ಬೆಂಗಳೂರು: ರಂಗಮಂಡಲ – ಸಿವಗಂಗ ಟ್ರಸ್ಟ್ ಪ್ರಸ್ತುತ ಪಡಿಸುವ ‘ಮ್ಯಾಳ ಕಲಿಯೋಣ ಬಾರ’ ದೊಡ್ಡಾಟ-ಮೂಡಲಪಾಯ ಯಕ್ಷಗಾನ ಉಚಿತ ಶಿಬಿರವು 28 ಮೇ 2023ರಿಂದ 4 ಜೂನ್ 2023ರವರೆಗೆ ಬೆಂಗಳೂರಿನ ಕೆಂಗೇರಿಯ ಸಿವಗಂಗ ರಂಗಮಂದಿರದಲ್ಲಿ ನಡೆಯಲಿದೆ.
ದೊಡ್ಡಾಟ/ಅಟ್ಟದಾಟ/ಬಯಲಾಟ/ಮೇಳೆ ಎಂಬ ದೃಶ್ಯ ಕಲಾಪ್ರಕಾರ ಕರ್ನಾಟಕದ ವಿಶಿಷ್ಟ ಕಲೆ ಯಕ್ಷಗಾನದಷ್ಟೇ ಪುರಾತವಾದ ಶ್ರೀಮಂತವಾದ ದೃಶ್ಯ ಮಾದ್ಯಮ. ಬಯಲುಸೀಮೆಯ ಅಭಿಜಾತ ರಂಗವೈಭವ. ಹಳೆಯ ಮೈಸೂರು ಭಾಗದಲ್ಲಿ ‘ಮ್ಯಾಳ’ ಎಂದೇ ಪ್ರಸಿದ್ಧವಾಗಿರುವ ಶುದ್ಧ ಯಕ್ಷಗಾನ. ಅಧ್ಯಯನ/ಸಂಶೋಧನೆ ಹಾಗೂ ಗುರುತಿಸಲ್ಪಡುವ ಕಾರಣಕ್ಕಾಗಿ ವಿದ್ವಾಂಸರಿಂದ ‘ಮೂಡಲಪಾಯ ಯಕ್ಷಗಾನ’ ಎಂದು ಕರೆಯಲ್ಪಡುವ ‘ಮೇಳ – ಮ್ಯಾಳ’ದ ಕಲಿಕಾ ಶಿಬಿರ.
ಶಿಬಿರವು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ 5ರಿಂದ 8ರವರೆಗೆ ಹಿರಿಯ ಕಲಾವಿದರಾದ ಅರಳಗುಪ್ಪೆ ಕಲ್ಮನೆ ನಂಜಪ್ಪನವರ ಶಿಷ್ಯರಾದ ಯುವ ಭಾಗವತರೂ ಹಾಗೂ ಕಲಾವಿದರಾದ ಎ.ಆರ್. ಪುಟ್ಟಸ್ವಾಮಿ ಅರಳಗುಪ್ಪೆ ಅವರ ನಿರ್ದೇಶನದಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ಖ್ಯಾತ ಕಾದಂಬರಿಗಾರ್ತಿಯಾದ ಆಶಾ ರಘುರವರ ‘ಪೂತನಿ’ಯನ್ನು ರಂಗರೂಪಕ್ಕೆ ಸಜ್ಜುಗೊಳಿಸಲಾಗುತ್ತಿದ್ದು, ಯುವ ಕಲಾವಿದೆ ನಿರ್ಮಲಾ ನಾದನ್ ರವರು ಪೂತನಿಯಾಗಿ ಅಭಿನಯಿಸಲಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ – 9448970731 ಇವರನ್ನು ಸಂಪರ್ಕಿಸಬಹುದು.