ಕೋಟ: ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ ಸಂಯೋಜನೆಯಲ್ಲಿ ಸಿನ್ಸ್ 1999 ಶ್ವೇತಯಾನ-59 ಕಾರ್ಯಕ್ರಮದಡಿಯಲ್ಲಿ ರೋಟರಿ ಕ್ಲಬ್ ಕೋಟ ಸಿಟಿ ಸಹಕಾರದೊಂದಿಗೆ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಉಡುಪಿಯ ಕಾರ್ಯಕ್ರಮವಾಗಿ ‘ಸಾಕ್ಷರ ಕಿರಣ’ ಹಾಗೂ ಯಶಸ್ವೀ ಸಂಸ್ಥೆ ಜಂಟಿಯಾಗಿ ಆಯೋಜಿಸಿದ ‘ಶಾಲೆಗಳಲ್ಲಿ ಒಡ್ಡೋಲಗ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 14 ಸೆಪ್ಟೆಂಬರ್ 2024ರಂದು ಮಣೂರು ಪಡುಕೆರೆಯ ಸರಕಾರಿ ಪಿ.ಯು. ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀವಟಿಗೆಗೆ ಎಣ್ಣೆ ಹಾಕುವುದರ ಮೂಲಕ ಉದ್ಘಾಟಿಸಿದ ರೋಟರಿ ಕ್ಲಬ್ ಕೋಟ ಸಿಟಿ ಇದರ ಅಧ್ಯಕ್ಷರಾದ ರೊಟೇರಿಯನ್ ಅನಿಲ್ ಸುವರ್ಣ ಮಾತನಾಡಿ “ಪ್ರಾಥಮಿಕ ಅಭ್ಯಾಸವನ್ನು ಪಡೆದು ಕಲೆಯಲ್ಲಿ ಗಟ್ಟಿಯಾದಾಗ ಸಮಾಜದಲ್ಲಿ ಮನ್ನಣೆ ದೊರೆಯುತ್ತದೆ. ಅಂತಹ ಕಲೆಯನ್ನು ಕಲಿಸುತ್ತಾ ಮಕ್ಕಳನ್ನು ಹೊಂದಿದ ಸಂಸ್ಥೆಯಲ್ಲಿ ಹೆಚ್ಚಿನ ಶಾಲೆಯ ಮಕ್ಕಳು ಶಾಲಾ ಅವಧಿಯ ಬಳಿಕ ಯಕ್ಷಗಾನ ಹಾಗೂ ಇನ್ನಿತರ ಕಲೆಯನ್ನು ಕಲಿಯುವುದಕ್ಕೆ ಯಶಸ್ವೀ ಕಲಾವೃಂದದ ಆಶ್ರಯ ಪಡೆದು ಉನ್ನತಿ ಸಾಧಿಸಿದ್ದಾರೆ. ಕಲೆಯು ಜೀವನದ ಸಂಸ್ಕಾರಗಳಿಗೆ ಅತೀ ಹೆಚ್ಚು ಪೂರಕ. ಪ್ರತಿಯೊಬ್ಬರಲ್ಲಿಯೂ ಕಲೆ ಇರುತ್ತದೆ. ಅದನ್ನು ಇಂತಹ ಸಂಸ್ಥೆಯ ಮೂಲಕ ರೂಪಿಸಿಕೊಂಡು ಬೆಳೆಯಬೇಕು. ಎಂದರು.
ಎಸ್. ಡಿ. ಎಮ್. ಸಿ ಅಧ್ಯಕ್ಷರಾದ ಜಯರಾಮ ಶೆಟ್ಟಿ ಮಾತನಾಡಿ “ಕಲೆಯ ನಾವೀನ್ಯತೆ ನಿರ್ದೇಶಕರ ಕೈಚಳಕದಲ್ಲಿದೆ. ಯಶಸ್ವೀ ಕಲಾವೃಂದವು ಸಾಂಪ್ರದಾಯಿಕ ಯಕ್ಷಕಲೆಯ ಗುರುಗಳಾದ ದೇವದಾಸ್ ರಾವ್ ಕೂಡ್ಲಿ ಇವರು ಹೊಸ ಪರಂಪರೆಗೆ ಹಳೆಯ ಸೊಗಡು ಸೇರಿಸಿ ನವ ಪೀಳಿಗೆಗೆ ಯಕ್ಷಕಲೆಯ ಹೂರಣವಿತ್ತು ರಂಗಕ್ಕೆ ತರುವ ಪ್ರಯತ್ನ ಶ್ಲಾಘನೀಯ.” ಎಂದರು.
ಮುಖ್ಯ ಶಿಕ್ಷಕರಾದ ರಾಮ್‌ದಾಸ್ ನಾಯಕ್ ಪ್ರಾಸ್ತಾವಿಕವಾಗಿ ಮಾತನ್ನಾಡಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮಂಜುನಾಥ ಹೊಳ್ಳ, ಇಂಟರ‍್ಯಾಕ್ಟ್ ಅಧ್ಯಕ್ಷೆ ಅನುಶ್ರೀ, ಕಾರ್ಯದರ್ಶಿ ಪೂರ್ವಿ ಉಪಸ್ಥಿತರಿದ್ದರು. ಶಿಕ್ಷಕರಾದ ರಾಜೀವ್ ಕಾರ್ಯಕ್ರಮ ನಿರೂಪಣೆಗೈದರು. ಬಳಿಕ ‘ಸಾಕ್ಷರ ಕಿರಣ’ ವಯಸ್ಕರ ಸಾಕ್ಷರತಾ ಕಾರ್ಯಕ್ರಮ ಹಾಗೂ ಯಶಸ್ವೀ ಕಲಾವೃಂದದವರಿಂದ ‘ಶಾಲೆಗಳಲ್ಲಿ ಒಡ್ಡೋಲಗ’ ಯಕ್ಷಗಾನದ ಪರಂಪರೆಯ ಒಡ್ಡೋಲಗ ರಂಗದಲ್ಲಿ ಪ್ರಸ್ತುತಿಗೊಂಡಿತು.