ರಾಗ ಧನ ಸಂಸ್ಥೆಯ ಆಶ್ರಯದಲ್ಲಿ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 06 ಫೆಬ್ರವರಿ 2026ರಂದು ಆಯೋಜಿಸಲಾಗಿರುವ ಶ್ರೀ ಪುರಂದರದಾಸರು ಹಾಗೂ ಸಂಗೀತ ತ್ರಿಮೂರ್ತಿ ಉತ್ಸವದ ಮೊದಲ ದಿನದಂದು ಚೆನ್ನೆಯ ಹೆಸರಾಂತ ಕಲಾವಿದರಾದ ಸಾಯಿ ವಿಶ್ಲೇಶ್ ಇವರು ಪ್ರಧಾನ ಕಛೇರಿಯನ್ನು ನೀಡಿದರು.

ಇದಕ್ಕೂ ಮುನ್ನ ನಡೆದ ಪೂರ್ವಭಾವಿ ಕಛೇರಿಯನ್ನು ನಡೆಸಿಕೊಟ್ಟವರು ಮಂಗಳೂರಿನ ಆರೋಹಣಂ ಸಂಸ್ಥೆಯ ನಿರ್ದೇಶಕ ಹಾಗೂ ಸಂಗೀತ ಗುರುಗಳಾದ ಡಾ. ಅನೀಶ್ ಭಟ್ ಇವರ ಶಿಷ್ಯೆಯರಾದ ಶ್ರೀವರದ ಪಿ., ಸುಮನ ಕೆ. ಹಾಗೂ ಚಿನ್ಮಯಿ ವಿ.ಭಟ್. ತಮ್ಮ ಹಾಡುಗಾರಿಕೆಯಲ್ಲಿ ಮಾಯಾ ಮಾಳವಗೌಳ ರಾಗದ ಕೃತಿಗೆ ಸ್ವರ ಪ್ರಸ್ತಾರ ಮಾಡಿ ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದರು. ಮುಂದೆ ಕಾಪಿ ರಾಗಾಲಾಪನೆ ‘ಇಂತ ಸೌಖ್ಯ’ ಕೃತಿಗೆ ಸುಂದರವಾದ ಅನಾವರಣವನ್ನು ಮಾಡಿ ಶ್ರೋತೃಗಳಿಗೆ ಉಣ ಬಡಿಸಿದರು. ಮುಂದೆ ‘ರಾಮನಾಮ ಪಾಯಸಕ್ಕೆ’ ದೇವರ ನಾಮದೊಂದಿಗೆ ಕಚೇರಿ ಸಂಪನ್ನಗೊಂಡಿತು. ಧನಶ್ರೀ ಶಬರಾಯ ವಯೊಲಿನ್‌ನಲ್ಲಿ ಹಾಗೂ ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್ ಉತ್ತಮವಾಗಿ ಸಹಕಾರ ನೀಡಿದರು.

ಆ ಬಳಿಕ ಆರಂಭಗೊಂಡ ಪ್ರಧಾನ ಕಛೇರಿಯಲ್ಲಿ ಸಾಯಿ ವಿಘ್ನೇಶ್ ಇವರು ಶ್ರೀಮುತ್ತು ಸ್ವಾಮಿ ದೀಕ್ಷಿತರ ಷಣ್ಮುಖ ಪ್ರಿಯ ರಾಗದ ವರ್ಣ ಹಾಗೂ ಶ್ರೀ ಪುರಂದರದಾಸರ ‘ಜಯ ಜಯ ಜಾನಕಿ ಕಾಂತ’ ನಾಟರಾಗದ ದೇವರ ನಾಮವನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದರು. ತುಂಬು ಶಾರೀರ, ಕ್ಲಿಷ್ಟಕರವಾದ ಲೆಕ್ಕಾಚಾರಗಳು ಹಾಗೂ ವೇದಿಕೆ ನಿರ್ವಹಣೆ ಎಲ್ಲವನ್ನೂ ಮೈಗೂಡಿಸಿಕೊಂಡಿರುವ ಸಾಯಿ ವಿಘ್ನೇಶ್ ಇವರು ‘ಕಾಂತಾರ’ ಸಿನೆಮಾದ ವರಾಹ ರೂಪಂ ಹಾಡನ್ನು ಹಾಡಿಯೂ ಪ್ರಸಿದ್ಧಿ ಪಡೆದವರು.

‘ಪಾರ್ವತಿ ನಿನ್ನೆ ಕೃತಿ’ಯನ್ನು ಕಲ್ಗಡ ರಾಗದಲ್ಲಿ ಸುಂದರವಾಗಿ ನಿರೂಪಿಸಿದರು. ನಾಸಾಮಣಿ ರಾಗದಲ್ಲಿ ‘ಶ್ರೀರಮಾ ಸರಸ್ವತಿ’ ಕೃತಿಗೆ ಅದೆಷ್ಟು ಸುಂದರವಾದ ರಾಗಾಲಾಪನೆ ಹಾಗೂ ಸ್ವರಗಳ ಚಿತ್ತಾರವನ್ನು ಹೆಣೆದದ್ದೂ ಅಲ್ಲದೆ ಕಲಾವಿದರನ್ನೂ ರಸಿಕರನ್ನು ತನ್ನೊಂದಿಗೆ ಸೆಳೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವರು. ಸಾಯಿ ವಿಘ್ನೇಶ್ ಇವರು ಪ್ರಧಾನ ರಾಗವಾಗಿ ಆಯ್ದುಕೊಂಡದ್ದು ಕೀರವಾಣಿ. ‘ಕಲಿಕಿಯುಂಡೇಗದಾ’ ಕೃತಿಗೆ ನೆರವಲ್ ಮತ್ತು ಸ್ವರಪ್ರಸ್ತಾರವನ್ನು ಮಾಡಿದ ಪರಿ ಅನನ್ಯ.

ಕುಮಾರಿ ಮಹತೀ ಕೆ. ಕಾರ್ಕಳ ವಯೊಲಿನ್‌ನಲ್ಲಿ ತಾನೇನೂ ಕಡಿಮೆ ಇಲ್ಲ ಎಂದು ಕಲಾವಿದರನ್ನು ಅನುಸರಿಸಿಕೊಂಡು ವಯೊಲಿನ್ ಸಹವಾದನ ನೀಡಿ ರಸಿಕರ ಪ್ರಶಂಸೆಗೆ ಪಾತ್ರರಾದರು. ಮೃದಂಗದಲ್ಲಿ ಮಂಗಳೂರಿನ ಕೃಷ್ಣಪವನ್ ಕುಮಾರ್ ಇವರು ಇಡೀ ಕಛೇರಿಯನ್ನು ಕಳೆಗಟ್ಟಿಸುವಲ್ಲಿ ಯಶಸ್ವಿಯಾದರು. ಬಾಲಕೃಷ್ಣ ಹೊಸಮನೆ ಇವರು ಮೋರ್ಸಿಂಗ್‌ನಲ್ಲಿ ಉತ್ತಮವಾದ ಸಹಕಾರವನ್ನಿತ್ತು ಸಂಪೂರ್ಣ ಕಛೇರಿಗೆ ಯಶೋಭಾಗಿಯಾದರು.

ರಸಿಕರ ಕೋರಿಕೆಯಂತೆ ಸಾಯಿ ವಿಘ್ನೇಶ್ ಇವರು ‘ವರಾಹ ರೂಪಂ’ ಹಾಡನ್ನು ಹಾಡಿ ಪ್ರಶಂಸೆಗೆ ಪಾತ್ರರಾದರು. ಉತ್ತಮವಾದ ತನಿಆವರ್ತನವೂ ಮೂಡಿ ಬಂದದ್ದು ಶ್ಲಾಘನೀಯ. ಶಿವರಂಜನಿ ರಾಗದ ತಿಲ್ಲಾನದೊಂದಿಗೆ ಹಾಗೂ ಮಂಗಳದೊಂದಿಗೆ ಕಛೇರಿ ಸಂಪನ್ನಗೊಂಡಿತು.
– ಕಲಾರಸಿಕ
