವಾದಿಸಿದ ‘ಬೆತ್ತಲಾಟ’ ನಾಟಕದ ಪ್ರದರ್ಶನವು ರೋಹಿತ್ ಬೈಕಾಡಿ ಇವರ ವಿನ್ಯಾಸ ಹಾಗೂ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ದಿನಾಂಕ 27 ಏಪ್ರಿಲ್ 2025ರ ಭಾನುವಾರ ಪ್ರಜ್ಞಾನಂ ಟ್ರಸ್ಟ್ ಉಡುಪಿ ಇವರಿಂದ ಸುಧಾ ಅಡುಕಳ ರಂಗ ಪಠ್ಯವನ್ನು ಗಣೇಶ ರಾವ್ ಎಲ್ಲೂರ್ ರಂಗ ವಿನ್ಯಾಸ, ಸಂಗೀತ ಮತ್ತು ನಿರ್ದೇಶಿಸಿ ವಿದುಷಿ ಸಂಸ್ಕೃತಿ ಪ್ರಭಾಕರ್ ಅಭಿನಯಿಸುವ ಏಕ ವ್ಯಕ್ತಿ ನಾಟಕ ‘ಹೆಜ್ಜೆಗೊಲಿದ ಬೆಳಕು’ ಪ್ರದರ್ಶನಗೊಳ್ಳಲಿದೆ.
ದಿನಾಂಕ 28 ಏಪ್ರಿಲ್ 2025ನೇ ಸೋಮವಾರ ಹಿರಿಯ ವಕೀಲರಾದ ಶ್ರೀ ಎಂ. ಈಶ್ವರ ಉಪಾಧ್ಯಾಯ ಬಿ. ಸಿ. ರೋಡ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಯಕ್ಷರಂಗಾಯಣ ಕಾರ್ಕಳ ಇದರ ನಿರ್ದೇಶಕರಾದ ಶ್ರೀ ಬಿ. ವೆಂಕಟರಮಣ ಐತಾಳ ಹಾಗೂ ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ ಕುಕ್ಕಾಜೆ ಇದರ ಅಧ್ಯಕ್ಷರಾದ ಶ್ರೀ ಎನ್. ಸಂಜೀವ ಆಚಾರ್ಯ ಭಾಗವಹಿಸಲಿದ್ದಾರೆ.
ಸಭಾಕಾರ್ಯಕ್ರಮದ ಬಳಿಕ ಯಕ್ಷರಂಗಾಯಣ ಕಾರ್ಕಳ ಪ್ರಸ್ತುತಿ ಪಡಿಸುವ, ಯಕ್ಷರಂಗಾಯಣದ ರಿಪರ್ಟರಿ ಕಲಾವಿದರಿಂದ ಕುಮಾರವ್ಯಾಸ ಭಾರತದ ವಿರಾಟ್ ಪರ್ವದಿಂದ ಆಯ್ದ ಭಾಗವನ್ನು ಬಿ. ವೆಂಕಟರಮಣ ಐತಾಳ ಇವರು ಪರಿಕಲನೆ ಮತ್ತು ನಿರ್ದೇಶಿಸಿದ ‘ಆರೊಡನೆ ಕಾದುವೆನು’ ನಾಟಕ ಪ್ರದರ್ಶನಗೊಳ್ಳಲಿದೆ.
Subscribe to Updates
Get the latest creative news from FooBar about art, design and business.
Next Article ಬ್ಯಾರೀಸ್ ಫೆಸ್ಟಿವಲ್-2025ಕ್ಕೆ ಚಾಲನೆ