ಉಡುಪಿ : ಚಿತ್ರಕಲಾ ಮಂದಿರ ಕಲಾಶಾಲೆಯ 2002-2007 ಸಾಲಿನ ಹಳೆ ವಿದ್ಯಾರ್ಥಿಗಳು ಆಯೋಜಿಸಿರುವ ‘ಸಂಗಮ’ ಸಮೂಹ ಕಲಾಪ್ರದರ್ಶನವು ದಿನಾಂಕ 23 ಆಗಸ್ಟ್ 2025ರಂದು ಕಲಾಶಾಲೆಯ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತು.
ಈ ಕಲಾಪ್ರದರ್ಶನವನ್ನು ಉದ್ಘಾಟಿಸಿದ ಮಧುರಂ ವೈಟ್ ಲೋಟಸ್‌ನ ಆಡಳಿತ ನಿರ್ದೇಶಕರಾದ ಆಜಯ್ ಪಿ. ಶೆಟ್ಟಿಯವರು ಮಾತನಾಡಿ “ಉಡುಪಿಯ ಕಲಾವಲಯದಲ್ಲಿ ಸಾಕಷ್ಟು ಉತ್ತಮ ಕಲಾ ಪ್ರತಿಭೆಗಳಿವೆ. ಅದನ್ನು ಇನ್ನಷ್ಟು ಪೋಷಿಸುವ ಕೆಲಸವಾಗಬೇಕು. ಉಡುಪಿಯ ಪರಂಪರೆ ಜಗತ್ತಿಗೆ ತಿಳಿಯುವಂತಾಗಬೇಕು. ಈ ಕಲಾವಿದರೆಲ್ಲರೂ ಎಷ್ಟೋ ವರ್ಷಗಳ ತರುವಾಯ ಮತ್ತೆ ಸೇರಿ ಈ ಪ್ರದರ್ಶನವನ್ನು ಏರ್ಪಡಿಸಿರುವುದು ಹಾಗೂ ತಾವು ತಮ್ಮ ಗುರುಗಳಿಗೆ ಗುರುವಂದನೆ ಈ ಸಂದರ್ಭದಲ್ಲಿ ಸಲ್ಲಿಸಿರುವುದು ಬಹಳ ಮಹತ್ವಪೂರ್ಣವಾದುದು” ಎಂಬುದಾಗಿ ಅಭಿಪ್ರಾಯಪಟ್ಟರು.
ಇನ್ನೋರ್ವ ಅತಿಥಿ ಸ್ಮರಣಿಕಾ ಸಂಸ್ಥೆಯ ಮಾಲಕರಾದ ದಿವಾಕರ್ ಸನಿಲ್ ಮಾತನಾಡಿ “ಗಣೇಶೋತ್ಸವದ ಈ ಶುಭ ಸಂದರ್ಭದಲ್ಲಿ ಗಣಪತಿಯ ಬಗೆಗಿನ ವಿವಿಧ ಚಿತ್ರಗಳು ಮನಸೂರೆಗೊಳ್ಳುವಂತೆ ರಚಿತವಾಗಿದ್ದು, ಕಲೆಯ ಆರಾಧನೆಯೂ ದೈವಿಕ ಭಾವನೆಯನ್ನು ಸೃಜಿಸುತ್ತದೆ” ಎಂದರು.
ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದ ಕಲಾಶಾಲೆಯ ಮಾಜಿ ಪ್ರಾಂಶುಪಾಲರಾದ ವಿಶ್ವೇಶ್ವರ ಪರ್ಕಳ ಇವರು “ಓರ್ವ ಗುರು ಶ್ರೇಷ್ಠನೆನ್ನಿಸುವುದು ಕೇವಲ ಆತನ ಕಲಿಸುವ ಪದ್ಧತಿಯಿಂದ ಮಾತ್ರವಲ್ಲ, ಆತನಿಗೆ ಉತ್ತಮ ಶಿಷ್ಯಂದಿರೂ ದೊರಕಬೇಕಾಗುತ್ತದೆ. ಈ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅವಧಿಯಲ್ಲಿಯೇ ನಾಳಿನ ಭರವಸೆಯುಳ್ಳ ಕಲಾವಿದರಾಗುವ ಎಲ್ಲ ಲಕ್ಷಣಗಳಿದ್ದಿತು. ಈ ಪ್ರದರ್ಶನದ ಮುಖೇನ ಈ ರೀತಿಯ ಆಯೋಜನೆ ಇದಕ್ಕೊಂದು ಉತ್ತಮ ನಿದರ್ಶನ” ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಕಲಾಭೀಷ್ಮ ದಿ. ಕೆ.ಎಲ್. ಭಟ್‌ರವರಿಗೆ ಪುಷ್ಪಾರ್ಚನೆ ನೆರವೇರಿಸಿ, ಕಲಾಗುರುಗಳಾದ ವಿಶ್ವನಾಥ ಎ.ಎಸ್., ಡಾ. ನಿರಂಜನ್ ಯು.ಸಿ., ಡಾ. ಭಾರತಿ ಮರವಂತೆ, ಬಸವರಾಜ ಕುತ್ನಿ, ಮಹೇಶ ಉಮತಾರ್, ಗಣೇಶ್ ಮಂದಾರ, ಸುಮಂಗಲ, ಮುರಳಿಕೃಷ್ಣ ರಾವ್‌ರವರುಗಳಿಗೆ ಸನ್ಮಾನಿಸಲಾಯಿತು. ಡಾ. ಜನಾರ್ದನ ಹಾವಂಜೆ ಕಾರ್ಯಕ್ರಮ ನಿರೂಪಿಸಿ, ಕಾಂತಿ ನವೀನ್ ಪ್ರಭು ಸನ್ಮಾನ ಪತ್ರ ವಾಚಿಸಿದರು.
ಅನ್ನಪೂರ್ಣ ಕಾಮತ್, ಜನಾರ್ದನ ಹಾವಂಜೆ, ಕಾಂತಿ ಪ್ರಭು, ಪ್ರಶಾಂತ್ ಕೋಟ, ಪ್ರವೀನ್ ಮಲ್ಲಾರ್. ಪುರಂದರ್ ಆಚಾರ್ಯ, ರಾಘವೇಂದ್ರ ಆಚಾರ್ಯ, ರೂಪಶ್ರೀ ರಾವ್, ಶ್ರೀನಿವಾಸ್ ಆಚಾರ್ಯ, ಸುಜೇಂದ್ರ ಕಾರ್ಲ, ಸೂರಜ್ ಕುಮಾರ್, ವಿದ್ಯಾ ಎಲ್ಲೂರ್, ಯಶೋಧಾ ಸನಿಲ್ ಈ 13 ಕಲಾವಿದರುಗಳ ಗಣೇಶನಿಗೆ ಸಂಬಂಧಿಸಿದ ಹಾಗೂ ಸಮಕಾಲೀನ ಶೈಲಿಯ ಸುಮಾರು 30ರಷ್ಟು ಕಲಾಕೃತಿಗಳು ಪ್ರದರ್ಶನದಲ್ಲಿದೆ. 31ನೇ ಆಗಸ್ಟ್ ರವಿವಾರದ ತನಕ ಅಪರಾಹ್ನ 2ರಿಂದ 6ರವರೆಗೆ ಕಲಾಸಕ್ತರ ವೀಕ್ಷಣೆಗೆ ತೆರೆದಿರಲಿದೆ.
ಕಲಾಶಾಲೆಯಲ್ಲಿ ಕಲಿತ ದಿನಗಳ ಮೆಲುಕು ಹಾಕುತ್ತ, ಪೂರ್ಣ ಪ್ರಮಾಣದ ಕಲಾಕಾರರಾಗಿ ವಿವಿಧ ಮಾಧ್ಯಮಗಳಲ್ಲಿ, ವಿವಿಧ ಕಲಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಈ ಕಲಾವಿದರುಗಳು ಈ ಕಲಾಪ್ರದರ್ಶನದ ಅವಧಿಯ ನಡುವೆ ಸಂಜೆ 4ಕ್ಕೆ ವಿವಿಧ ಕಾರ್ಯಕ್ರಮಗಳೂ ನಡೆಯುತ್ತಿವೆ. 23ನೇ ಶನಿವಾರದಂದು ಕಾವಿಕಲೆಯ ಪುನರುಜ್ಜೀವನದ ಬಗೆಗಿನ ಡಾಕ್ಯುಮೆಂಟರಿ ಪ್ರದರ್ಶನ ಹಾಗೂ ಸಂವಾದವನ್ನು ಡಾ. ಜನಾರ್ದನ ರಾವ್ ಹಾವಂಜೆ, 24ನೇ ಭಾನುವಾರ ‘ಕಾಣದ ಕಡಲು’ ಕಿರುಚಿತ್ರ ಪ್ರದರ್ಶನ ಹಾಗೂ ಸಂವಾದವನ್ನು ಕಲಾವಿದೆ ಕಾಂತಿ ನಾಯಕ್, 29ನೇ ಶುಕ್ರವಾರ ‘ಕಲೆ ಹಾಗೂ ಪ್ರಕೃತಿ’ ನಿಸರ್ಗದ ಜೊತೆಗಿನ ಅನುಭವಗಳನ್ನು ಹವ್ಯಾಸಿ ಚಾರಣಿಗ ಸುಜೇಂದ್ರ ಕಾರ್ಲ ಹಾಗೂ 31ನೇ ಭಾನುವಾರ ಸಂಜೆ ನಾಲ್ಕಕ್ಕೆ ಮಕ್ಕಳಿಗೆ ಉಪಯುಕ್ತವೆನಿಸುವ ಕರಕುಶಲ ಕಲೆಯ ನಿರ್ಮಾಣ ಪ್ರಕ್ರಿಯೆಯ ಪ್ರದರ್ಶನವನ್ನು ಯಶೋಧಾ ಎಸ್. ಸನಿಲ್‌ರವರುಗಳು ನಡೆಸಿಕೊಡಲಿದ್ದಾರೆ.