ಹೊಸಕೋಟೆ: ನಿಂಬೆಕಾಯಿಪುರದ ಅಭಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿರುವ ರಂಗಮಂದಿರದಲ್ಲಿ ‘ಜನಮನದಾಟ- ಹೆಗ್ಗೋಡು’ ವಿಶೇಷ ತಿರುಗಾಟ ಪ್ರಯುಕ್ತ ಏರ್ಪಡಿಸಿದ್ದ ‘ರೊಟ್ಟಿಯ ಸಲುವಾಗಿ ಇಷ್ಟೆಲ್ಲಾ…’ ನಾಟಕದ ಪ್ರದರ್ಶನವು ದಿನಾಂಕ 09-07-2023 ರಂದು ನಡೆಯಿತು.
‘ಜನಪದರು ಸಾಂಸ್ಕೃತಿಕ ವೇದಿಕೆ’ಯ ಅಧ್ಯಕ್ಷರಾದ ಕೆ.ವಿ.ವೆಂಕಟರಮಣಪ್ಪ ಪಾಪಣ್ಣ ಕಾಟಂನಲ್ಲೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ಸಮಾಜದಲ್ಲಿ ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಲ್ಲಿ ಮೌಢ್ಯತೆ, ಅನಕ್ಷರತೆಯಂತಹ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ರಂಗಕಲೆಯು ಪರಿಣಾಮಕಾರಿಯಾದ ಸಾಧನವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಡಾ.ಎಂ.ಗಣೇಶ್ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ನವ್ಯ, ಪ್ರಗತಿಶೀಲ ಹಾಗೂ ಬಂಡಾಯದ ಮಹತ್ವದ ಲೇಖಕರಾದ ಪಿ.ಲಂಕೇಶರ ಕಥೆಗಳ ಸಂಕಲನದಲ್ಲಿನ ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಯಶಸ್ವಿಯಾಗಿವೆ” ಎಂದರು.
ನಾಟಕವು ಸಮಾಜದಲ್ಲಿರುವ ಹಸಿವು ಹಾಗೂ ಭ್ರಷ್ಟಾಚಾರದಿಂದ ನಲುಗಿ, ಅಧಿಕಾರ ಶಾಹಿಯ ಬುದ್ಧಿಗೇಡಿತನವನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಪ್ರಶಂಸೆ ಗಳಿಸಿತು. ಇದೇ ಸಂದರ್ಭದಲ್ಲಿ ನಿನಾಸಂ ಹೆಗ್ಗೋಡು ಇದರ ಪ್ರಾಂಶುಪಾಲರಾದ ಡಾ.ಎಂ.ಗಣೇಶ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ, ಓ ಸುರೇಶ್, ಸಿದ್ದೇಶ್ವರ ನನಸುಮನೆ, ಮುನಿರಾಜು ಉಪಸ್ಥಿತರಿದ್ದರು.