ಬೆಂಗಳೂರು : ಬೆಂಗಳೂರಿನ ಇನ್ ಫಾರ್ಮ್ ಥಿಯೇಟರ್ ಅಭಿನಯಿಸುವ ‘ಸರಸತಿಯಾಗಲೊಲ್ಲೆ’ ಸಾವಿತ್ರಿಬಾಯಿ ಫುಲೆಯವರ ಅಕ್ಷರಯಾನದ ಕಥಾ ಹಂದರವುಳ್ಳ ನಾಟಕವು ದಿನಾಂಕ 25-08-2023ರಂದು ಸಂಜೆ 7.30ಕ್ಕೆ ಬೆಂಗಳೂರಿನ ಕಲಾಗ್ರಾಮ ಮಲ್ಲತಳ್ಳಿ ಇಲ್ಲಿ ನಡೆಯಲಿದೆ.
ಡಾ. ಎಂ.ಬೈರೇಗೌಡ (ಮುದ್ದುಶ್ರೀ ದಿಬ್ಬ) ಇವರು ರಚಿಸಿದ ಈ ನಾಟಕವನ್ನು ನವೀನ್ ಭೂಮಿ ಇವರು ನಿರ್ದೇಶಿಸಿದ್ದಾರೆ. ಈ ನಾಟಕಕ್ಕೆ ಸಂಗೀತ ಉಮೇಶ್ ಸಂಗಪ್ಪ ಪತ್ತಾರ ಮತ್ತು ಶುಭಕರ ಬಿ.ಯವರದ್ದು, ನಿರ್ಮಾಣ ನಿರ್ವಹಣೆ ರಂಗನಾಥ ಶಿವಮೊಗ್ಗ, ಮೂಡಲಪಾಯ ಯಕ್ಷಗಾನದ ಹೆಜ್ಜೆಗಳು ಎ.ಬಿ. ಶಂಕರಪ್ಪ, ಭಾಗವತ ಬಸವರಾಜು. ರಂಗದ ಮೇಲೆ ಕಲಾವಿದರಾಗಿ ಲೀನಾ ಆರ್ಯ, ಅಕ್ಷಯ್ ರಾಜ್ ಎನ್.ಆರ್., ರಾಘವ್, ಕೌಸಲ್ಯ, ಶಶಾಂಕ್, ಎಂ. ಶ್ರೀನಿವಾಸ್ ರಾವ್, ವಿಷ್ಣು ಅವನೀಷಾಗೌಡ, ಚರನ್ ಗೌಡ ಮತ್ತು ಪ್ರಜ್ವಲ್ ಕುಮಾರ್ ಗೌಡ ಇವರುಗಳು ಅಭಿನಯಿಸಲಿದ್ದಾರೆ. ಟಿಕೇಟ್ ದರ : 150/- ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ 7829444660
ನಿರ್ದೇಶಕ ನವೀನ್ ಭೂಮಿ ತಿಪಟೂರು :
ಮೂಲತಃ ತಿಪಟೂರಿನವರಾದ ಇವರು ಪತ್ರಿಕೋದ್ಯಮದಲ್ಲಿ ಎಂ.ಎಸ್.ಸಿ ಎಲೆಕ್ಟ್ರಾನಿಕ್ ಮೀಡಿಯಾ ಪದವಿ ಪಡೆದಿದ್ದಾರೆ. ಭೂಮಿ ರಂಗ ಪ್ರಯೋಗ ಶಾಲೆಯಲ್ಲಿ ವಿದ್ಯಾರ್ಥಿಯಾಗಿ, ನಟನಾಗಿ, ತಂತ್ರಜ್ಞನಾಗಿ, ಸದಸ್ಯನಾಗಿ ಕೆಲಸ ಮಾಡಿದ ಅನುಭವವಿದೆ. ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಪದವಿ ಪಡೆದು ಹಾಗು ನೀನಾಸಂ ತಿರುಗಾಟದಲ್ಲಿ ಎರಡು ವರ್ಷ ನಟರಾಗಿ, ತಂತ್ರಜ್ಞರಾಗಿ, ರಂಗ ನಿರ್ವಾಹಕನಾಗಿ ಕೆಲಸ ಮಾಡಿದ್ದಾರೆ. ಇವರು ಸು ಬಿಟ್ಟರೆ ಬಣ್ಣ ಬ ಬಿಟ್ಟರೆ ಸುಣ್ಣ, ಮಧ್ಯಮ ವ್ಯಾಯೋಗ, ಸೇತು ಬಂಧನ, ಮಾಮಾಮೋಶಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪಂಜರಶಾಲೆ, ನೀಲಿ ಕುದುರೆ, ಹಕ್ಕಿಹಾಡು, ಅಹಲ್ಯೆ, ಶಬರಿ, ಏಕಲವ್ಯ, ಒಡಲಾಳ, ಶ್ರದ್ಧಾ, ಸರಸತಿಯಾಗಲೊಲ್ಲೆ (ಸಾವಿತ್ರಿಬಾಯಿ ಫುಲೆ- ಅಕ್ಷರಯಾನ) ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ನಾಟಕದ ಬಗ್ಗೆ :
ದೇಶದ ಮೊದಲ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರಳಾದ ಸಾವಿತ್ರೀಬಾಯಿ ಫುಲೆಯ ಬದುಕು ಭಾರತೀಯ ಇತಿಹಾಸದ ಪುಟಗಳಲ್ಲಿ ವಿಶಿಷ್ಟವಾಗಿ ದಾಖಲಾಗಿದೆ. ಪ್ರತೀ ಗಂಡಿನ ಯಶಸ್ಸಿನ ಹಿಂದೆ ಒಂದು ಹೆಣ್ಣು ಇರುತ್ತಾಳೆಂಬುದು ಸಾಮಾನ್ಯ ಸಂಗತಿ. ಆದರೆ ಸಾವಿತ್ರೀಬಾಯಿ ಫುಲೆಯ ಯಶಸ್ಸಿನ ಹಿಂದೆ ಜ್ಯೊತಿಬಾ ಫುಲೆ ಇದ್ದನೆಂಬುದು ವಿಶೇಷವೇ ಸರಿ. ಬ್ರಿಟಿಷರಿಂದ ದಾಸ್ಯಕ್ಕೊಳಗಾಗಿ ಭಾರತೀಯರು ನಲುಗುತ್ತಿದ್ದುದು ಒಂದೆಡೆಯಾದರೆ, ದೇಶೀಯ ಪುರೋಹಿತಶಾಹಿಯ ಹಿಡಿತದಲ್ಲಿ ಇಡೀ ಭಾರತೀಯ ಸಮಾಜ ನಲುಗುತ್ತಿರುವಾಗ ಉದಿಸಿದ ದಿವ್ಯ ಜ್ಯೋತಿಗಳೇ ಸಾವಿತ್ರೀಬಾಯಿ ಫುಲೆ ದಂಪತಿಗಳು. ಅಂದಿನ ಮೌಢ್ಯತೆ, ಅನಕ್ಷರತೆ, ಆಹಾರದ ಅಲಭ್ಯತೆ, ಆರೋಗ್ಯದ ಕಡೆಗಣನೆ ಹೀಗೆ ಎಲ್ಲ ಸಾಮಾಜಿಕ ಪಿಡುಗುಗಳ ವಿರುದ್ಧ ಸೆಟೆದು ನಿಂತು ಹೋರಾಡಿದ ವೀರಮಹಿಳೆ ಸಾವಿತ್ರೀಬಾಯಿ ಫುಲೆಯ ಜೀವನಾಧಾರಿತ ಘಟನೆಗಳನ್ನು ಬಿಂಬಿಸುವ ಪ್ರಯತ್ನವೇ ಸರಸತಿಯಾಗಲೊಲ್ಲೆ. ಗುಡಿಕಟ್ಟಿ ಕೂಡಿಹಾಕಿ ನನ್ನನ್ನು ಪೂಜಿಸುವುದು ಬೇಡ, ನನ್ನ ಆದರ್ಶಗಳು ಸರಿಯೆನಿಸಿದರೆ ಅನುಷ್ಠಾನಕ್ಕೆ ತನ್ನಿ ಎಂಬ ಬೇಡಿಕೆ ಇದೆ. ಸ್ವಾತಂತ್ರ ಪೂರ್ವದ ಮತ್ತು ಸ್ವಾತಂತ್ರ್ಯೋತ್ತರ ಸಮಸ್ಯೆಗಳು ಒಂದೇ ತೆರನಾಗಿದ್ದು ಅವೆರಡನ್ನೂ ಮುಖಾಮುಖಿಯಾಗಿಸುವ ಪ್ರಾಮಾಣಿಕ ಪ್ರಯತ್ನವೇ ‘ಸರಸತಿಯಾಗಲೊಲ್ಲೆ’.
‘ಇನ್ ಫಾರ್ಮ್ ಥಿಯೇಟರ್’ ತಂಡದ ಬಗ್ಗೆ :
ಇನ್ ಫಾರ್ಮ್ ಥಿಯೇಟರ್ ತಂಡ ಸಮಾನ ಮನಸ್ಕ ಯುವಕರೆಲ್ಲಾ ಸೇರಿ ರಂಗಭೂಮಿ ಹಾಗೂ ಅನೇಕ ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸೃಷ್ಟಿಯಾದ ತಂಡವಾಗಿದೆ. ತಂಡದ ಪ್ರಥಮ ಪ್ರಯೋಗವಾಗಿ ಜೀನ್ ಪಾಲ್ ಸಾರ್ತ್ರೆಯವರ ಗೋಡೆ ನಾಟಕ ಪ್ರಯೋಗಗೊಂಡಿದ್ದು, ಸಾವಿನ ಕುರಿತ ಸಾರ್ತ್ರೆಯವರ ಅಸ್ತಿತ್ವವಾದದ ಪ್ರತಿಪಾದನೆಯನ್ನು ಅವರ ಸಣ್ಣಕತೆಯಿಂದ ಹೆಕ್ಕಿ ನಾಟಕವಾಗಿಸಿ ಪ್ರೇಕ್ಷಕರ ಮುಂದಿರಿಸಿದ್ದು ಅಪಾರ ಜನಮೆಚ್ಚುಗೆಯನ್ನು ಗಳಿಸಿದೆ. ತಂಡದ ವತಿಯಿಂದ ಅಭಿನಯ ಕಾರ್ಯಾಗಾರ ಆಯೋಜಿಸಿ ಅದರ ಭಾಗವಾಗಿ ಮೋಲಿಯರ್ ರ ತಾರ್ತೂಫ್ ನಾಟಕ ಪ್ರಯೋಗಗೊಂಡಿದ್ದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದೆ, ಅಂಧಭಕ್ತಿಯಿಂದಾಗೋ ದುಷ್ಪರಿಣಾಮಗಳನ್ನು ಕೈಗನ್ನಡಿಯಾಗಿ ಜನತೆಯ ಮುಂದಿರಿಸಿದೆ. ಅಲ್ಲದೇ ಪ್ರೀತಿಯ ಅನನ್ಯತೆಯನ್ನು ಬಹಳ ಸೂಕ್ಷ್ಮವಾಗಿ ಹೇಳಿದ್ದು ನಗೆನಾಟಕದಲ್ಲೊಂದು ದುರಂತ ಕಥೆಯನ್ನು ಅಭಿವ್ಯಕ್ತಿಸಿರುವುದು ನಾಟಕದ ವಿಶೇಷವೆನಿಸಿದೆ. ಪ್ರಸ್ತುತದಲ್ಲಿ ಸಾಮಾಜಿಕ ಬದಲಾವಣೆಯ ಹರಿಕಾರರಲ್ಲಿ ಚಿರಸ್ಮರಣೀಯರಾದ ಸಾವಿತ್ರಿಬಾಯಿ, ಜ್ಯೋತಿ ಬಾ ಪುಲೆಯವರ ಜೀವನಾಧಾರಿತ ಎಂ. ಭೈರೇಗೌಡ ವಿರಚಿತ ಸರಸತಿಯಾಗಲೊಲ್ಲೆ ನಾಟಕವನ್ನು ಪ್ರಯೋಗಿಸಲು ಮುಂದಾಗಿದ್ದು ನಾಡಿನ ಸಾಮಾಜಿಕ ಸ್ವಾಸ್ಥ್ಯ ಕಾಪಿಟ್ಟುಕೊಳ್ಳುವಲ್ಲಿ ಕಾಣಿಕೆಯಾಗಬಹುದೆಂದು ಆಶಿಸುತ್ತಾ ಮುನ್ನಡೆದಿದೆ. ಭವಿಷ್ಯದಲ್ಲಿ ಇಂತದೇ ಸಮಾಜಮುಖಿ ಕಾರ್ಯಯೋಜನೆಗಳನ್ನು ಮುಂದುವರೆಸುವ ಸದಾಶಯ ಇನ್ ಫಾರ್ಮ್ ಥಿಯೇಟರ್ ತಂಡದ್ದಾಗಿದೆ.