ಹುಬ್ಬಳ್ಳಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್(ಮಾಹೆ) ಇವರ ಸಂಯುಕ್ತ ಆಶ್ರಯದಲ್ಲಿ 22 ಜುಲೈ 2024ನೇ ಸೋಮವಾರದಂದು ಸೇಡಿಯಾಪು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಪ್ರಶಸ್ತಿ ಪುರಸ್ಕೃತರಾದ ಡಾ. ಬಿ. ವಿ. ಶಿರೂರ ಇವರ ಹುಬ್ಬಳ್ಳಿ ಮಂಜುನಾಥ ನಗರದಲ್ಲಿ ನಿವಾಸದಲ್ಲಿ ನಡೆಯಿತು.
ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಿದ ಡಾ. ಪಾದೇಕಲ್ಲು ವಿಷ್ಣು ಭಟ್ಟ “ನಾಡಿನ ಸಾಕ್ಷಿಪ್ರಜ್ಞೆ, ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಡಾ. ಬಿ. ವಿ. ಶಿರೂರ ಇವರಿಗೆ ಈ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಶಾಸನ, ಗ್ರಂಥ ಸಂಪಾದನೆ, ಜೈನಸಾಹಿತ್ಯ, ವೀರಶೈವ ಸಾಹಿತ್ಯ, ವಚನ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಇವರು ಪ್ರಸಿದ್ಧರಾಗಿದ್ದಾರೆ.” ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಬಿ. ವಿ. ಶಿರೂರ “ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ವ್ಯಾಕರಣ ಮತ್ತು ಛಂದಸ್ಸಿನಂಥ ಶಾಸ್ತ್ರೀಯ ಪಾಂಡಿತ್ಯವುಳ್ಳ ಪಠ್ಯವನ್ನು ವಿಶ್ವವಿದ್ಯಾಲಯಗಳು ಕಡಿತಗೊಳಿಸಿ ಕನ್ನಡ ಭಾಷಾ ಗಟ್ಟಿತನವನ್ನು ಹಾಳು ಮಾಡುತ್ತಿರುವುದು ವಿಷಾದನೀಯ. ವರ್ತಮಾನದಲ್ಲಿ ಯುವಕರಿಗೆ ಗೋವಿಂದ ಪೈ ಮತ್ತು ಸೇಡಿಯಾಪು ಕೃಷ್ಣ ಭಟ್ಟರ ಶಾಸ್ತ್ರೀಯ ಪಾಂಡಿತ್ಯವನ್ನು ಪರಿಚಯಿಸುವ ಕೆಲಸವನ್ನು ಮಾಡಬೇಕು.” ಎಂದರು.
ಅಧ್ಯಕ್ಷತೆ ವಹಿಸಿದ ಡಾ. ವೀರಣ್ಣ ರಾಜೂರ ಮಾತನಾಡಿ “ಡಾ. ಬಿ. ವಿ. ಶಿರೂರ ಅವರು ದೊಡ್ಡ ವಿದ್ವಾಂಸರಾಗಿದ್ದರೂ ಎಲ್ಲಿಯೂ ತಮ್ಮನ್ನು ಗುರುತಿಸಿಕೊಂಡವರಲ್ಲ. ದಕ್ಷಿಣ ಕನ್ನಡದವರು ಇಂಥ ಮಹಾನ್ ಸಂಶೋಧಕರನ್ನು ಗುರುತಿಸಿ ಸನ್ಮಾನಿಸಿರುವುದು ನಮ್ಮನ್ನು ನಾವು ಗೌರವಿಸಿಕೊಂಡಂತೆ.” ಎಂದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕಾಡಸಿದ್ಧೇಶ್ವರ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಉಮಾ ನೆರ್ಲೆ, ಡಾ. ಸಣ್ಣವೀರಣ್ಣ ದೊಡ್ಡಮನಿ, ಡಾ. ಹನುಮಾಕ್ಷಿ ಗೋಗಿ, ಡಾ. ಧನವಂತ ಹಾಜವಗೋಳ, ಸುರೇಶ್ ಹೊರಕೇರಿ, ಎಸ್. ಎಂ. ಪಾಟೀಲ್, ಮಂಜುನಾಥ, ಡಾ. ಜಯಶ್ರೀ ಹಿರೇಮಠ, ಡಾ. ಪ್ರಭಾತಿ, ಕೃತಿಕಾ ಶಿರೂರು, ಗೋವಿಂದ ಪೈ ಸಂಶೋಧನಾ ಕೇಂದ್ರದ ವೆಂಕಟೇಶ್ ನಾಯ್ಕ್, ವಿನೇಶ್ ಮುಂತಾದವರು ಉಪಸ್ಥಿತರಿದ್ದರು.