ಬ್ರಹ್ಮಾವರ : ಯಕ್ಷಗಾನ ಬಡಗು ತಿಟ್ಟಿನ ಹಿರಿಯ ಕಲಾವಿದರಾದ ಪೇತ್ರಿ ಮಾಧವ್ ನಾಯ್ಕ್ ಇವರು ದಿನಾಂಕ 05-06-2024ರ ಬುಧವಾರದಂದು ನಿಧನ ಹೊಂದಿದರು. ಇವರಿಗೆ 84 ವರ್ಷ ವಯಸ್ಸಾಗಿತ್ತು.
1940ರಲ್ಲಿ ಬ್ರಹ್ಮಾವರ ತಾಲೂಕಿನ ಪೇತ್ರಿ ಸಮೀಪದ ಹಲುವಳ್ಳಿಯ ವಾಮನ ನಾಯ್ಕ್ ಹಾಗೂ ಮೈದಾ ಬಾಯಿ ದಂಪತಿಗಳ ಪುತ್ರನಾಗಿ ಜನಿಸಿದ ಮಾಧವ ನಾಯ್ಕರಿಗೆ ಯಕ್ಷಗಾನದ ಮದ್ದಳೆಯ ಕ್ರಾಂತಿಕಾರ ಎಂದೇ ಖ್ಯಾತಿಯ ಸೋದರ ಮಾವನಾದ ತಿಮ್ಮಪ್ಪ ನಾಯ್ಕರೇ ಮೊದಲ ಗುರು.
ದಿಗ್ಗಜ ಗುರು ತಿಮ್ಮಪ್ಪ ನಾಯ್ಕರ ಮಾರ್ಗದರ್ಶನದಲ್ಲಿ ಯಕ್ಷರಂಗಕ್ಕೆ ಕಾಲಿಟ್ಟ ಮಾಧವ ನಾಯ್ಕರು ಎಲ್ಲರಿಗೂ ಪ್ರೀತಿಯ ನೆಚ್ಚಿನ ಕಲಾವಿದರಾಗಿದ್ದರು. ಯಕ್ಷಗಾನದ ಹೆಜ್ಜೆಗಾರಿಕೆ ಅಭ್ಯಾಸ ಮಾಡಿದ ಬಳಿಕ ಅಂದಿನ ಪ್ರಸಿದ್ದ ಕಲಾವಿದರಾದ ಭಾಗವತ ತೆಂಗಿನಜೆಡ್ಡು ರಾಮಚಂದ್ರ ರಾಯರು ಹಾಗೂ ಗೋರ್ಪಾಡಿ ವಿಟ್ಠಲ ಪಾಟೀಲರು ಹೆಚ್ಚಿನ ಮಾರ್ಗದರ್ಶನ ನೀಡಿದರು. ತನ್ನ 14ನೇ ವಯಸ್ಸಿನಲ್ಲಿ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿ ಸಾಲಿಗ್ರಾಮ, ಪೆರ್ಡೂರು, ಮೂಲ್ಕಿ, ಅಮೃತೇಶ್ವರಿ ಮೇಳಗಳಲ್ಲಿ ಸುಮಾರು 30ವರ್ಷಗಳ ಕಾಲ ವಿವಿಧ ಪಾತ್ರಗಳಲ್ಲಿ ಯಕ್ಷಗಾನ ಅಭಿಮಾನಿಗಳನ್ನು ರಂಜಿಸಿ ಕಲಾ ಸೇವೆ ಮಾಡಿದ್ದರು. ಉಡುಪಿಯ ಯಕ್ಷಗಾನ ಕೇಂದ್ರದ ಮೂಲಕ ಯಕ್ಷರಂಗದ ತಿರುಗಾಟ ನೆಡೆಸಿದರು. ಡಾ. ಶಿವರಾಮ ಕಾರಂತರ ಮೆಚ್ಚುಗೆ ಪಡೆದು ಅವರ ತಂಡಕ್ಕೆ ಆಯ್ಕೆಯಾಗುವ ಮೂಲಕ ದುಬೈ, ಕೆನಡಾ, ಜಪಾನ್, ರಷ್ಯ, ಇಟಲಿ ಸೇರಿ ಹಲವು ಯುರೋಪ್ ದೇಶಗಳಿಗೆ ತೆರಳಿ ಅಲ್ಲಿನ ಜನರನ್ನು ಬಾಹುಕ, ಘಟೋತ್ಕಚ, ಶೂರ್ಪನಖ ಸೇರಿ ಹಲವು ಬಣ್ಣದ (ರಾಕ್ಷಸ ರಾಕ್ಷಸಿ) ವೇಷಗಳಲ್ಲಿ ಕಾಣಿಸಿಕೊಂಡು ಮೋಡಿ ಮಾಡಿದ್ದರು. ರಾಕ್ಷಸ ಪಾತ್ರಗಳಲ್ಲಿ ಈಗ ಮರೆಯಾಗಿರುವ ಸಂಪ್ರದಾಯಿಕ ಚಿಟ್ಟೆ ಮುಖವರ್ಣಿಕೆ ಬರೆಯುವ ವಿಭಿನ್ನ ಕಲೆ ಮಾಧವ ನಾಯ್ಕರಿಗೆ ಸಿದ್ಧಿಸಿತ್ತು. ಈಗ ಮರೆಯಾಗಿ ಹೋದ ಅನೇಕ ವೇಷಗಳ ವೈಶಿಷ್ಟ್ಯದ ಕುರಿತು ಅನುಭವ ಹೊಂದಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ನೂರಾರು ಸಮ್ಮಾನಗಳಿಗೆ ಭಾಜನರಾಗಿದ್ದ ಇವರು ಇತ್ತೀಚೆಗೆ ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ ಕೀರ್ತಿಶೇಷ ಹಾರಾಡಿ ರಾಮ ಗಾಣಿಗ ಪ್ರಶಸ್ತಿಯನ್ನು ಪಡೆದಿದ್ದರು.
Subscribe to Updates
Get the latest creative news from FooBar about art, design and business.
Previous Articleನೃತ್ಯ ವಿಮರ್ಶೆ | ಅನಘಳ ಯೋಗಭಂಗಿಗಳ ಅನರ್ಘ್ಯ ನೃತ್ಯ ದರ್ಶನ