ಮಂಗಳೂರು : ಜೆನೆಸಿಸ್ ಪ್ರಕಾಶನ ಮಂಗಳೂರು ವತಿಯಿಂದ ಲೇಖಕ ಮಾರ್ಸೆಲ್ ಎಂ. ಡಿ’ಸೋಜಾ (ಮಾಚ್ಯಾ, ಮಿಲಾರ್)ರವರ ‘ಚಂದ್ರೆಮ್’ ಕೊಂಕಣಿ ಇ- ಮಾಸಿಕ ಪತ್ರಿಕೆಯ ಲೋಕಾರ್ಪಣೆಯು ದಿನಾಂಕ 20-03-2024ರಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು.
ಪತ್ರಿಕೆಯನ್ನು ಎಂ.ಸಿ.ಸಿ. ಬ್ಯಾಂಕ್ ನಿರ್ದೇಶಕ ಜೆರಾಲ್ಡ್ ಪಿಂಟೊ (ಜೆರಿ ನಿಡ್ಡೋಡಿ) ಅವರು ಬಿಡುಗಡೆಗೊಳಿಸಿ “ಕೊಂಕಣಿ ಭಾಷೆಯಲ್ಲಿ ಮಕ್ಕಳ ಬರಹಕ್ಕಾಗಿ ಕೆಲವು ಪತ್ರಿಕೆಗಳು ಮಂಗಳೂರಿನಿಂದ ಪ್ರಕಟವಾಗುತ್ತಿದ್ದವು. ಕಾಲಕ್ರಮೇಣ ಅವು ಮುಚ್ಚಲ್ಪಟ್ಟವು. ಮಕ್ಕಳ ಸಾಹಿತ್ಯ ಉಳಿಸಿ, ಬೆಳೆಸಲು ಕೊಂಕಣಿ ಸಾಹಿತಿ ಮಾಚ್ಯಾ, ಮಿಲಾರ್ ಅವರ ಪ್ರಯತ್ನ ಯಶಸ್ವಿಯಾಗಲಿ. 20 ವರ್ಷಗಳಿಂದ ಲೇಖಕ ಮಾಚ್ಯಾ, ಮಿಲಾರ್ ರವರು ಜೆನೆಸಿಸ್ ಪ್ರಕಾಶನದ ಮೂಲಕ ಕೊಂಕಣಿ ಪುಸ್ತಕಗಳನ್ನು ಪ್ರಕಟಿಸಿ ಕೊಂಕಣಿಯ ಸೇವೆ ಮಾಡುತ್ತಿದ್ದಾರೆ. ಕೊಂಕಣಿ ಭಾಷೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಇದೊಂದು ಉತ್ತಮ ಪ್ರಯತ್ನವಾಗಿದೆ” ಎಂದು ಹೇಳಿದರು.
“2004ರ ಸೆಪ್ಟೆಂಬರ್ ನಲ್ಲಿ ಕೊಂಕಣಿ ಚುಟುಕು ಹಾಗೂ ಕವಿತಾ ಸಂಕಲನ ‘ಕಾಳ್ಜಾಪರ್ಜಳ್’ ಕೃತಿಯ ಪ್ರಕಟಣೆಯ ಮೂಲಕ ಆರಂಭವಾದ ಜೆನೆಸಿಸ್ ಪ್ರಕಾಶನಕ್ಕೆ ಈಗ ವಿಂಶತಿ ಸಂಭ್ರಮ. ಕೊಂಕಣಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಇದುವರೆಗೆ ಒಟ್ಟು 16 ಪುಸ್ತಕಗಳನ್ನು ಪ್ರಕಟಿಸಿದ್ದೇನೆ. ಇನ್ನೂ ನಾಲ್ಕು ಪುಸ್ತಕಗಳನ್ನು ಈ ವರ್ಷದಲ್ಲಿ ಪ್ರಕಟಿಸುವ ಗುರಿ ಇದೆ. ವಿಂಶತಿ ಸಂಭ್ರಮವನ್ನು ಸ್ಮರಣೀಯಗೊಳಿಸಲು ಮಕ್ಕಳಿಗಾಗಿ ‘ಚಂದ್ರೆಮ್’ ಇ ಮಾಸಿಕವನ್ನು ಆರಂಭಿಸಿದ್ದೇನೆ. ಇ-ಪತ್ರಿಕೆ ಮಕ್ಕಳ ಓದಿಗೆ ಅನುಕೂಲವಾಗುವಂತೆ ಕೆನರಾ ಕೊಂಕಣಿ ಭಾಷೆಯಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಲಿಪಿಗಳಲ್ಲಿ ಪ್ರಕಟಿಸಲಾಗುತ್ತದೆ. ಕೆನರಾ ಕೊಂಕಣಿ ಭಾಷೆ ಬರೆಯಲು ಹಾಗೂ ಓದಲು ಮಕ್ಕಳು ಕಲಿತು ಕೊಂಕಣಿ ಭಾಷೆ ಬೆಂಬಲಿಸುವ ಭರವಸೆ ಇದೆ. 2023ರ ಸಪ್ಟೆಂಬರ್ ನಿಂದ ಆಗಸ್ಟ್ 2024ರವರೆಗೆ ಪ್ರಕಟಿಸಿದ ಕೊಂಕಣಿ (ಕನ್ನಡ ಲಿಪಿ) ಉತ್ತಮ ಕೃತಿಗೆ ರೂ.10,000/- ನಗದು ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಈ ಪ್ರಶಸ್ತಿಯನ್ನು ಇನ್ನೂ ಪ್ರತಿವರ್ಷವೂ ನೀಡಲಾಗುವುದು” ಎಂದು ಲೇಖಕ ಮಾಚ್ಯಾ, ಮಿಲಾರ್ ಹೇಳಿದರು.
ಕೊಂಕಣಿ ಲೇಖಕ ಸಂಘದ ಮುಖ್ಯ ಸಂಚಾಲಕ ರಿಚಾರ್ಡ್ ಮೊರಾಸ್, ಕೊಂಕಣಿ ಹಿರಿಯ ಸಾಹಿತಿ ಜೆ.ಎಫ್. ಡಿಸೋಜ, ಕಲ್ಲಚ್ಚು ಪ್ರಕಾಶನದ ವ್ಯವಸ್ಥಾಪಕ ಮಹೇಶ್ ನಾಯಕ್ ಉಪಸ್ಠಿತರಿದ್ದರು.