ಬೆಳ್ತಂಗಡಿ : ನಾಡಿನ ಹಿರಿಯ ಸಾಹಿತಿ, ರಾಜ್ಯದ ವಿವಿಧ ಪತ್ರಿಕೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ, 104 ಪುಸ್ತಕಗಳನ್ನು ಹೊರತಂದ ಲೇಖಕ ಪ. ರಾಮಕೃಷ್ಣ ಶಾಸ್ತ್ರಿ ಅವರ ಸಪ್ತತಿ ಪ್ರಯುಕ್ತ ಸಾರ್ವಜನಿಕ ಅಭಿನಂದನಾ ಸಮಾರಂಭ ದಿನಾಂಕ : 08-07-2023ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಲಿದೆ.
1953ರಲ್ಲಿ ಪುತ್ತೂರಿನ ಪೋಳ್ಯದಲ್ಲಿ ಜನಿಸಿದ ರಾಮಕೃಷ್ಣ ಶಾಸ್ತ್ರಿ ಎಳವೆಯಲ್ಲಿಯೇ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ನೆಲೆಸಿದ್ದು, ತನ್ನ 11ನೇ ವಯಸ್ಸಿನಲ್ಲಿ ಬರವಣಿಗೆ ಆರಂಭಿಸಿದ್ದರು. 7ನೇ ತರಗತಿವರೆಗೆ ಮಾತ್ರ ಶಾಲಾ ವಿದ್ಯಾಭ್ಯಾಸ ಮಾಡಿದ್ದರೂ ಶಾಲೆ, ಪದವಿ ತರಗತಿಗೆ ಪಠ್ಯವಾಗುವಷ್ಟು ಸಮಗ್ರ ಬರವಣಿಗೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ತೆಂಕಕಾರಂದೂರು ನಿವಾಸಿ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಅವರಿಗೆ ಈ ಜುಲೈಗೆ 70ನೇ ವರ್ಷದ ಹುಟ್ಟುಹಬ್ಬ. ತನ್ನ ಹನ್ನೊಂದನೇ ವರ್ಷದಿಂದ ಬರವಣಿಗೆ ಕ್ಷೇತ್ರದಲ್ಲಿ ತೊಡಗಿಕೊಂಡ ಇವರು ಈವರೆಗೆ ಬರೆದ 12,000ಕ್ಕಿಂತ ಹೆಚ್ಚು ಲೇಖನಗಳು ರಾಜ್ಯದ ಎಲ್ಲ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 105 ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳ ಕತೆ ಇವರ ಜನಪ್ರಿಯ ಮಾಧ್ಯಮವಾದರೂ ಕತೆ, ಲೇಖನ, ಕಾದಂಬರಿ, ಕವಿತೆ, ವಿಡಂಬನೆ, ಹನಿಗವನ ಹೀಗೆ ಎಲ್ಲ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಕಾಶವಾಣಿ, ದೂರದರ್ಶನದಲ್ಲೂ ಕಾರ್ಯಕ್ರಮಗಳು ಪ್ರಸಾರವಾಗಿವೆ. ಲೇಖನಗಳು, ಕತೆಗಳು ತುಳು, ಇಂಗ್ಲಿಷ್, ಮಲಯಾಳ, ಹಿಂದಿ ಭಾಷೆಗೆ ಅನುವಾದಗೊಂಡಿವೆ. ಮಹಾರಾಷ್ಟ್ರ ಸರಕಾರದ ಕನ್ನಡ ಪಠ್ಯದಲ್ಲಿ, ಮಂಗಳೂರು ವಿ.ವಿ. ಪಠ್ಯದಲ್ಲಿ ಲೇಖನ, ಕತೆಗಳು ಅಡಕವಾಗಿವೆ. ಬೆಳ್ತಂಗಡಿ ತಾಲೂಕಿನಲ್ಲಿ ಇಷ್ಟು ಬರಹ ಬರೆದವರು ಇಲ್ಲ ಎನ್ನುವುದು ಇವರ ಹೆಗ್ಗಳಿಕೆ. ಸಮಾಜ ಸೇವೆ, ಅಭಿವೃದ್ಧಿಯ ಪುರೋಗಾಮಿ ಚಿಂತನೆ, ಸಹಕಾರಿ ಕ್ಷೇತ್ರದಲ್ಲೂ ಅನುಭವ, ಯಕ್ಷಗಾನ ಕ್ಷೇತ್ರದಲ್ಲೂ ಭಾಗವಹಿಸುವಿಕೆ ಹೀಗೆ ಎಲ್ಲ ರಂಗದಲ್ಲಿ ತೊಡಗಿಸಿಕೊಂಡವರು ಶಾಸ್ತ್ರಿಗಳು.
ಅಂದು ಅಪರಾಹ್ನ 2 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಕಾರ್ಯಕ್ರಮಕ್ಕೆ ಚಾಲನೆಯನ್ನು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಚಾರ್ಯರಾದ ಡಾ. ಎನ್.ಎಂ. ಜೋಸೆಫ್ ನೀಡಲಿದ್ದಾರೆ. ಯಕ್ಷಗಾನ ಭಾಗವತಗಾನ ಕಾರ್ಯಕ್ರಮದಲ್ಲಿ ಭಾಗವತರಾಗಿ ಯಕ್ಷಧ್ರುವ ಶ್ರೀ ಸತೀಶ್ ಶೆಟ್ಟಿ ಪಟ್ಲ, ಗಾನಸುರಭಿ ಶ್ರೀ ರವಿಚಂದ್ರ ಕನ್ನಡಿಕಟ್ಟೆ, ಶ್ರೀ ಗಿರೀಶ್ ರೈ ಕಕ್ಯಪದವು, ಹಿಮ್ಮೇಳದಲ್ಲಿ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ, ಶ್ರೀ ಶಿತಿಕಂಠ ಭಟ್ ಉಜಿರೆ, ನಿರೂಪಣೆಯಲ್ಲಿ ಶ್ರೀ ಬಿ.ಎನ್. ಗಿರೀಶ್ ಹೆಗ್ಡೆ ಧರ್ಮಸ್ಥಳ ಭಾಗವಹಿಸುತ್ತಾರೆ.
ಅಪರಾಹ್ನ 3.30ರಿಂದ ಪ. ರಾಮಕೃಷ್ಣ ಶಾಸ್ತ್ರಿಗಳ ಸಾಹಿತ್ಯ ಅವಲೋಕನದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥ್ ಉಜಿರೆ ವಹಿಸಲಿದ್ದಾರೆ. ಪತ್ರಿಕಾ ಲೇಖನ ವಿಷಯದ ಬಗ್ಗೆ ಶ್ರೀ ನಿತ್ಯಾನಂದ ಪಡ್ರೆ ಮಣಿಪಾಲ, ಸಮಗ್ರ ಸಾಹಿತ್ಯ ಕುರಿತು ಸ.ಪ್ರ. ದರ್ಜೆ ಕಾಲೇಜು ಬೆಳ್ತಂಗಡಿ ಉಪನ್ಯಾಸಕರಾದ ಡಾ. ಕೃಷ್ಣಾನಂದ ಪಿ.ಎಂ. ಗರ್ಡಾಡಿ, ಮಕ್ಕಳ ಸಾಹಿತ್ಯ ಕುರಿತು ಬೆಳ್ತಂಗಡಿಯವರೇ ಆದ ಸಾಹಿತಿ ಡಾ. ದೀಪಾ ಫಡ್ಕೆ ಬೆಂಗಳೂರು ಮಾತನಾಡಲಿದ್ದಾರೆ.
ಸಂಜೆ 5ರಿಂದ ಅಭಿನಂದನಾ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಪುಸ್ತಕ ಬಿಡುಗಡೆ, ಅಭಿನಂದನೆ, ಗೌರವ ಸಾನ್ನಿಧ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ. ಜನಪದ ವಿ.ವಿ ಹಾವೇರಿ ವಿಶ್ರಾಂತ ಕುಲಪತಿ ಡಾ. ಕೆ.ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳ್ತಂಗಡಿ ಶಾಸಕ ಶ್ರೀ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ. ಹರೀಶ್ ಕುಮಾರ್ ಮತ್ತು ಶ್ರೀ ಕೆ. ಪ್ರತಾಪಸಿಂಹ ನಾಯಕ್, ಪಾವಂಜೆ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀ ಎಂ. ಶಶೀಂದ್ರ ಕುಮಾರ್, ಅಭಿನಂದಿತರಾಗುವ ಶ್ರೀ ಪ. ರಾಮಕೃಷ್ಣ ಶಾಸ್ತ್ರಿ ಮಚ್ಚಿನ, ಅವರ ಪತ್ನಿ ಶ್ರೀಮತಿ ಶಾರದಾ ಆರ್. ಶಾಸ್ತ್ರಿ ಉಪಸ್ಥಿತರಿರುತ್ತಾರೆ. ಸಮಾರಂಭದಲ್ಲಿ ಲಕ್ಷ್ಮೀ ಮಚ್ಚಿನ ಬರೆದ ‘ಬದುಕು ಬರಹ ಬವಣೆ’ ಪ. ರಾಮಕೃಷ್ಣ ಶಾಸ್ತ್ರಿ ಹೆಜ್ಜೆ ಗುರುತುಗಳು ಹಾಗೂ ಪ. ರಾಮಕೃಷ್ಣ ಶಾಸ್ತ್ರಿ ಅವರು ಬರೆದ ‘ಮಳೆ ಮಳೆ’ (ಲೇಖನಗಳ ಸಂಗ್ರಹ), ‘ನಟನ ಮನೋಹರಿ’ (ಕಾದಂಬರಿ), ‘ರೋಚಕ ಲೋಕ’ (ತರಂಗ ಲೇಖನಗಳ ಸಂಗ್ರಹ), ‘ಪ್ರಪಂಚದ ಸೋಜಿಗಗಳು’ (ತರಂಗ ಲೇಖನಗಳ ಸಂಗ್ರಹ) ಈ ಎಲ್ಲಾ ಕೃತಿಗಳು ಬಿಡುಗಡೆಯಾಗಲಿವೆ.
ಪ.ರಾ. ಶಾಸ್ತ್ರಿ ಅಭಿನಂದನಾ ಸಮಿತಿ ಸಂಚಾಲಕರು ಶ್ರೀ ಸಂಪತ್ ಬಿ. ಸುವರ್ಣ, ಕುರಿಯ ವಿಠಲಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಚಾಲಕರು ಶ್ರೀ ಎನ್. ಅಶೋಕ ಭಟ್ ಉಜಿರೆ, ದ.ಕ. ಜಿಲ್ಲೆ ಕಸಾಪ ಅಧ್ಯಕ್ಷರು ಡಾ. ಎಂ.ಪಿ. ಶ್ರೀನಾಥ್, ಕಸಾಪ ಬೆಳ್ತಂಗಡಿ ಘಟಕ ಅಧ್ಯಕ್ಷ ಯದುಪತಿ ಗೌಡ ಉಪಸ್ಥಿತರಿರುವರು.