ಕಾರ್ಕಳ : ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಆಯೋಜಿಸಿದ ‘ಸಾಹಿತ್ಯ-ಸಾಂಗತ್ಯ’ ಸರಣಿ ಕಾರ್ಯಕ್ರಮ -7 ದಿನಾಂಕ 17-07-2023ರಂದು ಕಾಲೇಜಿನ ನೇಸರ ಸಭಾಂಗಣದಲ್ಲಿ ನಡೆಯಿತು.
ಉಪನ್ಯಾಸಕರಾಗಿ ಆಗಮಿಸಿದ ಕಳಸಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀ ಎಚ್.ಎಂ.ನಾಗರಾಜ ರಾವ್ ಕಲ್ಕಟ್ಟೆ ಮಾತನಾಡುತ್ತಾ “ಯಶಸ್ಸಿಗಾಗಿ ನಿರೀಕ್ಷೆಗಳಿರುತ್ತವೆ. ನಿರೀಕ್ಷೆಯೇ ಪ್ರಧಾನವಾಗಬಾರದು. ಪ್ರತೀ ಸಲವೂ ಪ್ರಯತ್ನ ಪಡುವ ಮೂಲಕ ಯಶಸ್ಸು ಗಳಿಸಲು ಸಾಧ್ಯವಿದೆ. ಅಪಾರ ಪ್ರಯತ್ನಕ್ಕೆ ಅಪರಿಮಿತ ಫಲವಿದೆ. ಭಾಷೆ ಎಂಬುದು ಜ್ಞಾನದ ವಾಹಿನಿ. ಅದು ಜ್ಞಾನವೇ ಆಗಿರಬೇಕಿಲ್ಲ. ಸಂವಹನದಲ್ಲೂ ಸಾಹಿತ್ಯವಿದೆ. ಅದು ಹೃದಯದ ಭಾಷೆಯೇ ಆದಾಗ ಸರಳ ಸಾಹಿತ್ಯವಾಗುತ್ತದೆ. ಯಾವ ಮಾಧ್ಯಮದಲ್ಲಿ ಕಲಿತರೂ ಜ್ಞಾನಕ್ಕಾಗಿ ಕಲಿಯಬೇಕೇ ಹೊರತು ಹೊಟ್ಟೆಪಾಡಿಗಲ್ಲ. ಹಾಗೆಯೇ ಸಾಹಿತ್ಯವೆಂದರೆ ಮನಸ್ಸಿನ ತುಡಿತಗಳನ್ನು ಪ್ರತಿಬಿಂಬಿಸುವ ಮಾಧ್ಯಮ. ಸಂತೋಷಕ್ಕಾಗಿ ಸಾಹಿತ್ಯ ಓದಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಶ್ರೀ ಎಚ್.ಎಂ. ನಾಗರಾಜ ರಾವ್ ಕಲ್ಕಟ್ಟೆಯವರನ್ನು ಕಾಲೇಜಿನ ಪರವಾಗಿ ಗೌರವಿಸಲಾಯಿತು. ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ಸಂಸ್ಥಾಪಕರಾದ ಶ್ರೀ ಅಶ್ವತ್ ಎಸ್.ಎಲ್, ಗಣಪತಿ ಭಟ್ ಕೆ.ಎಸ್. ಹಾಗೂ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು. ಅಶ್ವತ್ ಎಸ್.ಎಲ್ ಪ್ರಸ್ತಾವನೆಗೈದು, ಉಪನ್ಯಾಸಕಿ ಪ್ರಿಯಾಂಕ ಅತಿಥಿಗಳನ್ನು ಪರಿಚಯಿಸಿ, ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.