ಬೆಂಗಳೂರು: ಪರಿಣತ ಅಭಿನಯ- ಹರಿತ ನೃತ್ಯ ಪಾಂಡಿತ್ಯದಲ್ಲಿ ಪಂದನಲ್ಲೂರು ಬಾನಿಯಲ್ಲಿ ಹೆಸರು ಮಾಡಿರುವ ‘’ಉಷಾಸ್ ಫೌಂಡೇಶನ್ ‘ ನೃತ್ಯಸಂಸ್ಥೆಯ ಕಲಾತ್ಮಕ ನಿರ್ದೇಶಕಿ, ಗುರು ಕಲೈಮಾಮಣಿ ಡಾ. ಸಂಗೀತಾ ಕಪಿಲನ್ ಅವರ ನುರಿತ ಗರಡಿಯಲ್ಲಿ ರೂಪುಗೊಂಡ ನೃತ್ಯ ಪ್ರತಿಮೆ ಕು. ರಿಷಾ ಪ್ರಶಾಂತ್ ಕುಮಾರ್. ಕಳೆದ ಹತ್ತುವರ್ಷಗಳಿಂದ ನಿಷ್ಠೆಯಿಂದ ಅವರಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ನಂದಿನಿ ಮತ್ತ್ತು ಪ್ರಶಾಂತ್ ಕುಮಾರ್ ಪುತ್ರಿ ಬಹುಮುಖ ಪ್ರತಿಭೆಯ ರಿಷಾ, ಇದೇ ಮೇ ತಿಂಗಳ 21 ಭಾನುವಾರದಂದು ಮಲ್ಲೇಶ್ವರದ ‘ಸೇವಾಸದನ’ದಲ್ಲಿ ಸಂಜೆ 5.30 ಗಂಟೆಗೆ ತನ್ನ ನೃತ್ಯದ ಕಲಾಸೊಬಗನ್ನು ಪ್ರದರ್ಶಿಸಲು ವಿದ್ಯುಕ್ತವಾಗಿ ರಂಗಪ್ರವೇಶ ಮಾಡುತ್ತಿದ್ದಾಳೆ. ಆಕೆಯ ನೃತ್ಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.
ಕು. ರಿಷಾ ಬಾಲಪ್ರತಿಭೆ. ನಾಲ್ಕುವರ್ಷದ ಮಗು ಸಂಗೀತದಲೆಗಳಿಗೆ ಹೆಜ್ಜೆ ಹಾಕುತ್ತ ಕುಣಿಯುವ ಪರಿ ತಂದೆ-ತಾಯಿಯರಿಗೆ ಅವಳಲ್ಲಿ ಅಡಗಿದ್ದ ಸುಪ್ತಪ್ರತಿಭೆ ಅರಿವಾಯಿತು. ತಂದೆ-ಪ್ರಶಾಂತ್ ಕುಮಾರ್ ತಾಯಿ ನಂದಿನಿ ಮಗುವನ್ನು ಡಾ. ಸಂಗೀತಾ ಕಪಿಲನ್ ಅವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರು. ಅಲ್ಲಿಂದ ರಿಷಾಗೆ ಕ್ರಮಬದ್ಧ ನೃತ್ಯಶಿಕ್ಷಣ ದೊರೆಯಿತು. ಕಳೆದ ಹತ್ತುವರ್ಷಗಳಿಂದ ಏಕಗುರು ನಿಷ್ಠೆಯಲ್ಲಿ ಅವರ ಬಳಿಯೇ ಪಂದನಲ್ಲೂರು ಶೈಲಿಯ ಭರತನಾಟ್ಯವನ್ನು ಅತ್ಯಂತ ಆಸಕ್ತಿ-ಪರಿಶ್ರಮಗಳಿಂದ ಕಲಿಯುತ್ತ ‘ಉಷಾಸ್ ಫೌಂಡೇಶನ್’ ನೃತ್ಯಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲಿ, ನಾಡಿನ ಅನೇಕ ವೇದಿಕೆಗಳ ಮೇಲೆ ನರ್ತಿಸಿದ್ದಾಳೆ. ಜೊತೆಗೆ ಕಳೆದ 8 ವರ್ಷಗಳಿಂದ ಗುರು ಶೋಭನಾ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದಾಳೆ.
ಬೆಂಗಳೂರು-ಮಾರತಹಳ್ಳಿಯ ವಿಬ್ಗಯಾರ್ ಹೈಸ್ಕೂಲಿನಲ್ಲಿ 9 ನೆಯ ತರಗತಿಯಲ್ಲಿ ಓದುತ್ತ ಜಾಣ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾಳೆ. ಡ್ರಾಯಿಂಗ್, ಸಂಗೀತ , ಫೋಟೋಗ್ರಫಿ ಮತ್ತು ಪ್ರವಾಸ ಇವಳ ಪ್ರಿಯವಾದ ಹವ್ಯಾಸಗಳು. ಪಾಶ್ಚಾತ್ಯ ಸಂಗೀತದ ಅನೇಕ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದಿರುವ ರಿಷಾ, ಕಳೆದ ಒಂದು ದಶಕಗಳಿಂದ ಚಿನ್ಮಯ ಮಿಷನ್ ಬಾಲವಿಹಾರದ ವಿದ್ಯಾರ್ಥಿನಿಯಾಗಿದ್ದು ಅಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಹು ಸಕ್ರಿಯವಾಗಿದ್ದು ಅನೇಕ ಬಹುಮಾನಗಳನ್ನು ಪಡೆದಿರುವುದು ಅವಳ ಅಗ್ಗಳಿಕೆ.
- ವೈ.ಕೆ.ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.