ಮಂಗಳೂರು : ಸರಕಾರಿ ಪದವಿ ಪೂರ್ವ ಕಾಲೇಜು ಚೇಳ್ಯಾರು ಮತ್ತು ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ.) ಸೇರಿಗೆಯಲ್ಲಿ ದಿನಾಂಕ 29 ಡಿಸೆಂಬರ್ 2025ರಂದು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಡಾ. ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂಚ ನಾಡೊಂದು’ ಕೃತಿಯ ಓದು ಮತ್ತು ವಿದ್ಯಾರ್ಥಿಗಳಿಗೆ ಕೃತಿ ನೀಡಿಕೆ ಹಾಗೂ ರಾಷ್ಟ್ರಕವಿ ಕುವೆಂಪು ಜನ್ಮ ದಿನದ ನೆನಪು ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಇವರು ಮಾತನಾಡಿ “ತುಳುನಾಡಿನ ಬಹು ಸಂಸ್ಕೃತಿಯ ಆಚರಣೆಗಳು ವಿಚಾರಗಳು ಊರಿಂದ ಊರಿಗೆ ಕುಟುಂಬದಿಂದ ಕುಟುಂಬಕ್ಕೆ ಭಿನ್ನವಾಗಿರುತ್ತದೆ. ಎಲ್ಲಾ ಕ್ರಮಗಳೂ ಮಹತ್ವದಾಗಿದ್ದು ಅವುಗಳ ದಾಖಲೀಕರಣಕ್ಕೆ ಮತ್ತು ಬರವಣಿಗೆಗೆ ಯುವ ಜನತೆ ಮನಸ್ಸು ಮಾಡಬೇಕಾಗಿದೆ” ಎಂದು ನುಡಿದರು.
ಕುವೆಂಪು ನುಡಿ ನಮನ ಸಲ್ಲಿಸಿದ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ಕೃಷ್ಣ ಮೂರ್ತಿ ಮಾತನಾಡಿ “ತನ್ನ ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಗಳಿಂದ ಯುವ ತಲೆಮಾರಿನವರ ಮೇಲೆ ಹೆಚ್ಚು ಪ್ರಭಾವವನ್ನು ಕುವೆಂಪು ಬೀರಿದ್ದಾರೆ. ವಿಶ್ವ ಮಾನವ ಸಂದೇಶ, ಪ್ರಜಾಪ್ರಭುತ್ವದ, ಸರ್ವೋದಯದ, ಪ್ರಕೃತಿ ಪ್ರೇಮದ ವಿಶಿಷ್ಟ ಪರಿಕಲ್ಪನೆಗಳ ಮೂಲಕ ಕುವೆಂಪು ಚಿಂತನೆಗಳು ನಿತ್ಯ ನೂತನವಾಗಿವೆ” ಎಂದರು.

ಬಾರಗೆರೆ ಬರಂಬು ಕೃತಿಯ ಕುರಿತು ಮಾತನಾಡಿದ ಸಾಹಿತಿ ಬೆನ್ನೆಟ್ ಅಮ್ಮನ್ನ “ಕ್ಷೇತ್ರ ಕಾರ್ಯದ ಅನುಭವ ಕಥನವನ್ನು ಈ ಕೃತಿಯಲ್ಲಿ ವಿಶಿಷ್ಟವಾಗಿ ಕಟ್ಟಿ ಕೊಡಲಾಗಿದೆ” ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಹಾಗೂ ಸಾಹಿತಿ ಡಾ. ಜ್ಯೋತಿ ಚೇಳ್ಯಾರು ಮಾತನಾಡಿ “ಕುವೆಂಪು ಅವರ ಸಾಹಿತ್ಯ ಹಾಗೂ ವಿಚಾರ ಚಿಂತನೆಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಇಂದಿರಾ ಹೆಗ್ಗಡೆಯವರ ತುಳುನಾಡಿನ ಸಂಸ್ಕೃತಿಯ ಕುರಿತಾದ ಸಂಶೋಧನೆಗಳು ಬಹು ಮುಖ್ಯವಾಗಿದ್ದು ಅದನ್ನು ಓದುವ ಅವಕಾಶ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದೆ” ಎಂದರು.
ಉಪನ್ಯಾಸಕಿ ಜಯಶ್ರೀ ಜಿ. ಸ್ವಾಗತಿಸಿ, ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಸದಸ್ಯೆ ಸುಜಾತ ವಂದಿಸಿ, ಉಪನ್ಯಾಸಕ ಚಂದ್ರನಾಥ್ ಎಂ. ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿಯರಾದ ಶೋಭಾ ಶರ್ಮಾ, ಅಪರ್ಣ, ತ್ರಿವೇಣಿ, ಜಯಶ್ರೀ ಮತ್ತು ಸಾಹಿತಿ ಡಾ. ದಿನಕರ ಪಚ್ಚನಾಡಿ ಉಪಸ್ಥಿತರಿದ್ದರು.
