ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಜಂಟಿ ಆಶ್ರಯದಲ್ಲಿ ದಿನಾಂಕ 17, 18 ಮತ್ತು 19 ಫೆಬ್ರವರಿ 2025ರಂದು ಮಂಜೇಶ್ವರದ ಗೋವಿಂದ ಪೈ ಕಾಲೇಜಿನಲ್ಲಿ ನಡೆದ ಭಾಷಾಂತರಕಾರರ ನಾಲ್ಕನೇ ಸಮಾವೇಶ ಕನ್ನಡ ಸಾಹಿತ್ಯ ಕಾರ್ಯಕ್ರಮಗಳಿಗೆ ಅಪೂರ್ವ ಮಾದರಿಯನ್ನು ಹಾಕಿಕೊಟ್ಟಿದೆ. ಮುಂದಿನ ಎರಡು ದಿನಗಳ ಕಾರ್ಯಕ್ರಮದ ಪೀಠಿಕೆ ಎಂಬಂತೆ ಆಯೋಜಿಸಿದ ಪುಸ್ತಕ ಬಿಡುಗಡೆ ಸಮಾರಂಭವು ಮನಸೂರೆಗೊಳ್ಳುವಂತಿತ್ತು. ಸಾಹಿತ್ಯಾಸಕ್ತರಿಗೆ ಖುಶಿ ಕೊಡುವಂತಿತ್ತು. ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವ ಮೂರ್ತಿಯವರು “ಭಾಷಾ ಶಾಸ್ತ್ರದ ವಿಷಯಕ್ಕೆ ಸಂಬಂಧಿಸಿದ ವಿದ್ವಾಂಸರು ಇತ್ತೀಚೆಗೆ ಕಡಿಮೆಯಾಗುತ್ತಿದ್ದಾರೆ. ಭಾಷಾ ಶಾಸ್ತ್ರದ ವಿಷಯ ಮರೀಚಿಕೆಯಾಗಿದೆ. ಭಾಷೆ ಮತ್ತು ಸಂಸ್ಕೃತಿಯ ವಿಚಾರ ಚಿಂತಾಜನಕವಾಗಿದೆ” ಎಂದು ಹೇಳಿದ್ದು ವಾಸ್ತವವಾದರೂ “ಈಗಿನ ವಿದ್ಯಾರ್ಥಿಗಳು ಅಂಕಗಳ ಹಿಂದೆ ಹೋಗುತ್ತಾರೆ. ಆದ್ದರಿಂದ ಭಾಷೆ ಮತ್ತು ಸಂಸ್ಕೃತಿ ಅಳಿಸಿ ಹೋಗುವ ಆತಂಕ ಎದುರಾಗಿದೆ. ಶಾಸ್ತ್ರೀಯ ಬೇರುಗಳು ಉಳಿದರೆ ಮಾತ್ರ ಹೊಸ ಜ್ಞಾನ ಲಭಿಸಲು ಸಾಧ್ಯ. ಈ ನಿಟ್ಟಿನಲ್ಲಿ ಡಾ. ಸುಭಾಷ್ ಪಟ್ಟಾಜೆಯವರ ‘ಬಹುಮುಖಿ’, ವಿಶ್ವನಾಥ ನಾಗಠಾಣ ಅವರ ‘ಕೃತಿಶೋಧ’, ಡಾ. ಮೋಹನ ಕುಂಟಾರ್ ಅವರ ‘ಎಂ.ಟಿ. ವಾಸುದೇವನ್ ನಾಯರ್ ಕಥೆಗಳು’, ‘ಪುರಾಣ ಕಥಾಕೋಶ’ ಎಂಬ ಕೃತಿಗಳು ಯಶಸ್ವಿಯಾಗಿವೆ” ಎಂದು ಅಭಿಪ್ರಾಯಪಟ್ಟದ್ದು ಲೇಖಕರ ಸತ್ವ, ಭಾಷಾ ಪ್ರೇಮ ಮತ್ತು ನಿಸ್ವಾರ್ಥ ಸಾಹಿತ್ಯ ಸೇವೆಗೆ ಸಂಬಂಧಿಸಿದಂತೆ ಆಶಾವಾದಿ ಬೆಳವಣಿಗೆ ಎನಿಸಿತು.
‘ಬಹುಮುಖಿ’ ಕೃತಿಯ ಬಗ್ಗೆ ಮಾತನಾಡಿದ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆಯವರು “ಸಂಶೋಧಕರಾಗಿ, ಭಾಷಾಂತರಕಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಡಾ. ಸುಭಾಷ್ ಪಟ್ಟಾಜೆಯವರು ಸಲ್ಲಿಸಿದ ಸೇವೆ ವಿಶಿಷ್ಟ. ಭಾಷಾಂತರ ಅಧ್ಯಯನ ಮತ್ತು ಸೃಜನಶೀಲ ಕೃತಿಗಳ ಅನುವಾದ ಮೂಲಕ ಅವರು ನೀಡಿದ ಕೊಡುಗೆ ಅಪಾರ” ಎಂದು ನುಡಿದರೆ ‘ಕೃತಿಶೋಧ’ದ ಬಗ್ಗೆ ಮಾತನಾಡಿದ ಎಸ್.ಆರ್. ಅರುಣಕುಮಾರ್, “ಮೂಲತಃ ಗಣಿತ ಅಧ್ಯಾಪಕರಾದ ನಾಗಠಾಣ ಅವರು ಯಾವುದೇ ಸಂಶೋಧನೆಯ ಹಿನ್ನೆಲೆ ಇರದಿದ್ದರೂ ತಮ್ಮ ಆಸಕ್ತಿ ಮತ್ತು ಅಧ್ಯಯನದ ಫಲವಾಗಿ ಇಂಥ ಸಂಶೋಧನ ಕೃತಿಯನ್ನು ಕೊಟ್ಟಿರುವುದು ಸ್ಮರಣೀಯ” ಎಂದದ್ದು ಮೋಹನ ಕುಂಟಾರರ ವ್ಯಕ್ತಿತ್ವ ಮತ್ತು ಸಾಹಿತ್ಯದ ಬಗ್ಗೆ ಕೃತಿಗಳನ್ನು ರಚಿಸಿದ ಬರಹಗಾರರ ಶಕ್ತಿ ಮತ್ತು ಕುಂಟಾರರ ಸಾಹಿತ್ಯ ಸೇವೆಯನ್ನು ಜೊತೆಜೊತೆಯಾಗಿ ಮನವರಿಕೆ ಮಾಡಿಸುವಂತಿತ್ತು. ಎಂ.ಟಿ. ವಾಸುದೇವನ್ ನಾಯರ್ ಕತೆಗಳ ಕುರಿತು ಯುವ ವಿಮರ್ಶಕ ವಿಕಾಸ ಹೊಸಮನಿಯವರು “ಅನುಭವಗಳಿಂದ ರೂಪುಗೊಂಡ ಎಂ.ಟಿ.ಯವರ ಕತೆಗಳು ಮನುಷ್ಯ ಜೀವನದ ಹಲವು ಮಗ್ಗುಲುಗಳನ್ನು ತಲಸ್ಪರ್ಶಿಯಾಗಿ ಮತ್ತು ಹೃದಯಂಗಮವಾಗಿ ತೆರೆದಿಡುತ್ತವೆ. ಮನುಷ್ಯ ಮತ್ತು ಮನುಷ್ಯತ್ವದ ಕುರಿತು ಬರೆದ ಕತೆಗಳು ದೇಶ, ಕಾಲ, ಭಾಷೆಗಳನ್ನು ಮೀರಿ ನಿಲ್ಲುತ್ತವೆ. ಎಂ.ಟಿ.ಯವರ ಕಥಾಜಗತ್ತಿಗೆ ಈ ಕೃತಿಯು ಒಂದು ಉತ್ತಮ ಪ್ರವೇಶಿಕೆಯಾಗಿದೆ” ಎಂದ ಮಾತು ಎಂ.ಟಿ.ಯವರ ಕತೆಗಳ ಮಹತ್ವವನ್ನು ತಿಳಿಸಿತು. ‘ಪುರಾಣ ಕಥಾಕೋಶ’ದ ಬಗ್ಗೆ ಯಕ್ಷಗಾನ ಕಲಾವಿದ ತಾರಾನಾಥ ವರ್ಕಾಡಿಯವರು ಮಾತನಾಡಿ, “ಅಧ್ಯಾತ್ಮ ಮತ್ತು ಪುರಾಣ ಕಥೆಗಳಿಗೆ ಸಂಬಂಧಿಸಿದ ಸಣ್ಣ ಪುಟ್ಟ ಪ್ರಸಂಗಗಳನ್ನು ಕಥೆಯ ರೂಪದಲ್ಲಿ ಅಚ್ಚುಕಟ್ಟಾಗಿ ಕಟ್ಟಿ ಕೊಟ್ಟಿರುವ ಹಿರಿಯರ ಶ್ರಮ ಮತ್ತು ಅದನ್ನು ಸಂಪಾದಿಸಿ ಹೊಸ ತಲೆಮಾರಿಗೆ ದಾಟಿಸುವ ಕೆಲಸ ಅಭಿನಂದನೀಯ” ಎಂದು ಹೇಳಿದರು.
ಆಪ್ತ ಮತ್ತು ಪ್ರಾಮಾಣಿಕ ಓದು, ಅಧ್ಯಯನ, ಚಿಂತನೆಯನ್ನು ಬಳಸಿ ಉಪನ್ಯಾಸವನ್ನು ಮಾಡಿದ ಎಲ್ಲರೂ ತಮ್ಮ ಅನುಭವಲೋಕವನ್ನು ಚೆನ್ನಾಗಿ ತೆರೆದಿಟ್ಟರು. ಅದರಲ್ಲೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿಯವರ ಎರಡು ದಿನಗಳ ಉಪಸ್ಥಿತಿ – ಉದ್ಘಾಟನಾ ಭಾಷಣಗಳು ಸ್ಫೂರ್ತಿಯನ್ನು ತುಂಬಿದರೆ ಬಹುಮುಖಿ ಕೃತಿಯ ಲೇಖಕ ಡಾ. ಸುಭಾಷ್ ಪಟ್ಟಾಜೆ ಮತ್ತು ಎಂ.ಟಿ. ವಾಸುದೇವನ್ ನಾಯರ್ ಅವರ ಕತೆಗಳ ವಿಮರ್ಶೆಯ ಮೂಲಕ ವಿಕಾಸ ಹೊಸಮನಿಯವರು ಯುವ ಜನರ ಪ್ರತಿನಿಧಿಗಳಾಗಿ ಮಾದರಿ ವಿಮರ್ಶೆ ಅವಲೋಕನ, ಅಧ್ಯಯನಗಳ ಮೂಲಕ ವಿಶೇಷವಾಗಿ ಗಮನ ಸೆಳೆದರು. ಎಲ್ಲರದ್ದೂ ತಿಳಿಗನ್ನಡದ ನಿರರ್ಗಳ ಮಾತುಗಳು.
ಗೋವಿಂದ ಪೈ ಕಾಲೇಜಿನ ಸಭಾಂಗಣದಲ್ಲಿ ನುರಿತ ಭರತನಾಟ್ಯ ಕಲಾವಿದರು ನೃತ್ಯ ಗೀತ ರೂಪಕವೊಂದನ್ನು ಪ್ರಸ್ತುತಪಡಿಸಿದ ರೀತಿ ಪ್ರಶಂಸನೀಯವಾಗಿತ್ತು. ರಂಜನೀಯ ಎಂದು ಒಂದೇ ಮಾತಿನಲ್ಲಿ ಅನ್ನುವುದಕ್ಕಿಂತ ಭಿನ್ನವಾಗಿ ಬೇರೇನೂ ಹೇಳಲು ಸಾಧ್ಯವಾಗದಿದ್ದರೂ ಹೇಳದಿರಲು ಮನಸ್ಸು ಕೇಳದು. ಪ್ರಯೋಗಶೀಲತೆಗೆ ಒತ್ತು ಕೊಟ್ಟ ತಂಡದ ದುಡಿಮೆ ನುರಿತ ಗುರುವಿನಿಂದ ದೊರೆತ ತರಬೇತಿಯನ್ನು ಅಳವಡಿಸಿಕೊಂಡು ಗೆದ್ದಿದೆ.
ಸಾಹಿತ್ಯ – ಸಂಗೀತ ಮತ್ತು ನೃತ್ಯ – ಗೀತಗಳ ನಡುವಿನ ಸಂಬಂಧಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಸಂಸ್ಕೃತದ ಪದಸಂಪತ್ತನ್ನು ಅಥವಾ ಕೆಲವು ಶ್ಲೋಕಗಳನ್ನು ಬಳಸಿದಾಗ ಭರತನಾಟ್ಯ ಯಶಸ್ವಿಯಾಗುತ್ತದೆ. ಆದರೆ ಕನ್ನಡದ ಭಾವಗೀತೆ, ಭಕ್ತಿಗೀತೆಗಳು ಅಷ್ಟಾಗಿ ಅಳವಡುವುದಿಲ್ಲ. ಜಾನಪದ ನೃತ್ಯಕ್ಕಾದರೆ ಹೊಂದಿಕೆಯಾಗುತ್ತದೆ. ಯಾಕೆಂದರೆ ಅಲ್ಲಿ ಏನಾದರೂ ಕಥೆ ಇರುತ್ತದೆ. ಅದು ಸ್ಪಷ್ಟವಾದ ಭಾವ ಪ್ರಕಟಣೆ, ಅಭಿನಯಗಳಿಗೆ ಪುಷ್ಟಿಕೊಡುತ್ತದೆ. ನೃತ್ಯರೂಪಕವಂತೂ ಅಭಿನಯ- ನೃತ್ಯಗಳ ಸುಂದರ ಸಂಗಮವಾಗಿತ್ತು. ಅಭಿನಯಿಸಿ ತೋರಿಸುವ ವೇಳೆಯಲ್ಲಿ ಮೌನವಾಗುವ ಹಿನ್ನೆಲೆ ಹಾಡು, ಜೊತೆ ಸೇರುವ ಹಿತವಾದ ಕೊಳಲು ವಾದನ ಮತ್ತು ಮೃದಂಗದ ಇಂಪಾದ ದನಿ ಚೇತೋಹಾರಿಯಾಗಿತ್ತು. ಮೋಹನ ಕುಂಟಾರರು ಕವಿತೆಗಳಲ್ಲಿ ಕಟ್ಟಿದ ಕಥೆಯನ್ನು ತಿಳಿಸುವ ಗೀತೆಗಳು ಜೀವ ವೈವಿಧ್ಯಕ್ಕೆ ಕುತ್ತಾಗುವ ಪ್ರಾಕೃತಿಕ, ಮಾನುಷಿಕ ದುರಂತಗಳನ್ನು ಸ್ಪಷ್ಟವಾಗಿ ಅನಾವರಣ ಮಾಡುತ್ತಿದ್ದುರಿಂದ ಸಂವಹನಕ್ಕೆ ಅಡ್ಡಿಯಾಗಲಿಲ್ಲ. ಕೃಷಿಯ ನೆಲ, ಅರಣ್ಯ ಜಗತ್ತಿನ ಗೋವು ಮತ್ತು ಹುಲಿಗಳ ಸಂರಕ್ಷಣೆಯ ಹೊಣೆಗಾರಿಕೆಯನ್ನು ಜನರಿಗೆ ಸಂದೇಶದ ರೂಪದಲ್ಲಿ ತಿಳಿಸುವ ಕಥಾನಕ ಭಾವನಾತ್ಮಕ ನೆಲೆಯಲ್ಲಿ ಮೂಡಿ ಬಂತು.
ಮುಂದಿನ ಎರಡು ದಿನಗಳ ವಿಚಾರ ಸಂಕಿರಣಗಳಲ್ಲಿ ಗಂಭೀರ ಹಾಗೂ ಜವಾಬ್ದಾರಿಯುತ ಭಾಷಣಗಳ ಮೂಲಕ ನಡೆಸಿದ ಸಂವಹನ ಪರಿಣಾಮಕಾರಿಯಾಗಿತ್ತು. ಮೋಹನ ಕುಂಟಾರರ ಪ್ರತಿಯೊಂದು ಮಾತೂ ಕಾರ್ಯಕ್ರಮದ ಅಗತ್ಯ, ಗುರಿ, ರೀತಿ ನೀತಿಗಳ ಮುನ್ನೋಟವನ್ನು ಕೊಟ್ಟು ಹಳಿ ತಪ್ಪದ ನಿರ್ವಹಣೆಗೆ ಬೆಂಬಲವನ್ನು ನೀಡಿತು. ಸಮಾರೋಪದ ಮಾತುಗಳು ಮೌಲ್ಯಮಾಪನದಂತಿದ್ದರೂ ಎಲ್ಲರ ಅಭಿಪ್ರಾಯಗಳಿಗೆ ಹೊಂದಿಕೆಯಾಯಿತು.
ಅನುವಾದ ಎಂಬ ವಿಷಯದೊಂದಿಗೆ ಅರುವತ್ತು ವರ್ಷಗಳ ಹೊಕ್ಕುಬಳಕೆ ನನಗಿದೆ. ಆ ಕುರಿತು ಪಾಠ ಮಾಡಿದವನೂ ಹೌದು. ಪುಸ್ತಕವನ್ನು ಕೂಡ ಬರೆದಿದ್ದೇನೆ. ಆದರೂ ಕೊನೆಯ ದಿನ ಜನಾರ್ದನ ಭಟ್ಟರ ಕೃತಿ ಕೈಗೆ ಸಿಕ್ಕಿ, ಜೊತೆಗೆ ಅವರ ಮಾತನ್ನೂ ಕೇಳಿ ಒಂದು ಪುನರ್ ಚಿಂತನ ಶಿಬಿರದಲ್ಲಿ ಭಾಗವಹಿಸಿದ ಸಂತೃಪ್ತಿಯಾಯಿತು. ಕುಂಟಾರರ ಕೃತಿಗಳ ವಸ್ತು ವೈವಿಧ್ಯ ಅನುಭವಗಳ ಹೊಸ ಜಗತ್ತನ್ನು ಪರಿಚಯಿಸಿದವು. ಹಂಪಿಯ ಸಂಶೋಧನ ವಿದ್ಯಾರ್ಥಿಗಳು ಈ ಮಟ್ಟಿಗಿನ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಭಾಗಿಗಳಾಗಿ ಹೊಸ ಅರಿವಿನ ನೆಲೆಗೆ ತಲುಪಿದ್ದಾರೆಂದು ಊಹಿಸಲು ಅಡ್ಡಿಯಿಲ್ಲ. ಆ ವಿದ್ಯಾರ್ಥಿಗಳ ವಿಚಾರ ಸಂಕಿರಣವನ್ನು ಅಳವಡಿಸಿದ್ದು ಪ್ರಶಂಸನೀಯ. ಕುಳ್ಳಿರಿಸಿ ಸಂವಾದವನ್ನು ಏರ್ಪಡಿಸಿದ್ದರೆ ಹೆಚ್ಚು ಪರಿಣಾಮಕಾರಿಯಾಗುತ್ತಿತ್ತು.
ಕೆ.ವಿ. ಕುಮಾರನ್ ಅವರ ಅನುವಾದ ಮೂಲಕೃತಿಯಂತೆ ಓದಿಸುತ್ತದೆ ಎಂದಾಗ ಬೆಚ್ಚಿಬಿದ್ದೆ. ಯಾಕೆಂದರೆ ನನ್ನ ಅನುವಾದಗಳ ಕುರಿತೂ ಅಂಥ ಪ್ರತಿಕ್ರಿಯೆಗಳು ಬಂದಿದ್ದವು. ನನ್ನ ಪ್ರಾಮಾಣಿಕತೆ ಹಾಗೂ ಅಕಡೆಮಿಕ್ ಶಿಸ್ತು ದಾರಿ ತಪ್ಪಿಸಿರಬಹುದೇನೋ. ಓದಿ ಖುಶಿಯಾದಾಗ ಅದನ್ನು ಕನ್ನಡಕ್ಕೆ ತರಲೇಬೇಕೆನಿಸಿ ತರ್ಜಮೆ ಮಾಡುತ್ತ ಬಂದಿದ್ದ ನಾನು ನೂರಾರು ಕಥೆ ಕಾದಂಬರಿಗಳನ್ನು ಅನುವಾದಿಸಿದ ಪಯ್ಯನ್ನೂರು ಕುಞ್ಞಿರಾಮನ್ ಅವರ ಬೆರಗು ಹುಟ್ಟಿಸುವ ದುಡಿಮೆಗೆ ತಲೆಬಾಗಿದೆ. ಮೊದಲ ಬಾರಿ ಎಚ್.ಎಸ್.ಎಂ. ಪ್ರಕಾಶರನ್ನು ಭೇಟಿಯಾಗಿ ಖುಶಿಪಟ್ಟೆ. ತಾಳ್ತಜೆಯವರ ಇದಮಿತ್ಥಂ ಎಂಬ ಮಾತುಗಳು, ಎಸ್.ಆರ್. ವಿಜಯಶಂಕರರ ವಿಮರ್ಶೆಯ ಮೋಡಿ, ಎಲ್.ಜಿ. ಮೀರಾ ಅವರ ಮಾತುಗಳು ಚಿಂತನೆಗೆ ಹಚ್ಚಿದವು.
ಕಾರ್ಯಕ್ರಮಕ್ಕೆ ಚಾಲನೆಯನ್ನು ಕೊಟ್ಟ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಮೊಹಮ್ಮದಾಲಿ, ಕನ್ನಡ ವಿಭಾಗದ ಮುಖ್ಯಸ್ಥ ಶಿವಶಂಕರ, ಡಾ. ಸುಜಿತ್, ಪ್ರೊ. ಜಯಂತಿ ಮತ್ತು ವಿದ್ಯಾರ್ಥಿಗಳಿಂದ ಸಂದ ಆತಿಥ್ಯ ಉಲ್ಲೇಖನೀಯ. ಸಾಹಿತ್ಯ ಸೇವೆಯನ್ನು ಯುವ ಜನತೆ ಹೇಗೆ ಮುಂದಕ್ಕೆ ಒಯ್ಯುತ್ತದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ನಾವು ಕಾಳಜಿ ವಹಿಸಬೇಕಾಗಿದೆ. ದುರಂತವೆಂದರೆ ಕನ್ನಡವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿದವರು ನಾಡಿನಾದ್ಯಂತ ನಾಯಕತ್ವದ ಪ್ರತಿಬಿಂಬಗಳಾಗಿಲ್ಲ. ಅಷ್ಟೊಂದು ಹಳಮೆ, ಶ್ರೀಮಂತಿಕೆಯುಳ್ಳ ಕನ್ನಡ ಭಾಷೆ ಹಾಗೂ ಸಾಹಿತ್ಯದ ವಿದ್ಯಾರ್ಥಿಗಳು ಪ್ರಪಂಚಕ್ಕೇ ಅಭಿಮಾನಕ್ಕೆ ಪಕ್ಕಾಗಬೇಕಾದವರು ಎಂಬ ಸತ್ಯ ಅಂಥವರ ಮನಸ್ಸಲ್ಲಿ ಹೊಳೆಯುವಂತಾಗಬೇಕು.
ಮೇರೆಯಿಲ್ಲದ ದೇಶೀಯ ಜ್ಞಾನ ಸಂಪತ್ತನ್ನು ಬಳಸಿ ಸ್ವಾತಂತ್ರ್ಯಪೂರ್ವ ಒತ್ತಡ, ಆಮಿಷಗಳ ನಡುವೆಯೂ ಸಿಂಹದಂತೆ ನಡೆದಾಡಿದ ಪೈಗಳ ನೆಲದಲ್ಲಿ ಮತ್ತೆ ತುಂಬಿ ಪ್ರವಹಿಸಿದ ಕನ್ನಡ ವಾತಾವರಣ ಅಂದಿನ ವೈಭವದ ಆವರ್ತನೆಯಂತಿತ್ತು.
ಲೇಖಕರು : ಪಿ.ಎನ್. ಮೂಡಿತ್ತಾಯ