ಯಲ್ಲಾಪುರ: ಹಿರಿಯ ಪತ್ರಕರ್ತ, ಅಂಕಣಕಾರ, ಅನಂತ ವೈದ್ಯ ಅನಾರೋಗ್ಯದಿಂದಾಗಿ ದಿನಾಂಕ 24-07-2023ರ ಸೋಮವಾರ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಪಟ್ಟಣದ ಹುಲ್ಲೂರ ಮನೆಯಲ್ಲಿರುವ ಸ್ವಗೃಹದಲ್ಲಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿ ವಿಧಾನ ಸಲ್ಲಿಸಲಾಯಿತು.
ಮೃತರು ಮೂಲತ: ಅಂಕೋಲಾ ತಾಲೂಕಿನ ವೈದ್ಯ ಹೆಗ್ಗಾರಿನವರಾಗಿದ್ದು, ಮಡದಿ ಶ್ರೀಮತಿ ವಿಜಯಶ್ರೀ, ಇಬ್ಬರು ಪುತ್ರಿಯರಾದ ಕವಿತಾ, ಸಂಗೀತಾ ಹಾಗೂ ಓರ್ವ ಪುತ್ರ ಕಿರಣ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶ್ರೀಯುತರು ರಾಜ್ಯ ಮಟ್ಟದ ದಿನಪತ್ರಿಕೆಗಳಲ್ಲಿ ವರದಿಗಾರರಾಗಿ ಹಲವು ವರ್ಷ ಕೆಲಸ ಮಾಡಿದ್ದಾರೆ.
ಯಕ್ಷಗಾನದ ಶ್ರೇಷ್ಠ ಕಲಾವಿದರೂ ಅರ್ಥಧಾರಿಗಳೂ ಆಗಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರ ಚಿಂತನೆಗಳನ್ನು ಸಂಗ್ರಹಿಸಿ ‘ಜ್ಞಾನಯಜ್ಞ’ ಎಂಬ ಪುಸ್ತಕವನ್ನು ಸಂಪಾದಿಸಿ ಪ್ರಕಟಿಸಿದ್ದರು. ಇವರು ಬರೆದ ‘ಪಾದುಕಾ ಪ್ರಧಾನ’ ಗ್ರಂಥ ಕೆಲವು ವರ್ಷಗಳ ಹಿಂದೆ ಪ್ರಕಟಗೊಂಡಿದೆ. ಪುರಾಣ ಮತ್ತು ಭಾರತಗಳಲ್ಲಿನ ವಿಶಿಷ್ಟ ಸಂಗತಿಗಳನ್ನಾಧರಿಸಿದ ಅಂಕಣವನ್ನು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಬರೆದಿದ್ದಾರೆ.
ಕನ್ನಡ ಮತ್ತು ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವಿದ್ದ ಜ್ಞಾನಸಾಗರ ಅನಂತ ವೈದ್ಯರು. ಯಕ್ಷಗಾನದ ಮೊಟ್ಟಮೊದಲ ಕಡತೋಕ ಮಂಜುನಾಥ ಭಾಗವತರ ಮಾಸಪತ್ರಿಕ ‘ಯಕ್ಷಗಾನ’ದಲ್ಲಿ ಸಹಸಂಪಾದಕರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳಾಗಿದ್ದ ಇವರು ಶೇಣಿ ಶ್ರೀ ಗೋಪಾಲಕೃಷ್ಣ ಭಟ್, ಶ್ರೀ ಕುಂಬ್ಳೆ ಸುಂದರ ರಾವ್, ಶ್ರೀ ಪ್ರಭಾಕರ್ ಜೋಷಿ, ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರೀ ಮುಂತಾದ ಹಲವು ಅರ್ಥಧಾರಿಗಳ ಜೊತೆ ಹಲವು ಬಾರಿ ವೇದಿಕೆಯನ್ನು ಹಂಚಿಕೊಂಡಿದ್ದರು. ಸ್ನೇಹಶೀಲ ವ್ಯಕ್ತಿತ್ವದ್ದ ಇವರ ನಿಧನಕ್ಕೆ ಹಿರಿಯ ಅರ್ಥದಾರಿ, ವಿದ್ವಾಂಸ ಶ್ರೀ ಪ್ರಭಾಕರ್ ಜೋಷಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.