ಸಾಲಿಗ್ರಾಮ : ಕರ್ನಾಟಕ ಯಕ್ಷಧಾಮ, ಮಂಗಳೂರು ಹಾಗೂ ಭೂಮಿಕಾ ಕಲಾ ಪ್ರತಿಷ್ಠಾನ, ಮಂಗಳೂರು ಇದರ ಆಶ್ರಯದಲ್ಲಿ ಸನ್ಮಾನ ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನವು ದಿನಾಂಕ : 22-05-2023, ಸೋಮವಾರ ಸಂಜೆ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ವಠಾರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ, ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಕೆ.ಎಸ್. ಕಾರಂತರು ನೆರವೇರಿಸಲಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಶ್ರೀ ಸುದರ್ಶನ ಉರಾಳರನ್ನು ಮಂಗಳೂರಿನ ಕಲ್ಲೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ್ ಕಲ್ಕೂರ ಇವರು ಸನ್ಮಾನಿಸಲಿರುವರು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕಲಾ ಸಾಹಿತಿ ಶ್ರೀ ಎಚ್. ಜನಾರ್ದನ ಹಂದೆ ಹಾಗೂ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ಕೆ. ತಾರಾನಾಥ ಹೊಳ್ಳ ಇವರು ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಮಯ್ಯ ಯಕ್ಷ ಬಳಗ (ರಿ) ಹಾಲಾಡಿ ಇವರಿಂದ ‘ಆದರ್ಶ ಪುತ್ರ ಭೀಷ್ಠ’ ಯಕ್ಷಗಾನ ಪ್ರದರ್ಶನವು ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಜಿ. ರಾಘವೇಂದ್ರ ಮಯ್ಯ ಹಾಲಾಡಿ, ಮದ್ದಳೆಯಲ್ಲಿ ರಾಘವೇಂದ್ರ ಹೆಗ್ಡೆ ಯಲ್ಲಾಪುರ, ಚಂಡೆಯಲ್ಲಿ ಸುಜನ್ ಹಾಲಾಡಿ ಹಾಗೂ ಮುಮ್ಮೇಳದಲ್ಲಿ ಶಾಂತನು ಆಗಿ ಸುಜಯೀಂದ್ರ ಹಂದೆ, ಕಂದರನಾಗಿ ರವೀಂದ್ರ ದೇವಾಡಿಗ ಕಮಲಶಿಲೆ, ದೇವವ್ರತನಾಗಿ ಕೋಟ ಸುರೇಶ ಬಂಗೇರ, ಯೋಜನಗಂಧಿಯಾಗಿ ಮಾಧವ ನಾಗೂರು, ಮಂತ್ರಿಯಾಗಿ ಸೀತರಾಮ್ ಹೆಗ್ಡೆ ಶಿರಸಿ ರಂಜಿಸಲಿದ್ದಾರೆ.