ಕಾರ್ಕಳ : ಮಂಗಳೂರು ವಿಶ್ವವಿದ್ಯಾನಿಲಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿವಿ ಸಂಧ್ಯಾ ಕಾಲೇಜು ಮಂಗಳೂರು ಹಾಗೂ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಕರಾವಳಿ ಸಂಸ್ಕೃತಿ ಸಮಕಾಲೀನ ಸವಾಲುಗಳು’ ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣವು ದಿನಾಂಕ 30-03-2024ರಂದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಆಡಿಯೋ ವಿಶುವಲ್ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಕಾಲೇಜು ವಿಶ್ವಸ್ತ ಮಂಡಳಿ ಸದಸ್ಯರಾದ ಶ್ರೀ ಟಿ.ಎ. ಜಗದೀಶ್ ಇವರ ಅಧ್ಯಕ್ಷತೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರು ಉದ್ಘಾಟಿಸಲಿದ್ದಾರೆ. ಹಿರಿಯ ವಿದ್ವಾಂಸರು ಮತ್ತು ಸಾಹಿತಿಗಳಾದ ಡಾ. ಗಣೇಶ ಅಮೀನ್ ಸಂಕಮಾರ್ ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಇದೇ ಸಮಯದಲ್ಲಿ ಚಿಂತನೆ 1ರಲ್ಲಿ ಆಂಧ್ರಪ್ರದೇಶದ ಕುಪ್ಪಂ ದ್ರಾವಿಡ ವಿ.ವಿ.ಯ ಪ್ರಾಧ್ಯಾಪಕರಾದ ಡಾ. ಬಿ.ಎಸ್. ಶಿವಕುಮಾರ್ ‘ತುಳುನಾಡಿನ ಜಾತ್ರೆಗಳು – ಕೂಡು ಸಮಾಜದ ಮಾದರಿ’, ಚಿಂತನೆ 2ರಲ್ಲಿ ಮಂಗಳೂರಿನ ದೈವ ನರ್ತಕರು ಮತ್ತು ಸಿವಿಲ್ ಇಂಜಿನಿಯರ್ ಡಾ. ರವೀಶ್ ಪಡುಮಲೆ ಇವರು ‘ತುಳುನಾಡಿನ ಮೆಚ್ಚಿ ಕೋಲ, ಬಂಡಿ-ಆಧ್ಯಾತ್ಮಿಕ ನೆಲೆಯ ವೈಶಿಷ್ಟ್ಯ’ ಮತ್ತು ಚಿಂತನೆ 3ರಲ್ಲಿ ದೆಹಲಿ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸುಧಾ ಕುಮಾರಿ ಕೆ. ಇವರು ‘ಕರಾವಳಿಯ ಸಂಸ್ಕೃತಿ – ಹೊರರಾಜ್ಯಗಳಲ್ಲಿ ಅವುಗಳ ಸ್ವರೂಪ’ ಎಂಬ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ‘ತುಳುನಾಡಿನ ಆರಾಧನಾ ಕ್ಷೇತ್ರಗಳು ಮತ್ತು ಅವುಗಳ ವೈಶಿಷ್ಟ್ಯಗಳು’ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡನೆ ನಡೆಯಲಿದೆ. ಮಂಗಳೂರಿನ ವಿಶ್ರಾಂತ ಪ್ರಾಂಶುಪಾಲರಾದ ಶ್ರೀ ಸುಭಾಶ್ಚಂದ್ರ ಕಣ್ವತೀರ್ಥ ಇವರು ಸಮಾರೋಪ ನುಡಿಗಳ್ನಾಡಲಿದ್ದಾರೆ.