ಬೆಂಗಳೂರು : ಜನಪದರು ಸಾಂಸ್ಕೃತಿಕ ವೇದಿಕೆ ಹೊಸಕೋಟೆಯವರು ಆಯೋಜಿಸಿರುವ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘ (ರಿ.) ಕಲಾ ತಂಡದಿಂದ ‘ಶಿವ ಸಂಚಾರ -23’ ಮೂರು ದಿನಗಳ ನಾಟಕೋತ್ಸವವನ್ನು ವೇದಿಕೆ ಅಧ್ಯಕ್ಷರಾದ ಕೆ.ವಿ. ವೆಂಕಟರಮಣಪ್ಪ @ ಪಾಪಣ್ಣ ಕಾಟಂ ನಲ್ಲೂರು ದಿನಾಂಕ 19-12-2023ರಂದು ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ಉದ್ಘಾಟಿಸಿದರು. ಮೂರು ದಿನಗಳ ನಾಟಕೋತ್ಸವದಲ್ಲಿ ಈ ಬಾರಿ ವಿಶೇಷ ನಾಟಕಗಳು ಇದ್ದು ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು ಪಾಲ್ಗೊಳ್ಳಲು ಕೋರಿದರು. ಇದೇ ಸಂದರ್ಭದಲ್ಲಿ ಖ್ಯಾತ ನಿರ್ದೇಶಕ ಮಾಲತೇಶ ಬಡಿಗೇರರನ್ನು ಮತ್ತು ಸಂಚಾರದ ವ್ಯವಸ್ಥಾಪಕರಾದ ಜೀವನ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೃತ್ತಿ ರಂಗಭೂಮಿಯ ಪ್ರಸಿದ್ಧ ನಾಟಕ ಬಿಜಾಪುರದ ಕೆ.ಎನ್. ಸಾಳುಂಕೆ ಕೃತಿ ‘ತಾಳಿಯ ತಕರಾರು’ನ್ನು ಬಿಸ್ಮಿಲ್ಲಾಖಾನ್ ರಾಷ್ಟ್ರೀಯ ಪುರಸ್ಕಾರ ಕನ್ನಡಕ್ಕೆ ಮೊದಲ ಬಾರಿಗೆ ತಂದ ಮಾಲತೇಶ ಬಡಿಗೇರರ ನಿರ್ದೇಶನದಲ್ಲಿ ಪ್ರದರ್ಶನ ಕಂಡು ನೆರೆದ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸಿತು. ವೇದಿಕೆ ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ, ಎಂ. ಸುರೇಶ, ಮಮತ, ಚಲಪತಿ, ಮುನಿರಾಜು ಅಗ್ರಹಾರ ಹಾಜರಿದ್ದರು.
ದಿನಾಂಕ 20-12-2023ರಂದು ಸಾಮರಸ್ಯದ ಸಂದೇಶದ ಜಯಂತ್ ಕಾಯ್ಕಿಣಿಯವರ ‘ಜೊತೆಗಿರುವವನು ಚಂದಿರ’ವನ್ನು ಹುಲುಗಪ್ಪ ಕಟ್ಟೀಮನಿ ನಿರ್ದೇಶನದಲ್ಲಿ ಪ್ರದರ್ಶನ ನೀಡಿ ಮಂತ್ರ ಮುಗ್ಧರನ್ನಾಗಿಸಿತು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಜಗದೀಶ್, ಕೆಂಗನಾಳ ಸಿದ್ಧೇಶ್ವರ ನನಸು ಮನೆ- ಎಂ. ಸುರೇಶ, ಚಲಪತಿ, ಮುನಿರಾಜು ಅಗ್ರಹಾರ ಹಾಜರಿದ್ದರು. ನಾಟಕದ ಬಗ್ಗೆ ಹಿರಿಯ ಪ್ರೇಕ್ಷಕರು ವಿಮರ್ಶೆ ಮಾಡಿದರು. ತಂಡದ ಕಲಾವಿದರನ್ನು ಗೌರವಿಸಲಾಯಿತು.
ದಿನಾಂಕ 21-12-2023ರಂದು ನಾಟಕೋತ್ಸವದ ಸಮಾರೋಪದಲ್ಲಿ ವೇದಿಕೆ ಅಧ್ಯಕ್ಷ ಕೆ.ವಿ. ವೆಂಕಟರಮಣಪ್ಪ.@ ಪಾಪಣ್ಣ ಕಾಟಂ ನಲ್ಲೂರು ಭಾರತೀಯ ತತ್ವದರ್ಶನದಲ್ಲಿ ಬುದ್ದ-ಬಸವ-ಗಾಂಧಿ-ಅಂಬೇಡ್ಕರರ ದರ್ಶನ ಜೊತೆಗೆ ಸಾಂಪ್ರದಾಯಕ ಬದುಕು ಸರ್ವರಿಗೆ ಸಮಬಾಳು – ಸಮಪಾಲು, ಸಮಾನತೆ ನಮ್ಮ ಸಂವಿಧಾನಿಕ ಕೊಡುಗೆ” ಎಂದರು. ಬಳಿಕ ಡಾ. ನಟರಾಜ ಬೂದಾಳ್ ರ ‘ಕಲ್ಯಾಣದ ಬಾಗಿಲು’ ನಾಟಕವನ್ನು ಖ್ಯಾತ ನಿರ್ದೇಶಕ ಸಿ. ಬಸವಲಿಂಗಯ್ಯನವ ನಿರ್ದೇಶನದಲ್ಲಿ ಮೂಡಿ ಬಂತು.
‘ತಾಳಿಯ ತಕರಾರು’ :
ತಾಳಿ ಎರಡು ಆತ್ಮಗಳ ಅನುಬಂಧದ ಕೊಂಡಿ. ಅದು ತಾಳ್ಮೆಯ ಸಂಕೇತವೂ ಹೌದು, ಮದುವೆಯ ಮುಖ್ಯ ಆಶಯ ಕುಟುಂಬ ಸಂಸ್ಥೆಯನ್ನು ಎತ್ತಿ ಹಿಡಿಯುವುದು. ತಾಳಿ ಕಟ್ಟುವ ಮೊದಲು ಎದುರಾಗುವ ಅನೇಕ ತರಲೆಗಳ ಹೆಣಿಗೆಯೇ ‘ತಾಳಿಯ ತಕರಾರು’. ಗ್ರಾಮೀಣ ಸಂಸ್ಕೃತಿ ಮತ್ತು ನಗರದ ಅನಾಗರಿಕತೆಯ ವಿಕೃತಿಯನ್ನು ಪ್ರತಿಬಿಂಬಿಸುತ್ತಲೇ ಮದುವೆಯ ಸುತ್ತ ಹೆಣೆದ ಸುಂದರ ಸಾಮಾಜಿಕ ಕಂಪನಿ ನಾಟಕವಿದು. ಬೆಳಗಾವಿಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕಾಲು ಜಾರಿದ ಕನ್ಯೆ ಡಾ. ಸತ್ಯಭಾಮ, ವಿದೇಶದಲ್ಲೂ ಅಧ್ಯಯನ ಮಾಡಿದ ವೈದ್ಯೆ. ತನ್ನ ಕಾಮದಾಟಕ್ಕೆ ಹುಟ್ಟಿದ ಕೂಸನ್ನು ಅನಾಥಾಶ್ರಮಕ್ಕೆ ಕೊಟ್ಟ ದಾನಿ. ಶ್ರೀಮಂತ ದ್ವಾರಕನಾಥನನ್ನು ಗಂಡನನ್ನಾಗಿ ಪಡೆದಿದ್ದರೂ ಸ್ಪುರದ್ರೂಪಿ ಡ್ರೈವರ್ ಅಪ್ಪಣ್ಣನ ಸಂಗಕ್ಕೆ ಹಾತೊರೆಯುವ ವ್ಯಭಿಚಾರಿಣಿ. ಸದ್ಗುಣವಿಲ್ಲದೆ ಎಷ್ಟೇ ಹಣ, ವಿದ್ಯೆ ಇದ್ದರೂ ಗೌರವವಿಲ್ಲ ಎಂಬುದರ ಸಂಕೇತ ಸತ್ಯಭಾಮ. ಬಡವನಾಗಿದ್ದರೂ ಸ್ವಾಮಿನಿಷ್ಠೆಯಿಂದ ಸೇವೆ ಮಾಡುವ ಅಪ್ಪಣ್ಣ ತನ್ನ ಮಾಲೀಕನ ಹೆಂಡತಿಯನ್ನು ತಾಯಿಯ ಸ್ಥಾನದಲ್ಲಿ ಕಂಡು ಗೌರವಿಸುವ ಹೃದಯವಂತ. ಆದರ್ಶವೇ ಅವನ ಬದುಕಿನ ಬಂಡವಾಳ. ಮಕ್ಕಳಿಲ್ಲದ ಕ್ಷೀರಸಾಗರ ಮಾಸ್ತರ ಅನಾಥ ಮಗುವನ್ನು ತನ್ನ ಮಗುವಿನಂತೆ ಸಾಕುವ, ಅವಳ ಮದುವೆ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮದುವೆ ಮಂಟಪದಲ್ಲಿ ಕವಿತಾಳ ಮದುವೆ ಮುರಿದು ಬಿದ್ದಾಗ ಅವಳಿಗೆ ಬಾಳು ಕೊಡುವ ಮಂಜುವಿನ ಆದರ್ಶ ಅನುಕರಣೀಯ.
ವಿವಾಹಪೂರ್ವದಲ್ಲೇ ಪಾರ್ಥಸಾರಥಿಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ ಕವಿತ ಆತನ ನೆನಪಿನಲ್ಲೇ ಕೈಹಿಡಿದ ಮಂಜುವಿನೊಂದಿಗೆ ಸಂಸಾರ ನಡೆಸದೆ ಕನ್ನೆಯಾಗಿಯೇ ಉಳಿಯುವ ಪರಿ ಮೆಚ್ಚುವಂತಹುದು. ಮಂಜುವನ್ನು ಅಪಾರವಾಗಿ ಪ್ರೀತಿಸುವ ಗೀತ ಅನಿರೀಕ್ಷಿತವಾಗಿ ಆತ ಕವಿತಾಳ ಕೈಹಿಡಿದಾಗಲೂ ನೊಂದುಕೊಳ್ಳದೆ ಅವಳ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಕೊಡಿಸುವ ಮತ್ತು ಅವರ ಸಾಂಸಾರಿಕ ಬದುಕನ್ನು ಹಳಿಗೆ ತರುವ ಪ್ರಯತ್ನದಲ್ಲಿ ಮಾದರಿಯಾಗುತ್ತಾಳೆ. ಉತ್ತರ ಕರ್ನಾಟಕದ ಖಡಕ್ಕಾದ, ಕಾವ್ಯಮಯ, ಅಲಂಕಾರಿಕ ಭಾಷೆ ಆಕರ್ಷಕವಾಗಿದೆ. ಪಾರ್ಥಸಾರಥಿಯ ಉಗ್ಗುವಿಕೆ ನೋಡುಗರ ಹಿಗ್ಗುವಿಕೆಗೆ ಕಾರಣವಾಗುತ್ತಿದೆ. ಅಡಿಗೆ ಆಳು ಸುಮಿತ್ರನ ಕಿವುಡುತನ ಪ್ರೇಕ್ಷಕರಿಗೆ ಕಚಗುಳಿ ಇಡುತ್ತದೆ. ತನ್ನ ಕಿವುಡುತನ ಮುಚ್ಚಿಕೊಳ್ಳಲು ಪೆದ್ದುಪೆದ್ದಾಗಿ ಆಡುವ ಮಾತುಗಳು ಹಾಸ್ಯದ ರಸಾಯನ ಜಿನುಗಿಸುತ್ತವೆ. ಬಡವರ ಪ್ರೀತಿಯ ನೀತಿ, ಶ್ರೀಮಂತರ ಅನೀತಿಯ ಪ್ರೀತಿ ಇವುಗಳ ಸಂಘರ್ಷದ ಮಧ್ಯೆ ಮಾನವ ಪ್ರೀತಿ ಗೆಲ್ಲುವುದನ್ನು, ಕೌಟುಂಬಿಕ ಜೀವನದ ಉದಾತ್ತತೆಯನ್ನು ನಾಟಕ ತಿಳಿಸುತ್ತದೆ. ಇಲ್ಲಿ ಬರುವ ಹಾಸ್ಯ, ನೀತಿಬೋಧೆ ಪ್ರೇಕ್ಷಕರನ್ನು ಸೆರೆಹಿಡಿಯುತ್ತವೆ. ರಂಜನೆಯ ಜೊತೆಗೆ ಬೋಧನೆಯನ್ನು ಸಹ ಮಾಡುತ್ತದೆ. ಟೂರಿಸ್ಟ್ ಬಸ್ ಕಾಶಿಗೆ ಹೋಗಿ ಬಂದರೂ ಸಂಸ್ಕೃತ ಪಂಡಿತನಾಗಬಲ್ಲದೆ ಎಂಬ ಧ್ವನಿ ನೋಡುಗರನ್ನು ಸಂಸ್ಕೃತಿಯ ಕಡೆಗೆ ವಾಲುವಂತೆ ಮಾಡುತ್ತದೆ. ಸಂಸ್ಕೃತಿ ಮತ್ತು ವಿಕೃತಿಗಳ ಮಧ್ಯದಲ್ಲಿ ಸಂಸ್ಕೃತಿಯ ಮಹತ್ವವನ್ನು ಮನೋಜ್ಞವಾಗಿ ತಿಳಿಸುತ್ತದೆ. ಹಣ ಮತ್ತು ಗುಣದ ಸಂಘರ್ಷದಲ್ಲಿ ಗುಣ ಗೆಲ್ಲುವ ಆದರ್ಶವಿದೆ. ಅವಗುಣದಿಂದ ತನ್ನ ಮುಖಕ್ಕೆ ಮತ್ತು ಇತರರ ಮುಖಕ್ಕೆ ಮಸಿಬಳಿಯಬಾರದೆಂಬ ನೀತಿಯಿದೆ. ವಿನಯ ವಿವೇಕವಿಲ್ಲದ ವಿದ್ಯೆ ಅಪಾಯಕಾರಿ ಮತ್ತು ಅನರ್ಥಕಾರಿ ಎಂಬುದನ್ನು ಸಾಬೀತುಪಡಿಸುತ್ತದೆ. ವ್ಯಾವಹಾರಿಕತೆಯ ಸೋಲು ಮತ್ತು ತಾತ್ವಿಕತೆ ಹಾಗೂ ಸಾತ್ವಿಕತೆಯ ಗೆಲುವನ್ನು ಸಾರುವ ನಾಟಕ ಸುಖಾಂತವಾಗುತ್ತದೆ. ಈ ಎಲ್ಲ ಆಶಯಗಳನ್ನು ಕಟ್ಟಿಕೊಡುವಲ್ಲಿ ನಿರ್ದೇಶಕ ಮತ್ತು ಕಲಾವಿದರು ಯಶಸ್ವಿಯಾಗಿದ್ದಾರೆ.
‘ಜತೆಗಿರುವನು ಚಂದಿರ’ :
ಪರಂಪರೆಯಿಂದ ಪ್ರಗತಿಯೆಡೆಗೆ, ಗುಲಾಮಗಿರಿಯಿಂದ ಸ್ವಾತಂತ್ರ್ಯದೆಡೆಗೆ, ಅನಕ್ಷರತೆಯಿಂದ ಸಾಕ್ಷರತೆಯೆಡೆಗೆ; ಸಜಾತಿ ಮದುವೆಯಿಂದ ಅಂತರ್ಜಾತಿಯ ಮದುವೆಯೆಡೆಗೆ, ಮದುವೆಯಾಗಿ ಪ್ರೀತಿಸುವುದರಿಂದ ಪ್ರೀತಿಸಿ ಮದುವೆಯಾಗುವೆಡೆಗೆ ನಾಟಕ ಸಾಗುವುದು. ಪರಿವರ್ತನೆಯ ಪರಿಯನ್ನು ನಾಟಕಕಾರ ಜಯಂತ ಕಾಯ್ಕಿಣಿಯವರು ನವಿರಾಗಿ ಹೆಣೆದಿದ್ದಾರೆ. ಸ್ವಾತಂತ್ರ್ಯ ಪೂರ್ವದ ಮಧ್ಯ ಭಾರತದ ಹಳ್ಳಿಯ ಚಿತ್ರಣದ ಮೂಲಕ ಭಾರತೀಯ ಜೀವನ ಸಿದ್ಧಾಂತವಾದ ವಸುಧೈವ ಕುಟುಂಬಕಂ ತತ್ವದ ಉದಾತ್ತತೆಯನ್ನು ಪ್ರತಿಪಾದಿಸುತ್ತದೆ. ಕೈಯಿಂದ ಬಟ್ಟೆ ಹೊಲಿಯುವುದರಿಂದ ಬಟ್ಟೆ ಹೊಲಿಯುವ ಮಿಷನ್ ಕಡೆಗೆ ವಾಲುವ ಮೂಲಕ ಕೈಗಾರಿಕೀಕರಣದ ಸ್ಥಿತ್ಯಂತರವನ್ನು ನಾಟಕ ಧ್ವನಿಸುತ್ತದೆ. ಆಸ್ತಿಕ, ಬಡ ಬಡೇಮಿಯಾ ಕುಟುಂಬದ ಐಕ್ಯತೆ ಮತ್ತು ಮೂರು ಹೆಣ್ಣುಮಕ್ಕಳ ಅಂತರ್ಜಾತಿ ಮದುವೆಗೆ ಅನುಮತಿ ನೀಡುವುದು ಮಾನವ ಪ್ರೀತಿಯ ದ್ಯೋತಕವಾಗಿದೆ. ಬ್ರಿಟೀಷರ ಒಡೆದು ಆಳುವ ನೀತಿಯು ಜಾತಿ, ಧರ್ಮ, ಹೆಣ್ಣು, ಗಂಡು, ಬಡವ, ಶ್ರೀಮಂತ ಮುಂತಾದ ನೆಲೆಯಲ್ಲಿ ಮಾನವ ಜನಾಂಗವನ್ನು ವಿಭಜಿಸುವ ಹುನ್ನಾರನ್ನು ಪ್ರತಿಬಿಂಬಿಸುತ್ತದೆ. ಭಾರತ ಮತ್ತು ಪಾಕಿಸ್ತಾನದ ವಿಭಜನೆಯನ್ನು ಸಂಕೇತಿಸುತ್ತದೆ. ಸಾಂಪ್ರದಾಯಿಕತೆಯಿಂದ ನಿಧಾನವಾಗಿ ಆಧುನಿಕತೆಯೆಡೆಗೆ ಹೊರಳುವ ಜನಜೀವನದ ಪರಿಸ್ಥಿತಿಯನ್ನು ಮಾರ್ದನಿಸುತ್ತದೆ. ನೋವಿಲ್ಲದೆಯೆ ದೇಶದ ವಿಭಜನೆಯಾಗಬೇಕು ಎಂಬ ಸದಾಶಯವನ್ನು ಹೊಂದಿದೆ. ‘ನಮ್ಮ ದೇಶ ನಮ್ಮ ಧರ್ಮ, ಬೇರೆ ದೇಶ ಬೇರೆ ಧರ್ಮ’ ಎಂಬ ಸ್ಥಿತಿಯಲ್ಲಿಯೂ ತಾನು ಜೀವಿಸಿದ ನೆಲಬಿಟ್ಟು ಹೋಗುವಾಗಲೂ ‘ನಮ್ಮ ಅಂಗಳದ ಚಂದ್ರ ನಮ್ಮ ಕೈಬಿಡುವುದಿಲ್ಲ. ಜತೆಗಿರ್ತಾನೆ. ನಾವು ಹೋದಲ್ಲಿ ಬರ್ತಾನೆ. ನಮ್ಮ ಅಂಗಳದೊಳಗಿರ್ತಾನೆ’ ಎಂಬ ಮನೋಸ್ಥೈರ್ಯವು ಪ್ರಕೃತಿ ಪ್ರೇಮ, ನೆಲ, ಜಲ, ಅನಿಲ, ಅನಲ, ಆಗಸಗಳ ಅನುಬಂಧ ನಾಟಕಕ್ಕೆ ರಮ್ಯತೆಯನ್ನು ತಂದುಕೊಟ್ಟಿದೆ. ಗುಳೆ ಹೋಗುವಾಗಲೂ ಮನೆಯಲ್ಲಿ ಕಸಬಿಟ್ಟು ಹೋಗಬಾರದು ಎಂಬ ಆದರ್ಶ ಇಲ್ಲಿದೆ.
ಚಂದಿರ ಬೆಳಕು, ಹೊಳಪು ತಂಪು ಮತ್ತು ಪ್ರೀತಿಯ ಸಂಕೇತ, ಕಾಣದಿರದ ಹಾದಿಗಳಲ್ಲಿ, ದೀಪವಿರದ ರಾತ್ರಿಗಳಲ್ಲಿ ಚಂದಿರ ನಿಮ್ಮ ಕೈಬಿಡದಿರಲಿ ಎಂಬ ಆಶಯ ನಾಟಕದಲ್ಲಿದೆ. ಮಕ್ಕಳೇ ತಂದೆ ತಾಯಿಗಳಿಗೆ, ತಂದೆ ತಾಯಿಗಳೇ ಮಕ್ಕಳಿಗೆ ಚಂದಿರ. ಪರಸ್ಪರ ಪ್ರೀತಿಯೇ ಜೀವನಕ್ಕೆ ತಂಪೆರೆಯುವ ಚಂದಿರ, ಅನಾಥ ಷಫಿಗೆ ಆಶ್ರಯ ಕೊಟ್ಟು ಮಗನಂತೆ ನೋಡುವ, ಪಾಠ ಹೇಳುವ ಅಪರಿಚಿತ ಮಾಸ್ತರಿಗೆ ಊಟ ಕೊಡುವ ನಿದರ್ಶನಗಳು ಉನ್ನತ ಸಂಸ್ಕೃತಿಯ ಚಂದಿರನನ್ನು ಪ್ರದರ್ಶಿಸುತ್ತದೆ. ಜಾತಿ, ಧರ್ಮ, ಬಡವ, ಶ್ರೀಮಂತನೆಂಬ ಭಿನ್ನತೆಯ ಗೋಡೆಗಳನ್ನು ಕೆಡವುವ ಶಕ್ತಿ ಇರುವುದು ಪ್ರೀತಿಗೆ ಮಾತ್ರ ಎಂಬ ಸಂದೇಶ ನಾಟಕದಲ್ಲಿದೆ. ಪ್ರೀತಿ, ನಿಸರ್ಗದ ಮೂಲ ಶಕ್ತಿ ಎಂದರಿಯದವರು ಹಕ್ಕಿ ಹಾಡು, ಚಿಟ್ಟೆ, ಗಿಳಿಗಳೊಂದಿಗೆ ಎಷ್ಟು ವರ್ಷವಿದ್ದರೂ ವಿಭಜಕ ಕೆಲಸಗಳಲ್ಲಿ ತೊಡಗಿರುವವರ ಬಗ್ಗೆ ವಿಷಾದವಿದೆ. ಮದುವೆಗೆ ಹಿರಿಯರ ಅನುಮತಿಗಿಂತ ಆಶೀರ್ವಾದ ಬೇಕು ಎಂಬುದು ತಲೆಮಾರಿನ ಅಂತರದ ಸೂಚಕ. ‘ಹಕ್ಕಿಯೊಂದು ದಾಟಿ ಬಂತು. ಸಪ್ತಸಾಗರ. ಚುಕ್ಕಿಗಳ ಬಲೆಯಲ್ಲಿ ಬಿದ್ದ ಚಂದಿರ’ ಎ೦ಬ ಸಾಲುಗಳ ಮೂಲಕ ನಾಟಕಕಾರರು ಚಂದಿರನ ಬೆಳಕು, ತಂಪು, ಆನಂದ ಮಾನವ ನೀಡಬೇಕು ಎಂಬ ನೀತಿಯನ್ನು ಸಾರಿದ್ದಾರೆ. ಮದುವೆ ಗಂಡು ಹೆಣ್ಣಿನ ಭಾವೈಕ್ಯ. ಅಂತೆಯೇ ಸಾಮಾಜಿಕ, ರಾಜಕೀಯ, ತಾತ್ವಿಕ, ಮನೋವೈಜ್ಞಾನಿಕ ಏಕತೆಯ ನೆಲೆಗಟ್ಟಾಗಬೇಕು. ಕೈಗೆ ಕೈ, ಕಾಲಿಗೆ ಕಾಲು, ಕಣ್ಣಿಗೆ ಕಣ್ಣು ಎಂದಾದರೆ ಇಡೀ ವಿಶ್ವವೇ ಕುರುಡಾಗುತ್ತದೆ. ಯುದ್ಧ, ಹಿಂಸೆಯಿಂದ ವಿಶ್ವದಲ್ಲಿ ಶಾಂತಿ ನೆಲೆಸುವುದಿಲ್ಲ; ಪ್ರೀತಿ, ಪ್ರೇಮಗಳು ಅಹಿಂಸೆಯ ಸಾಧನಗಳಾಗಿ ಮನ-ಮನೆ-ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತದೆ ಎಂಬ ಸಂದೇಶವನ್ನು ಸಾರುವಲ್ಲಿ ಕಲಾವಿದರು ಮತ್ತು ನಿರ್ದೇಶಕರು ಸಫಲರಾಗಿದ್ದಾರೆ.
‘ಕಲ್ಯಾಣದ ಬಾಗಿಲು’ :
“ಸಿದ್ಧನಾಗಿಲ್ಲದಿರಲು ಸಿದ್ಧನಾಗು ಅಭದ್ರತೆಯಲ್ಲಿ ಭದ್ರವಾಗಿರು ನಿನ್ನ ಮನವ ಅಲಂಕರಿಸದೆ ಎದುರಾಗು ಏನನ್ನೂ ಹೊತ್ತು ತರಬೇಡ, ನಿನ್ನನಂತೂ ಬೇಡವೇ ಬೇಡ ನಿನ್ನೆಲ್ಲ ಯೋಚನೆಗಳ ಕೆಳಗಿಟ್ಟು ನೀನಿರುವಂತೆ ಬಾ” – ಸರಹವಾದ
ಕನ್ನಡದ ತಾತ್ವಿಕ ನಕಾಶೆಯಲ್ಲಿ ‘ಕಲ್ಯಾಣದ ಬಾಗಿಲು’ ಒಂದು ವಿಶೇಷವಾದ ಆವರಣ. ಅದು ಅನೇಕ ತತ್ವಪ್ರಸ್ಥಾನಗಳ ಸಂಗಮಭೂಮಿ. ಬೌದ್ಧ, ನಾಥ, ಸಿದ್ಧ, ಆಜೀವಿಕ, ಸೂಫಿ, ಅಚಲ, ವಚನ, ತತ್ವಪದ ಮುಂತಾದ ಶ್ರಮಣಧಾರೆಗಳು ತೆರೆದ ವಿವೇಕದ ಬಾಗಿಲನ್ನು ಇದಿರಾಗುವ ಅಗತ್ಯ ಅ೦ದೂ ಇತ್ತು; ಇಂದೂ ಇದೆ. ಅಲ್ಲಿಗೆ ಬಂದ ತಾತ್ವಿಕರ ಮತ್ತು ಸಾಧಕರ ಕಾಲ್ಪನಿಕ ಇದಿರು-ಬದಿರನ್ನು ಈ ನಾಟಕ ಅನಾವರಣ ಮಾಡುವ ಪ್ರಯತ್ನ ಮಾಡುತ್ತದೆ. ಅದಕ್ಕೆ ಮುನ್ನ ಭಾರತದ ಸಿದ್ಧ ಪರಂಪರೆಯಲ್ಲಿ ಸಿದ್ಧರ ಸಿದ್ಧ ಎನಿಸಿಕೊಂಡ ಸರಹಪಾದರ ಬದುಕಿನ ಒಂದೆರಡು ಘಟನೆಗಳು ಪೂರ್ವರಂಗವಾಗಿ ಬಂದಿವೆ. ಈ ನೆಲದ ಸಾಧಕ ಪ್ರಸ್ಥಾನಗಳ ಒಂದು ವಿಶೇಷವೆಂದರೆ ತಾತ್ವಿಕತೆಗಳಿಗೆ ಬಿಕ್ಕಟ್ಟು ಒದಗಿಬಂದಾಗ ಅವುಗಳನ್ನು ಸರಿದಾರಿಗೆ ತರುವ ಪ್ರಯತ್ನಗಳು ಅವುಗಳ ಒಳಗಿನಿಂದಲೇ ಮೂಡಿ ಬಂದಿವೆ. ಅಷ್ಟೇ ಅಲ್ಲ, ನಮ್ಮ ತಾತ್ವಿಕ, ಸಾಮಾಜಿಕ, ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ‘ಕಲ್ಯಾಣದ’ ಆ ಬಾಗಿಲಿಗೆ ಹೋಗಿ ಬಗೆಹರಿಸಿಕೊಳ್ಳುವುದು ಇಲ್ಲಿಯ ಜಾಯಮಾನ. ಈ ಧಾರೆಗಳು ನಿರಂತರವಾಗಿ ಕಾಪಾಡಿಕೊಂಡು ಬಂದ ಲೋಕಕಾರುಣ್ಯ, ಜಾತ್ಯತೀತ ನಡೆ, ಬಹುತ್ವ ಮುಂತಾದ ತಾತ್ವಿಕ ಎಚ್ಚರಗಳು ಕೇವಲ ಸಾಧಕರ ಕೈಗೋಲುಗಳಾಗದೆ ಸಮೂಹದ ಜೀವನ ವಿಧಾನಗಳಾಗಿವೆ. ಅವುಗಳಿಗೆ ಕುತ್ತು ಬಂದಾಗ ಕಲ್ಯಾಣ ತಲ್ಲಣಿಸಿದೆ. ಮತ್ತೆ ಅದೇ ತಲ್ಲಣಗಳೀಗ ನಡುರಂಗಕ್ಕೆ ಬಂದು ನಿಂತಿವೆ. ಕಲ್ಯಾಣದ ಬಾಗಿಲಿಗೆ ಮತ್ತೆ ತೆರಳುವ ಆಶಯಗಳೂ ಹೆಪ್ಪುಗಟ್ಟುತ್ತಿವೆ. ನಾವು ಬದುಕುತ್ತಿರುವುದು ಸಂಬಂಧದ ಜಗತ್ತು. ಎಲ್ಲರೂ ಇಲ್ಲಿರುವುದನ್ನೆ ಹಂಚಿಕೊಂಡು ಇಲ್ಲಿಯೇ ಬದುಕಬೇಕು. ಅಂತಹ ವಿವೇಕವನ್ನು ಕಮ್ಮಾರನ ಕುಲುಮೆಯಲ್ಲಿ, ಮೋಚಿಯ ಅಡಿಗಲ್ಲ ಮೇಲೆ, ಅಟ್ಟೆಯ ಚುಚ್ಚುವ ಉಳಿಯ ತುದಿಯಲ್ಲಿ ಕೂಡ ಕಾಣಲು ಸಾಧ್ಯ. ಅಂತಹ ಸಾಮರಸ್ಯದ ಜೀವನ ವಿಧಾನದ ಚಾರಿತ್ರಿಕ ಎಳೆಗಳ ನೇಯ್ಗೆ ಈ ನಾಟಕ. ಈ ನಾಟಕದ ಎಲ್ಲಾ ಪಾತ್ರ ಮತ್ತು ಸನ್ನಿವೇಶಗಳು ಕಾಲ್ಪನಿಕವಾದವು.
ಬುದ್ಧ, ವ್ಯಾಧಗೀತೆ, ಯಕ್ಷಪ್ರಶ್ನೆ, ಬಸವಾದಿ ಶರಣರ ಚಳವಳಿ, ಗಾಂಧಿ, ಅಂಬೇಡ್ಕರ್ ಮುಂತಾದವರೆಲ್ಲರ ತತ್ವಗಳನ್ನು ತಿಳಿಸುವ ಭರದಲ್ಲಿ ತತ್ವಗಳ ಭಾರವನ್ನು ಹೊಂದಿದ ತಾರ್ಕಿಕ ನಾಟಕವಾಗಿದೆ. ನೋಡುಗರ ಮೆದುಳಿಗೆ ಸವಾಲಾಗಿದೆ. ಸಂಕೇತ, ರೂಪಕಗಳ ಮೂಲಕವೇ ತತ್ವವನ್ನು ತಿಳಿಸಬಯಸುವ ಗಂಭೀರ ನಾಟಕ, ತತ್ವಸಿದ್ಧಾಂತಗಳನ್ನು ತಿಳಿದು ನಡಾವಳಿಕೆಯಲ್ಲಿ ತಾರದೇ ಅಜ್ಞಾನ ಆವರಿಸಿರುವ ಜ್ಞಾನಜಡರಿಗೆ ಬೆಳಕು ತೋರುವ ದೊಂದಿಯಾಗಿದೆ. ಈ ನಾಟಕ ತನ್ನೊಳಗಿನ ಕಳ್ಳನನ್ನು ಪತ್ತೆಹಚ್ಚಿ ಬಂಧಿಸಲು ಹಾತೊರೆಯುವಂತೆ ಎಚ್ಚರಿಸುವುದು. ಧರ್ಮ ಅಫೀಮಾಗದೆ ತನ್ನಲ್ಲಿನ ಅಷ್ಟಮದ, ಅರಿಷಡ್ವರ್ಗಗಳ ಮತ್ತನ್ನು ಕಳೆದುಕೊಳ್ಳುವ ದಿವ್ಯೌಷಧಿಯಾಗಲೆಂಬ ಆಶಯವಿದೆ. ಇಂದು ಧರ್ಮೋಪದೇಶ ಮಾಡುವ ಸ್ವಾಮಿ, ಸನ್ಯಾಸಿಗಳೆಲ್ಲ ಕತ್ತಿ, ಗುರಾಣಿ, ಬಂದೂಕುಗಳ ಧ್ಯಾನ ಮಾಡಲು ಶುರು ಮಾಡಿದ್ದಾರೆ ಎನ್ನುವ ಮಾತು ಚಿಂತನಾರ್ಹವಾಗಿದೆ. ಸತಿ ಪತಿಯ ಸೇವೆಯಲ್ಲಿಯೇ ಪರಮಾತ್ಮನನ್ನು ಕಾಣುವ ಅಧ್ಯಾತ್ಮದ ಅನುಸಂಧಾನ ಇಲ್ಲಿದೆ. ಕಾಯಕ ಜೀವಿಗಳು ಧ್ಯಾನಸ್ಥ ಸ್ಥಿತಿಯಲ್ಲಿ ನಮ್ಮ ಕರ್ತವ್ಯ ಮಾಡುವುದರ ಮೂಲಕ ಅನುಭವ ಮತ್ತು ಅನುಭಾವಗಳೆರಡನ್ನೂ ಪಡೆಯುತ್ತಿದ್ದಾರೆ. ‘ಮಾಡೋರ ಕಸುಬಿನಾಗೆ, ಸಿಗೋ ಫಲದಾಗೆ ಬುದ್ಧತ್ವ ಇದೆ’. ಇದು ಬದುಕಿನ ಪಾಡು ಮತ್ತು ಹಾಡಿನಲ್ಲಿದೆ. ತತ್ವಪದಗಳ ಹಾಡುಗಾರಿಕೆ ನಾಟಕವನ್ನು ಸಂಗೀತಮಯಗೊಳಿಸಿದೆ. ಹೊಸ ತತ್ವ, ಸಿದ್ಧಾಂತಗಳನ್ನು ಹೇಳಲು ಹೊರಟವರು ಹೊಸ ಪಂಥವಾಗಿ ಗೊಂದಲಕ್ಕೀಡು ಮಾಡಿರುವುದನ್ನು ಈ ನಾಟಕ ಬಿಂಬಿಸುತ್ತದೆ.