ಸುರತ್ಕಲ್ : ಸುರತ್ಕಲ್ ರೋಟರಿ ಕ್ಲಬ್ ಆಯೋಜಿಸಿದ್ದ ಸಾಹಿತ್ಯ ಮತ್ತು ಬದುಕು ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 04-05-2024ರಂದು ಸುರತ್ಕಲ್ಲಿನ ವಿದ್ಯಾದಾಯಿನಿ ಸಂಕಿರಣದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಯುವ ಸಾಹಿತಿ ಹಾಗೂ ಸುರತ್ಕಲ್ ಎಂ. ಆರ್. ಪಿ. ಎಲ್. ಸಂಸ್ಥೆಯ ಸಹಾಯಕ ಮೇಲ್ವಿಚಾರಕ ಅಧಿಕಾರಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು “ಬದುಕಿನ ಪರಿಪೂರ್ಣತೆಗೆ ಸಾಹಿತ್ಯದ ಓದು ಅಗತ್ಯ. ಮನೋರಂಜನೆಯೊಂದಿಗೆ ಜ್ಞಾನದ ವಿಸ್ತರಣೆಗೆ ಕಾರಣವಾಗುವ ಸಾಹಿತ್ಯಾಭಿರುಚಿಯನ್ನು ಪ್ರತಿಯೊಬ್ಬರು ಮೂಡಿಸಿಕೊಳ್ಳಬೇಕು. ಭಾವನಾತ್ಮಕ ಕೌಶಲ್ಯ ಇಂದಿನ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳ ಕಾರ್ಯ ಮಹತ್ತರದ್ದಾಗಿದೆ.” ಎಂದು ಹೇಳಿದರು.
ಕೃಷ್ಣರಾಜ ತಂತ್ರಿ ಯು. ಎಸ್. ಎ. ಮಾತನಾಡಿ “ಮಕ್ಕಳ ಶಾಲೆಗೆ ಹೋಗುವ ಹಂತದಲ್ಲಿಯೇ ಓದಿನ ಅಭಿರುಚಿ ಬೆಳೆಸುವ ಕಾರ್ಯ ನಡೆಯಬೇಕಿರುವುದು ಭಾವನೆಗಳ ಅಭಿವ್ಯಕ್ತಿಗೆ ಸಾಹಿತ್ಯ ಮಾಧ್ಯಮ ಉಪಯುಕ್ತವಾಗಿದೆ.” ಎಂದರು.
ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ಯೋಗಿಶ್ ಕುಳಾಯಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರೊ. ಕೃಷ್ಣಮೂರ್ತಿ ಆಶಯನುಡಿಗಳನ್ನಾಡಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಎಂ.ರಮೇಶ ರಾವ್ ಕಾರ್ಯಕ್ರಮ ಸಂಯೋಜಿಸಿದರು. ನಿಯೋಜಿತ ಅಧ್ಯಕ್ಷ ಸಂದೀಪ್ ರಾವ್ ಇಡ್ಯಾ ಮತ್ತಿತರರು ಉಪಸ್ಥಿತರಿದ್ದರು.

