ಮಂಗಳೂರು : ಶಕ್ತಿ ನಗರದಲ್ಲಿನ ಶಕ್ತಿ ವಿದ್ಯಾ ಸಂಸ್ಥೆಗಳು ಮತ್ತು ಮಂಗಳೂರು ಸಂಸ್ಕೃತ ಸಂಘ ಕೊಡಿಯಾಲ್ ಬೈಲ್ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ದಿನಾಂಕ 26-08-2023ರಂದು ‘ಸಂಸ್ಕೃತೋತ್ಸವ’ವು ಅದ್ದೂರಿಯಾಗಿ ನೆರವೇರಿತು.
ಶಕ್ತಿ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಕೆ.ಸಿ. ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಚಾರ್ಯರಾದ ಶ್ರೀ ರವಿಶಂಕರ ಹೆಗಡೆ ಉಪಸ್ಥಿತರಿದ್ದು, ಸಂಸ್ಕೃತೋತ್ಸವದ ನಿಮಿತ್ತ ನಡೆದ ಎಲ್ಲಾ ಸಂಸ್ಕೃತ ಸ್ಪರ್ಧೆಗಳ ಉದ್ಘಾಟನೆಯನ್ನು ವಿದ್ವಾನ್ ಶ್ರೀ ಗಿರಿಧರ ಭಟ್ ಅವರು ನೆರವೇರಿಸಿದರು. ಮಂಗಳೂರು ಸಂಸ್ಕೃತ ಸಂಘದ ಗೌರವಾಧ್ಯಕ್ಷರಾದ ಶ್ರೀ ಕೆ.ಪಿ. ವಾಸುದೇವ ರಾವ್, ಸಂತ ಆಲೋಶಿಯಸ್ ಮಹಾ ವಿದ್ಯಾಲಯ ಮಂಗಳೂರು ಇದರ ನಿವೃತ್ತ ಪ್ರಾಧ್ಯಾಪಕರಾದ ಡಾ. ಶ್ರೀಪತಿ ರಾವ್ ಮತ್ತು ಕೆನರಾ ಮಹಾ ವಿದ್ಯಾಲಯ ಮಂಗಳೂರು ಇದರ ನಿವೃತ್ತ ಪ್ರಾಧ್ಯಾಪಕರಾದ ಶ್ರೀಮತಿ ಜಯ ಕುಮಾರಿ ಇವರುಗಳ ಜೀವಮಾನದ ಸಂಸ್ಕೃತ ಸೇವೆಗಾಗಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಉದ್ಘಾಟನೆಯ ಬಳಿಕ ಮಂಗಳೂರು ತಾಲೂಕಿನ ವಿವಿಧ ವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಸಂಸ್ಕೃತ ಸ್ತೋತ್ರ ಕಂಠಪಾಠ, ಸುಭಾಷಿತ ಕಂಠಪಾಠ, ಕಥಾ ಕಥನ, ಸಮೂಹ ಗಾನ, ಸಮೂಹ ನೃತ್ಯ, ರಸ ಪ್ರಶ್ನೆ, ಸಂಸ್ಕೃತ ಭಾಷಣ ಸ್ಪರ್ಧೆಗಳನ್ನು ವಿವಿಧ ವಿಭಾಗಗಳಲ್ಲಿ ನಡೆಸಲಾಯಿತು. ಎಲ್ಲಾ ಸ್ಪರ್ಧೆಗಳೂ ಸಂಸ್ಕೃತದಲ್ಲಿಯೇ ನಡೆದದ್ದು ವಿಶೇಷತೆ.
ಸಂಜೆ 4.30 ಘಂಟೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಗಳಲ್ಲಿ ಜಯಶೀಲರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಶ್ರೀ ಮುರಾರಿ ತಂತ್ರಿ ಸಂಸ್ಕೃತ ಪ್ರಾಧ್ಯಾಪಕರು, ಕೆನರಾ ಮಹಾ ವಿದ್ಯಾಲಯ ಮಂಗಳೂರು ಇವರು ನಿರೂಪಿಸಿ, ಶಕ್ತಿ ವಸತಿ ಶಾಲೆಯ ಪ್ರಾಚಾರ್ಯರಾದ ಶ್ರೀ ರವಿಶಂಕರ ಹೆಗಡೆಯವರು ಸ್ವಾಗತಿಸಿ, ವಂದಿಸಿದರು.