ಉಡುಪಿ : ರಾಗಧನ (ರಿ) ಉಡುಪಿ ಸಂಸ್ಥೆಯ ರಾಗ ರತ್ನ ಮಾಲಿಕೆ -18 ವಿದುಷಿ ರಂಜನಿ ಹೆಬ್ಬಾರ್ ಸಂಸ್ಮರಣಾ ಸಂಗೀತ ಕಛೇರಿಯು ದಿನಾಂಕ 18-11-2023ರ ಶನಿವಾರದಂದು ಮಣಿಪಾಲದ ಪರ್ಕಳದಲ್ಲಿರುವ ಸಾರಿಗಮ ಭಾರತಿ ಸಂಗೀತ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಡಾ ಶ್ರೀ ಕಿರಣ ಹೆಬ್ಬಾರ್ ಅವರು ರಂಜನಿಯವರನ್ನು ನೆನಪಿಸಿಕೊಳ್ಳುತ್ತಾ “ರಂಜಿನಿ ಅವರ ಸಂಗೀತದ ಮಾಧುರ್ಯ, ವೈಭವ ಹಾಗೂ ಸೌಂದರ್ಯ ತರಂಗಗಳು ಇನ್ನೂ ಈ ಮಣ್ಣಿನಲ್ಲಿ ಕಂಪನಗಳನ್ನು ಮೂಡಿಸುತ್ತಿದೆ. ಸಂಗೀತದೊಂದಿಗೆ ಆಕೆಯ ಆಧ್ಯಾತ್ಮಿಕ ಯಾನವೂ ಜೊತೆಯಾಗಿ ಸಾಗುತ್ತಿತ್ತು, ಸಂಗೀತ ಸಾಧನೆಯಲ್ಲಿ ಇಂದಿನ ಯುವ ಪೀಳಿಗೆಯ ಸವಾಲುಗಳನ್ನು ಚೆನ್ನಾಗಿ ಅರಿತುಕೊಂಡಿದ್ದ ಅವರು ಅದಕ್ಕಾಗಿ ಸಂಕಲ್ಪವನ್ನು ಮಾಡಿಕೊಂಡಿದ್ದರು. ಆಕೆ ಭೌತಿಕವಾಗಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಆಕೆ ಮರೆಯಬಾರದವರು ಹಾಗೂ ಮರೆಯಲಾಗದವರು. ಅವರ ಸಂಕಲ್ಪವನ್ನು ಪೂರೈಸುವ ಹೊಣೆ ನಮ್ಮದಾಗಿದೆ.“ ಎಂದು ಹೇಳಿದರು.
ವಿನಯ್ ಎಸ್.ಆರ್. ಅವರು ಸಂಸ್ಮರಣಾ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ಅವರಿಗೆ ವಯೊಲಿನ್ ನಲ್ಲಿ ಮಹತೀ ಕೆ. ಕಾರ್ಕಳ ಹಾಗೂ ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಿದರು. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಶ್ರೀಮತಿ ಶರ್ಮಿಳ ರಾವ್ ಹಾಗೂ ಶಿಷ್ಯರಿಂದ ವಯೊಲಿನ್ ವಾದನ ನಡೆಯಿತು. ಅವರಿಗೆ ಬಾಲಚಂದ್ರ ಭಾಗವತ್ ಮೃದಂಗದಲ್ಲಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ರಂಜನಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ವೀ.ಅರವಿಂದ ಹೆಬ್ಬಾರ್ ಉಪಸ್ಥಿತರಿದ್ದರು. ಶ್ರೀಮತಿ ಮೋಹನ ಶ್ಯಾನುಭೋಗ್ ಕಲಾವಿದರನ್ನು ಪರಿಚಯಿಸಿ, ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿಯವರು ಸ್ವಾಗತಿಸಿ ವಂದಿಸಿದರು.