ಉಡುಪಿ : ಹಿರಿಯ ಪತ್ರಕರ್ತ, ದೂರದರ್ಶನ ಉಡುಪಿ ಜಿಲ್ಲಾ ವರದಿಗಾರ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ ದಿನಾಂಕ 5 ಆಗಸ್ಟ್ 2024ರಂದು ರಾತ್ರಿ ಹೃದಯಾಘಾತದಿಂದ ಕಲ್ಯಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, 2014-17ನೇ ಸಾಲಿನಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು, ಪ್ರಸ್ತುತ ಸಂಘದ ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಉಪಾಧ್ಯಕ್ಷ, ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ಜಿಲ್ಲಾ ಪ್ರತಿನಿಧಿಯಾಗಿರುವ ಇವರು, ಎಸ್.ಕೆ.ಪಿ.ಎ. ಉಡುಪಿ ವಲಯದ ಮಾಜಿ ಅಧ್ಯಕ್ಷರಾಗಿಯೂ, ಉಡುಪಿ ಶ್ರೀಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಸ್ಥಾಪಕ ವಿಶ್ವಸ್ಥರಾಗಿ, ಮಲ್ಪೆ ನಾರಾಯಣ ಗುರು ಸೇವಾದಳ ಅಧ್ಯಕ್ಷರಾಗಿ, ಕಲ್ಮಾಡಿ ಶ್ರೀಬ್ರಹ್ಮಬೈದರ್ಕಳ ಗರಡಿ ಆಡಳಿತ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.