ಬೆಂಗಳೂರು : ಬಿ.ಇ.ಎಲ್. ಕುವೆಂಪು ಕಲಾ ಕ್ಷೇತ್ರದ ಆವರಣದಲ್ಲಿ ದಿನಾಂಕ 26-01-2024ರಂದು 75ನೇ ಗಣ ರಾಜ್ಯೋತ್ಸವದ ಅಂಗವಾಗಿ ನಡೆದ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಸಾಮಾಜಿಕ ಜಾಗೃತಿಯ ಕಾಳಜಿಯ ‘ಶಕ್ತಿ ಮಿತ್ರ’ ಎಂಬ ಏಕವ್ಯಕ್ತಿ ಪ್ರದರ್ಶನ ಜರಗಿತು. ಅಭಿನಯಿಸಿದವರು ಬೆಸ್ಕಾಂನ ಕಲಾವಿದ ಮಂಜುನಾಥ ಕಗ್ಗೆರೆ, ತಮ್ಮ ಅಭಿನಯದ ಮೂಲಕ ಸುಮಾರು 40 ನಿಮಿಷಗಳ ಕಾಲ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿ ಸೆರೆ ಹಿಡಿಯುವಲ್ಲಿ ಸಫಲರಾದರು.
‘ಶಕ್ತಿ ಮಿತ್ರ’ ಹೆಸರೇ ಸೂಚಿಸುವಂತೆ ವಿದ್ಯುತ್ ಶಕ್ತಿಯ ಬಳಕೆಗೆ ನಮಗೆಲ್ಲ ನೆರವಾಗುವ ಇಲಾಖೆಯ ಲೈನ್ ಮೆನ್ ಈ ನಾಟಕದ ನಾಯಕ ಮತ್ತು ನಮಗೆಲ್ಲ ಶಕ್ತಿ ಮಿತ್ರ. ಆರಂಭದಲ್ಲಿಯೇ ಎಚ್ಚರದಲ್ಲಿ ಕಾಯ್ದು ಒದಗಿದಕ್ಕೆ ಅಲ್ಲಿ ಕಸುವುಂಟು, ಎಚ್ಚರವಿಲ್ಲದಿರೆ ಸಾವುಂಟು ಪದ ಪುಂಜಗಳ ಎಚ್ಚರಿಕೆಯ ಘಂಟಾನಾದದೊಂದಿಗೆ ತೆರೆದುಕೊಳ್ಳುತ್ತ ಸಾಗುವ ನಾಟಕವು ವಿದ್ಯುತನ್ನು ಅನಿವಾರ್ಯವಾಗಿ ಅಪ್ಪಿಕೊಳ್ಳುತ್ತಿರುವ ಮನುಷ್ಯರು ಆದಕ್ಕಿರುವ ಆಗಾಧ ಶಕ್ತಿಯ ಮುಂದೆ ತೃಣಕ್ಕೆ ಸಮಾನವೆಂದು ಹೆಜ್ಜೆ ಹೆಜ್ಜೆಗೂ ಎಚ್ಚರಿಸುತ್ತಲೇ ಸಾಗುತ್ತದೆ. ಜನನ ಮರಣಗಳ ನಡುವಿನ ಸುಂದರ ಕ್ಷಣಗಳ ಬದುಕನ್ನು ಅನುಭವಿಸಬೇಕಾದರೆ ಎಚ್ಚರ ಅಗತ್ಯ. ದೈತ್ಯ ಶಕ್ತಿಯ ವಿದ್ಯುತ್ತಿನೊಂದಿಗೆ ಸ್ವಲ್ಪ ಮೈ ಮರೆತರೂ ಸಾಕು ಕಾಯದ ದಂಡಿಗೆಯು, ಜೀವದ ಮಡಕೆಯನ್ನು ಸಿಡಲಂತೆರಗಿ ಚೂರು ಚೂರು ಮಾಡಿ ಭಸ್ಮ ಮಾಡಿ ಬಿಡುತ್ತದೆ.
ಲೈನ್ ಮೆನ್ ಸಿದ್ದಪ್ಪ ಈ ಆಗಾಧ ಶಕ್ತಿಯನ್ನು ‘ಕರೆಂಟಮ್ಮ’ ಅಂತಲೇ ಕರೆಯೋದು. ಇವಳೊಂದಿಗೆ ಎಡವಟ್ಟು ಮಾಡಿಕೊಂಡ ಅನೇಕ ಲೈನ್ ಮೆನ್ ಗಳು ಬೆಳಕಲ್ಲಿ ಬೆಳಕಾಗಿ ಹೋಗಿದ್ದಾರೆ. ಅಕಾಲದಲ್ಲಿ ಕಾಲನ ಕರೆಗೆ ಓಗೊಟ್ಟು ಅಗಲಿದ್ದಾರೆ. ಲೈನ್ ಮೆನ್ ಆದವನು ಕಂಬ ಎತ್ತಬೇಕು, ತಂತಿ ಎಳೆಯಬೇಕು. ಅವಳ ಬಗ್ಗೆ ಭಯ ಭಕ್ತಿ ಇಟ್ಕೊಂಡು ಯುಕ್ತಿಯಿಂದ ಜೀವನ ಮಾಡಬೇಕು ಅಂತ ಎಚ್ಚರಿಸುತ್ತಲೇ ವೃತ್ತಿಯನ್ನು ಮಾಡಿ ಎಂದವ ಲೈನ್ ಮೆನ್ ಸಿದ್ದಪ್ಪ.
ಈ ಶಕ್ತಿಮಿತ್ರ ವಿದ್ಯುತ್ ಹರಿಯೋ ತಂತಿ ಮೇಲೆ ನಡೆದರೇನೇ ಎಲ್ಲರ ಮೊಗದಲ್ಲೂ ಖುಷಿ. ಆದರೆ ಈ ಶಕ್ತಿ ಮಿತ್ರರನ್ನು ಸಾವಿನ ಕಣಿವೆಗೆ ಒಯ್ಯೋಕೆ ಮಾರಿ ಕವಣಿ ಬೀಸ್ಕೊಂಡು ನಿಂತಿರ್ತಾಳೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡೇ ಕತ್ತಿಯ ಅಂಚಿನಲ್ಲಿ ನಡೆಯೋ ವಿದ್ಯುತ್ ಮಿಂಚಿನ ಕಾಯಕ ಮಾಡೋದೆ ಸಾಧನೆ. ತಪ್ಪಿದರೆ ವೇದನೆ ರೋದನೆ ಎಂದು ಸಾರುವ ಸಿದ್ದಪ್ಪನೇ ಹೊಸಬರಿಗೆಲ್ಲ ಗುರು. ಒಂದು ಕ್ಷಣ ಕೆರೆಂಟು ಇಲ್ದೇ ಹೋದರೆ ಎಲ್ರೂ ಹಿಡಿಶಾಪ ಹಾಕುವವರೇ. ಕೈಯಲ್ಲಿ ಯಾವಾಗ್ಲೂ ‘ಅರ್ದಿಂಗ್ ರಾಡ್’ ಇರಲಿ. ಅದುವೇ ರಕ್ಷಾಬಂಧ. ಲೈನ್ ಕ್ಲೀಯರ್ ಪಡೆದ ಮೇಲೆ ಲೈನ್ ನಲ್ಲಿ ಕರೆಂಟ್ ಇದೆಯೋ ಇಲ್ಲವೋ ಚೆಕ್ ಮಾಡೋಕೆ ಅದು ಇರಲೇ ಬೇಕು. ಕೈಗಳು ಮತ್ತು ಅರ್ದಿಂಗ್ ರಾಡ್, ಒದ್ದೆಯಾಗದಂತೆ ಎಚ್ಚರ ವಹಿಸಬೇಕು. ರಾಡ್ ಮೇಲೆ ಕಾರ್ಬನ್ ಕೂಡದಂಗೆ ಕ್ಲೀನಾಗಿ ಇಟ್ಕೋಬೇಕು. ಹೀಗೇ ಕಂಬದ ಮೇಲಿದ್ದಾಗ ಮನಸ್ಸು ಕ್ಲೀನ್ ಆಗಿ ಇಟ್ಕೋಬೇಕು ಅಂತ ಬುದ್ಧಿವಾದ ಹೇಳುವ.
ಲೈನ್ ಮೆನ್ ಗಳು ಮಾಡೋ ಕೆಲಸ ಒಂದೇ ಎರಡೇ. ಕಂಬ ಏರಬೇಕು, ಸುರಕ್ಷಾ ಬೆಲ್ಟು ಹಾಕ್ಕೋ ಬೇಕು, ಜೆ.ಓ.ಎಸ್. ಓಪನ್ ಮಾಡಬೇಕು, ಅರ್ಟಿಂಗ್ ಮಾಡಬೇಕು, ಜಂಪ್ ಹಾಕಬೇಕು, ಕ್ರಿಂಪ್ ಮಾಡಬೇಕು, ಫ್ಯೂಜ್ ಹಾಕಬೇಕು, ಕೇಬಲ್ ಜಾಯಿಂಟ್ ಮಾಡಬೇಕು, ಕೇಬಲ್ ಕೆಟ್ಟು ಹೋಗಿದ್ರೆ ಹಾರೆ ಗುದ್ಲಿ ಹಿಡೀಬೇಕು ಹಾಗೂ ಬೆಳೆದಿರುವ ಮರಗಳ ಚೌರಾನೂ ಮಾಡಬೇಕು.
ಪವರ್ ಮೆನ್ಗಳದ್ದು ತಮ್ಮಿ ಕಾಯಕ ಕುರಿತು ಒಂದೇ ಭಾವ. ಕಂಬದ ಮೇಲೆ ಹತ್ತಿ ಮಾಡೋ ಕೆಲಸವೇ ಪೂಜೆ, ಸುರಕ್ಷತಾ ಸಾಮಗ್ರಿಗಳು ಪೂಜೆಯ ಸಲಕರಣೆಗಳು. ಕರೆಂಟಿನೊಂದಿಗಿನ ಧ್ಯಾನ ತಪಸ್ಸು ಅಂತ ಹೇಳ್ತಿದ್ದ ಲೈನ್ ಮೆನ್ ಸಿದ್ದಪ್ಪಣ್ಣ ಮೈಮರವೆಯಿಂದ ಜಾರಿ ಬಿದ್ದು ಅಸು ನೀಗುತ್ತಾನೆ.
ಇನ್ನೊಬ್ಬ ಲೈನ್ ಮೆನ್ ಮಾಡುವ ಎಲ್ಲಾ ಕೆಲಸವನ್ನು ಪ್ರೀತಿಯಿಂದ ಮಾಡುವವ. ಕೆಲಸಕ್ಕೆ ಹೋಗೋದಂದ್ರೆ ಪ್ರಿಯತಮೆಯನ್ನು ಕಾಣೋಕ್ ಹೋಗೋದು. ಹಸಿರು ಯೂನಿಫಾರ್ಮ, ರೇಡಿಯಂ ಜಾಕೀಟು ಹೊಸ ಬಗೆಯ ವೇಷ ಅಂತ ಭಾವಿಸೋದು, ಸುರಕ್ಷತಾ ಕ್ರಮಗಳ ಕಾರ್ಡನ್ನು ಲವರ್ ಕರೆಂಟಮ್ಮಗೆ ಕೊಡಲು ಹೊರಟಿರುವ. ಕೂಲಿಂಗ್ ಕ್ಲಾಸ್ ಸಿಕ್ಕಿಸಿಕೊಂಡು, ಪವರ್ ಮ್ಯಾನ್ ಅಲ್ಲ ಪವರ್ ಸ್ಟಾರ್ ಮ್ಯಾನ್ ಅಂತ ಕರ್ಕೊಂಡು ಎಲ್ಲವನ್ನು ಖುಷಿಯಿಂದ ಮಾಡುವುದು. ವಿದ್ಯುತ್ತಿನ ಕಾಯಕದಲ್ಲಿ ಶವವಾಗದೆ ಶಿವನಾಗುವೆ ಎಂಬ ಎಚ್ಚರಿಕೆಯನ್ನೂ ಹೊದ್ದವ. ಅವನಿಗೆ ಗೊತ್ತು ತನಗೂ ಮನೆ ಇದೆ, ಮಡದಿ, ಮಕ್ಕಳು, ಬಂಧು ಮಿತ್ರರು, ಸಮಾಜ, ಬಾಳು, ಬದುಕು ತನಗಾಗಿಯೂ ಇದೆ ಎಂದು.
ಶಿರಕ್ಕೆ ರಕ್ಷಾಕವಚ, ಮುಕುಟ, ಕೈಗೆ ಕೈ ಗವಸು, ಕಾಲಿಗೆ ಪಾದರಕ್ಷೆ ಇವುಗಳಿರಲೇಬೇಕು. ನಿರ್ಲಕ್ಷಿಸಿದರೆ ವಿದ್ಯುತ್ ಮತ್ತನಾದ ಕಾಲಭೈರವ ಶೂಲದಿಂದ ಇರಿದಾಗ ಏನು ಮಾಡುವುದು, ಎಲ್ಲಿಗೆ ಓಡುವುದು, ಯಾರನ್ನ ಕರೆಯುವುದು ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಪ್ರಜ್ಞೆಯೊಂದಿಗೆ ಕೆಲಸ ಮಾಡಬೇಕೆಂಬ ಅರಿವೂ ಇದೆ. ದಾರಿಯಲ್ಲಿ ಸಿಕ್ಕ ಮುಗ್ಧರಿಗೆ ‘ಕಂಬದ ಹತ್ತಿರ ಹೋಗಬೇಡಿ, ಕಂಬಕ್ಕೆ ದನಕರುಗಳನ್ನು ಕಟ್ಟಬೇಡಿ. ತಂತಿಯನ್ನು ಬಿಗಿದು ಒದ್ದೆ ಬಟ್ಟೆ ಹಾಕಬೇಡಿ, ಮಕ್ಕಳನ್ನು ಕಂಬದ ಹತ್ತಿರ ಆಟ ಆಡೋಕ್ಕೆ ಬಿಡಬೇಡಿ, ಸ್ಟೈಲ್ ನಲ್ಲಿ ಕಂಬಕ್ಕೆ ಒರಗಬೇಡಿ ಕಾಯಂ ಆಗಿ ಮಲಗಿ ಬಿಡ್ತೀರಾ’ ಅಂತ ಪಾಠನೂ ಮಾಡ್ತಿರ್ತಾನೆ ನಮ್ಮ ಲೈನ್ ಮೆನ್ನು.
ಇಂತಹ ಎಚ್ಚರಿಕೆಯ ಅಂಶಗಳನ್ನು ಹಾಸ್ಯ, ಶೋಕ, ಕ್ರೋಧ, ಭಯ, ಜಿಗುಪ್ಸೆಗಳೊಂದಿಗೆ ಭಾವಪರವಶನಾಗಿ ವಿವಿಧ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತ, ತಮ್ಮ ಅಭಿನಯ, ಸ್ಪಷ್ಟ ವಿಚಾರಧಾರೆ ಉಚ್ಛಾರಣೆಗಳೊಂದಿಗೆ ‘ಶಕ್ತಿ ಮಿತ್ರ’ನನ್ನು ಜನಗಳ ಹತ್ತಿರಕ್ಕೆ ಒಯ್ಯುವಲ್ಲಿ ಕಗ್ಗೆರೆ ಮಂಜುನಾಥ ಇವರ ನಿಷ್ಠೆ, ಸಾಮಾಜಿಕ ಕಾಳಜಿ ಹೆಜ್ಞೆ ಹೆಜ್ಞೆಗೂ ಗೋಚರಿಸುತ್ತದೆ.
ನಮ್ಮ ಸಂಸ್ಥೆ, ನಮ್ಮ ಆಸ್ಥೆ; ಅದನ್ನು ರಕ್ತಮುಕ್ತನಾಗಿಸುವಲ್ಲಿ ನಾನು ಆಸಕ್ತ. ಇಂಥ ಸಂಕಲ್ಪ ಮಾಡದೇ ಹೋದರೆ ನಾನು ಜೀವವಿಲ್ಲದ ಅಲ್ಪ ಕಸವಾಗಿ ಬಿದ್ದಿರ್ತೇನೆ ಯಾವುದೋ ವಿದ್ಯುತ್ ತಂತಿಯ ಕೆಳಗೆ. ಈ ಶಬ್ದಗಳು ನಿರಂತರವಾಗಿ ನಮ್ಮೆಲ್ಲರ ಅಂತರಾಳದಲ್ಲಿ ಪ್ರತಿಧ್ವನಿಸುತ್ತ, ನಮ್ಮೆಲ್ಲರ ಕಂಗಳಲ್ಲಿ ಪಸೆಯ ಹಾಗೂ ಕಸಿವಿಸಿಯನ್ನು ಉಂಟು ಮಾಡುವುದಂತೂ ಖಚಿತ. ಇಂಥ ಪ್ರಯೋಗಗಳು ನೂರಲ್ಲ .. ಸಾವಿರವಲ್ಲ .. ನಿರಂತರವಾಗಿ ನಡೆಯುತ್ತಿರಲಿ, ಎಚ್ಚರಿಕೆಯ ಗಂಟೆ ಬಾರಿಸುತ್ತಿರಲಿ.
ಸೂರ್ಯಕಾಂತ ಗುಣಕಿಮಠ
ನಟ – ನಿರ್ದೇಶಕ – ನಾಟಕಕಾರ
ಸೂರ್ಯಕಾಂತ ಗುಣಕಿಮಠ ಇವರು ರಸಾಯನ ಶಾಸ್ತ್ರದ ಉಪನ್ಯಾಸಕರಾಗಿ, ಸರಕಾರಿ ಪದವು ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಅನುಭವ ಪಡೆದವರು. ಕನ್ನಡ ಭಾಷೆಯಲ್ಲಿ ಕಥೆ, ಕವನ ಮತ್ತು ನಾಟಕಗಳನ್ನು ಬರೆಯುವ ಹವ್ಯಾಸ ಇರುವ ಇವರ ಅನೇಕ ಕಥೆಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ‘ನಾನು ನೀವು ಇವರು’, ‘ಕಂದರ’, ‘ನಿನಾದ’ ಇವು ಇವರ ಪ್ರಕಟಿತ ಕವನ ಸಂಕಲನಗಳು. ಇವರ ವ್ಯಂಗ್ಯ ಚಿತ್ರಗಳು ಮತ್ತು ಚಿತ್ರಕಲೆಗಳು ಅನೇಕ ಪ್ರತಿಷ್ಟಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಉತ್ತಮ ನಾಟಕ ರಚನಾಕಾರರು ಹಾಗೂ ನಿರ್ದೇಶಕರಾಗಿದ್ದಾರೆ.
2 Comments
Good
ವಂದನೆಗಳು ರೂವಾರಿ ಬಳಗಕ್ಕೆ.