23 ಫೆಬ್ರವರಿ 2023, ಬೆಂಗಳೂರು: ಸಂಚಾರಿ ಥಿಯೇಟರ್ ಅರ್ಪಿಸುವ “ಮಿಸ್ ಅಂಡರ್ ಸ್ಟ್ಯಾಂಡಿಂಗ್” ನಾಟಕ ದಿನಾಂಕ 24ರಂದು ಕಲಾಗ್ರಾಮ, ಬೆಂಗಳೂರು ಹಾಗೂ ದಿನಾಂಕ 25ರಂದು ರಂಗ ಶಂಕರ, ಬೆಂಗಳೂರಿನಲ್ಲಿ ಪ್ರದರ್ಶನ ಕಾಣಲಿದೆ. ಟಿಕೆಟಿಗಾಗಿ 9884345569, 9611666711 ಸಂಪರ್ಕಿಸಿ
ಸಂಸಾರದಲ್ಲಿ ಸನಿದಪ – ದಾರಿಯೋಫೊ ಅವರ ಮೂಲಕೃತಿಯಾದ ಈ ನಾಟಕವನ್ನು ಕೆ.ವಿ. ಅಕ್ಷರ ಅವರು ಕನ್ನಡಕ್ಕೆ ತಂದಿದ್ದಾರೆ. ಇಡೀ ನಾಟಕದಲ್ಲಿ ಜೋಡಿಗಳ ಸಂಬಂಧಗಳ ಭಾವ, ಸ್ಥಿತಿಗಳು ಬೇರೆ ಬೇರೆ ಘಟನೆಗಳಿಗೆ ಪೂರಕವಾಗಿ ಬದಲಾಗುವ, ಬದಲಾಗಿಸುವ ವಿಚಿತ್ರ ಸಂಕಷ್ಟಗಳಿಗೆ ಸಿಲುಕಿಕೊಳ್ಳುವ ಮತ್ತು ಮತ್ತೆ ಮತ್ತೆ ವಿಷಯಗಳನ್ನು ಅಪಾರ್ಥ ಮಾಡಿಕೊಂಡು ಸಂಕಷ್ಟಗಳನ್ನು ತಂದುಕೊಳ್ಳುವ ಮತ್ತು ಅವುಗಳ ಜೊತೆಯಲ್ಲೇ ಕನಸು ಕಾಣುವ ಹಲವಾರು ಘಟನೆಗಳ ಜೊತೆಯಲ್ಲಿ ಬದುಕಿನ ಸಂಬಂಧಗಳ ಸಂಕೀರ್ಣತೆಯನ್ನು ಪ್ರಹಸನದ ಮೂಲಕ ಅಭಿವ್ಯಕ್ತಿಸುವ ಪ್ರಯತ್ನ ಇದಾಗಿದೆ. ಇಂದಿನ ಬದುಕಿನಲ್ಲಿ, ಸಂಬಂಧಗಳ ಆಯಸ್ಸು ಕಡಿಮೆ ಆಗುತ್ತಿರುವ ಹೊತ್ತಿನಲ್ಲಿ ಈ ನಾಟಕ ಹೆಚ್ಚು ಪ್ರಸ್ತುತ ಎನಿಸುತ್ತದೆ. ಪಿನೋಕಿಯೋ ನಾಟಕದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಸಂಚಾರಿ ವಿಜಯ್ ಅವರ ಎರಡನೇ ಪ್ರಯತ್ನ ಈ ನಾಟಕ.
ನಿರ್ದೇಶಕರ ಬಗ್ಗೆ : ಸಂಚಾರಿ ವಿಜಯ್
ಮೂಲತಃ ಚಿಕ್ಕಮಗಳೂರಿನವರಾದ ವಿಜಯ್ ವೃತ್ತಿಯಲ್ಲಿ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕರಾಗಿ ಕಾಲೇಜೊಂದರಲ್ಲೂ ಸುಮಾರು ವರ್ಷಗಳ ಕಾಲ ಪಾಠ ಮಾಡುತ್ತಿದ್ದರು. ಜೊತೆಜೊತೆಯಲ್ಲೇ ನಾಟಕದ ಗೀಳು ಹತ್ತಿಸಿಕೊಂಡು ರಂಗ ತಂಡಗಳೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. 2009ರಲ್ಲಿ ಅರಹಂತ ನಾಟಕದ ಮೂಲಕ ಸಂಚಾರಿ ಥಿಯೇಟರ್ ಗೆ ಬಂದವರು ಅದರಲ್ಲಿನ ಮುಖ್ಯ ಪ್ರಾತ್ರವನ್ನು ನಿರ್ವಹಿಸಿದರು. ನಂತರ ಸಂಚಾರಿಯ ಎಲ್ಲ ಪ್ರಯೋಗಗಳಲ್ಲೂ ನಿರಂತರವಾಗಿ ತೊಡಗಿಸಿಕೊಂಡರು. ಕಮಲಮಣಿ ಕಾಮಿಡಿ ಕಲ್ಯಾಣಿ, ಹೀಗೆರಡು ಕತೆಗಳು, ವ್ಯಾನಿಟಿ ಬ್ಯಾಗ್, ಕೈಲಾಸಂ ಕೀಚಕ, ನರಿಗಳಿಗೇಕೆ ಕೋಡಿಲ್ಲ ? ಮುಂತಾದ ನಾಟಕಗಳಲ್ಲಿ ಮುಖ್ಯ ಪ್ರಾತ್ರವನ್ನು ನಿರ್ವಹಿಸಿದ್ದಾರೆ. ಸಂಚಾರಿಯ ಪೂರ್ವರಂಗ ಕಾರ್ಯಾಗಾರದಲ್ಲಿ ಭಾಗವಹಿಸಿದ ಅವರು ಜೊತೆಜೊತೆಯಲ್ಲೇ ಪೂರ್ವರಂಗದ ಅಭ್ಯರ್ಥಿಗಳಿಗೆ ಶಿಕ್ಷಕಗರಿಯೂ ಕೆಲಸ ಮಾಡಿದರು. ನಂತರ ತಮ್ಮ ಜೊಚ್ಚಿಲ ನಿರ್ದೇಶನದ “ಪಿನೋಕಿಯೋ” ನಾಟಕವನ್ನು ನಿರ್ದೇಶಿಸಿದರು. ನಂತರ ಇತೀಚೆಗೆ ಕೆ.ವಿ. ಅಕ್ಷರ ಅವರ ಮಿಸ್ ಅಂಡರ್ ಸ್ಟ್ಯಾಂಡಿಂಗ್, ಸಂಸಾರದಲ್ಲಿ ಸನಿದಪ ನಾಟಕವನ್ನು ಸಂಚಾರಿಗಾಗಿ ನಿರ್ದೇಶಿಸಿದರು. ಹೀಗೆ ನಟರಾಗಿ ಬಂದವರು ತಂತ್ರಜ್ಞರಾಗಿ, ಶಿಕ್ಷಕರಾಗಿ ನಂತರ ನಿರ್ದೇಶಕರಾಗಿ ಪರಿವರ್ತನೆಗೊಂಡ ವಿಜಯ್ ಹಲವು ಸಿನಿಮಾಗಳಲ್ಲಿ, ಟಿ.ವಿ. ಸೀರಿಯಲ್ ಗಳಲ್ಲಿ ಅಭಿನಯಿಸುತ್ತಾ, ಅಭಿನಯದ ಎಲ್ಲಾ ಪ್ರಕಾರಗಳಲ್ಲು ತಮ್ಮ ಸಾಧನೆಯನ್ನು ಪ್ರಾರಂಭಿಸಿ ಇದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿ, ಈಗ ಸಂಚಾರಿ ವಿಜಯ್ ಎಂದೇ ಪ್ರಚಲಿತರಾಗಿದ್ದಾರೆ.
ಸಂಚಾರಿ ಥಿಯೇಟರ್
2004ರಲ್ಲಿ ಅಸ್ತಿತ್ವಕ್ಕೆ ಬಂದ ಸಂಚಾರಿ ಥಿಯೇಟರ್ , ಬೆಂಗಳೂರಿನ ಪ್ರಮುಖ ರಂಗ ಸಂಸ್ಥೆಗಳಲ್ಲಿ ಒಂದು. ನಾಟಕಗಳು, ಅಭಿನಯ ಕಾರ್ಯಾಗಾರಗಳು, ನೇಪಥ್ಯ ಹಾಗೂ ರಂಗ ಸಂಗೀತ ಕುರಿತ ಶಿಬಿರಗಳನ್ನು ಪ್ರತಿವರ್ಷ ನಡೆಸುತ್ತಾ ಬಂದಿರುವ ಸಂಚಾರಿ ಥಿಯೇಟರ್ ಮಕ್ಕಳ ರಂಗಭೂಮಿ ಕುರಿತಂತೆ ನಿರಂತರವಾಗಿ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಸಾಹಿತ್ಯಿಕ ಚಟುವಟಿಕೆಗಳು ಮತ್ತು ರಂಗಭೂಮಿಯಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕುವ ರಂಗ ಪ್ರಯೋಗಗಳೊಂದಿಗೆ ಯುವಕರನ್ನು ರಂಗಭೂಮಿಗೆ ಕರೆತರುವ ನಿಟ್ಟಿನಲ್ಲಿ “ಪೂರ್ವರಂಗ” ಅಭಿನಯ ಕಾರ್ಯಾಗಾರವನ್ನು ಪ್ರತಿವರ್ಷ ನಡೆಸುತ್ತಾ ಬಂದಿದೆ. ಸಾಮಾಜಿಕ ಕಳಕಳಿ ಹಾಗೂ ಬದ್ಧತೆ ಇರುವ ಉತ್ಸಾಹಿ, ಪ್ರತಿಭಾವಂತ ಯುವಕರ ತಂಡವನ್ನು ಹೊಂದಿರುವ ಸಂಚಾರಿ ಥಿಯೇಟರ್ ತಾನು ಅಸ್ತಿತ್ವಕ್ಕೆ ಬಂದಂದಿನಿಂದ ಸೃಜನಶೀಲ, ಸಾಂಸ್ಕೃತಿಕ ಹಾಗೂ ಆರೋಗ್ಯವಂತ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ಕನ್ನಡ ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳನ್ನು ಸಂಚಾರಿ ಥಿಯೇಟರ್ ತನ್ನ ರಂಗ ಪ್ರಯೋಗಕ್ಕೆ ಬಳಸಿಕೊಂಡಿದೆ. ಸುಮಾರು 29 ನಾಟಕಗಳನ್ನು ರಂಗದ ಮೇಲೆ ತಂದಿದೆ. ಅವುಗಳಲ್ಲಿ ಮುಖ್ಯವಾದವು ಊರ್ಮಿಳಾ, ಧರೆಯೊಳಗಿನ ರಾಜಕಾರಣ, ಅರಹಂತ, ಕಮಲಮಣಿ ಕಾಮಿಡಿ ಕಲ್ಯಾಣಿ, ನರಿಗಳಿಗೇಕೆ ಕೋಡಿಲ್ಲ ? ಹೀಗೆರಡು ಕತೆಗಳು, ವೈದೇಹಿಯವರ ಕವನಗಳ ರಂಗಪ್ರಯೋಗ “ವ್ಯಾನಿಟಿ ಬ್ಯಾಗ್”, ಪಿನೋಕಿಯೋ, ಮಿಸ್ ಅಂಡರ್ ಸ್ಟ್ಯಾಂಡಿಂಗ್, ವೆನಿಸ್ಸಿನ ವ್ಯಾಪಾರ, ರಂಗ ಜಂಗಮ, ಕೈಲಾಸಂ ಕೀಚಕ ಮುಂತಾದ ನಾಟಕಗಳನ್ನು ರಂಗದ ಮೇಲೆ ಯಶಸ್ವಿಯಾಗಿ ತಂದಿದೆ.